ಕುಮುದಾ ಬಿದನೂರು
ಹೊಸನಗರ: ಬಂಗಾರದ ಬೆಲೆಯ ಅಡಕೆ ಬೆಳೆಯುವ ರೈತರ ಮನದಲ್ಲಿ ಆತಂಕ ಮನೆ ಮಾಡಿದೆ. ಬದುಕಿಗೆ ಆಶ್ರಯವಾಗಿದ್ದ ವರ್ಷದ ಉತ್ಪತ್ತಿಗೆ ಸಂಚಕಾರ ಬಂದಿದ್ದು ತೋಟದಲ್ಲಿ ಮಹಾಮಾರಿ ಕೊಳೆ ತನ್ನ ಅಟ್ಟಹಾಸ ಮೆರೆಯುತ್ತಿದೆ. ವರ್ಷದ ಬೆಳೆಯನ್ನೇ ನಂಬಿದ್ದ ರೈತರಿಗೆ ಮುಂದೇನು ? ಎಂಬ ಉತ್ತರವಿಲ್ಲದ ಪ್ರಶ್ನೆ ಕಾಡುತ್ತಿದೆ. ಅವರ ಮನ, ಮನೆಯಲ್ಲಿ ನೀರವ ಮೌನ ವ್ಯಾಪಿಸಿದೆ.
ಹೌದು, ಅಡಕೆ ಬೆಳೆಯುವ ರೈತ ಇಂದು ಆತಂಕದಲ್ಲಿದ್ದಾನೆ. 10 ದಿನಗಳ ಕಾಲ ಎಡೆಬಿಡದೆ ಸುರಿದ ಮಹಾಮಳೆಗೆ ಅಡಕೆಗೆ ಮಹಾಮಾರಿ ಕೊಳೆ ರೋಗ ಭಾದಿಸಿದೆ. ರೈತರು ಕಟ್ಟಿಕೊಂಡ ಕನಸು ಕಣ್ಣೆದುರೇ ನುಚ್ಚುನೂರಾಗುತ್ತಿದೆ.
ಹೊಸನಗರ ತಾಲೂಕಿನ ಘಟ್ಟ ಪ್ರದೇಶ ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಳೆ ಬಿದ್ದಿದೆ. ಈಗಾಗಲೇ 5340 ಮಿಮೀಗೂ ಹೆಚ್ಚು ಮಳೆ ಸುರಿದಿದೆ. ಅದರ ನೇರ ಪರಿಣಾಮ ಅಡಕೆ ಬೆಳೆಯ ಮೇಲೆರಗಿದೆ.
ಸಾಧಾರಣವಾಗಿ ಶೀತ ವಾತಾವರಣ, ಕನಿಷ್ಟ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವಾರ ಕಾಲ ಇದ್ದಲ್ಲಿ ಅಡಕೆಗೆ ಕೊಳೆ ತಗುಲಿತು ಎಂದೇ ಲೆಕ್ಕ. ಅತಿಯಾದ ಮಳೆಗೆ ಸಹಜವಾಗಿಯೇ ಕೊಳೆ ಕಾಣಿಸಿಕೊಂಡಿದೆ. ಬಂದ ಕೊಳೆ ಹತೋಟಿಗೆ ಬಾರದೆ ಮಹಾಮಾರಿಯಾಗಿ ಕಾಡಿದೆ. ಅಡಕೆ ಬೆಳೆಗಾರರ ನೆಮ್ಮದಿಗೆ ಕೊಳ್ಳಿ ಇಟ್ಟಿದೆ.
ನಗರ ಹೋಬಳಿಯಲ್ಲಿ ಕೊಳೆ ಪ್ರಮಾಣ ಹೆಚ್ಚು: ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾದ ತಾಲೂಕಿನ ನಗರ ಹೋಬಳಿಯಲ್ಲಿ ಕೊಳೆ ಪ್ರಮಾಣ ಹೆಚ್ಚಿದೆ. ಪಕ್ಕದ ಹುಂಚಾ ಹೋಬಳಿಯಲ್ಲೂ ಕೊಳೆ ಬಾಧೆ ವ್ಯಾಪಕವಾಗಿದೆ. ನಗರ, ಮಾಸ್ತಿಕಟ್ಟೆ, ಯಡೂರು, ಸಂಪೇಕಟ್ಟೆ, ನಿಟ್ಟೂರು, ಕಾರಗಡಿ, ಸೊನಲೆ ಭಾಗಗಳಲ್ಲಿ ಭಾರೀ ಪ್ರಮಾಣದ ಕೊಳೆ ಕಂಡು ಬಂದಿದೆ. ಮರದ ಎರಡು ಮೂರು ಕೊನೆಗಳು ಕೊಳೆ ಹೊಡೆತಕ್ಕೆ ಕೊಳೆತು ಉದುರಿಬಿದ್ದಿದ್ದು ತೋಟದ ತುಂಬೆಲ್ಲ ಅಡಕೆ ಹಾಸಿ ಹೋಗಿದೆ. ತೋಟ ಭಾಗಶಃ ಕೊಳೆಗೆ ಆಹುತಿಯಾಗಿದೆ. 10 ಕ್ವಿಂಟಲ್ ಬೆಳೆಯುವ ರೈತ 4-5 ಕ್ವಿಂಟಲ್ಗೆ ತೃಪ್ತಿಪಡಬೇಕಿದೆ. ಅಲ್ಲದೆ ರೋಗ ತಗುಲಿದ ಮರಗಳಿಗೆ ಜ್ವರ ಬಂದು ಸಾಯುತ್ತಿವೆ. ಮೊದಲು ನೀರುಗೊಳೆಯಾಗಿ ಕಾಣಿಸಿಕೊಂಡ ಕೊಳೆ ಇದೀಗ ಬೂದುಗೊಳೆಯಾಗಿ ಮಾರ್ಪಾಟಾಗಿದೆ. ರೋಗ ನಿಯಂತ್ರಣ ಮಾಡುವಲ್ಲಿ ರೈತರು ಹರಸಾಹಸ ಪಡುತ್ತಿದ್ದಾರೆ. ಪದೇ ಪದೇ ಔಷಧೋಪಚಾರ ನಡೆಯು ತ್ತಿದ್ದರೂ ಕೊಳೆಯ ಮೆರವಣಿಗೆ ಸಾಗುತ್ತಲೇ ಇದೆ.
ಬೋರ್ಡೋಗೆ ಬಗ್ಗದ ಕೊಳೆ: ಅಡಕೆ ಕೊಳೆ ರೋಗಕ್ಕೆ ಭೋರ್ಡೋ ದ್ರಾವಣ ಪರಿಣಾಮಕಾರಿ ಔಷಧವಾಗಿದೆ. ಈಗಾಗಲೇ ಮೂರು ಸಾರಿ ದ್ರಾವಣ ಸಿಂಪಡಣೆ ಮಾಡಿದರೂ ಕೊಳೆ ಹತೋಟಿಗೆ ಬರುತ್ತಿಲ್ಲ. ಒಮ್ಮೆ ಕಾಣಿಸಿಕೊಂಡ ಕೊಳೆ ಅಷ್ಟು ಸುಲಭವಾಗಿ ತಹಬದಿಗೆ ಬಾರದಾಗಿದೆ. ಕೊಳೆ ಬರುವ ಮುನ್ನವೇ ಔಷಧೋಪಚಾರ ನಡೆದಿದ್ದರೆ ಕೊಳೆ ಇಷ್ಟು ಉಲ್ಬಣಿಸುತ್ತಿರಲಿಲ್ಲ. ಆದರೆ ಔಷಧ ಸಿಂಪಡಣೆಗೆ ಮಳೆ ಅಡ್ಡಿಯಾಗಿದ್ದು ದಿನವೂ ಸುರಿದಿದೆ. ಮಳೆಯಲ್ಲಿಯೇ ಔಷಧ ಹೊಡೆದರೂ ಅದು ಪರಿಣಾಮ ಬೀರಿಲ್ಲ. ಹಠ ಬಿಡದ ರೈತರು ವಿವಿಧ ಔಷಧ ಸಿಂಪಡಣೆಯಲ್ಲಿ ತಲ್ಲೀನರಾಗಿದ್ದಾರೆ.