ಹೊಸನಗರ: ನಿರ್ಗುಣ, ನಿರಾಕಾರ ದೇವರು ಸರ್ವವ್ಯಾಪಿಯಾಗಿರುತ್ತಾನೆ. ಆದರೆ ಭಕ್ತರಿಗೆ, ಉಪಾಸಕರಿಗೆ ದೇವರನ್ನು ಗ್ರಹಿಸಲು ಅಸಾಧ್ಯ. ಆ ಕಾರಣದಿಂದಲೇ ದೇವಾಲಯ, ಪೂಜಾ ಮಂದಿರಗಳಲ್ಲಿ ಆಕಾರದ ಮೂಲಕ ನೆಲೆ ನಿಂತು ದೇವರು ಅನುಗ್ರಹಿಸುತ್ತಾನೆ. ಹೀಗಾಗಿ ದೇವಾಲಯಗಳಿಗೆ ತನ್ನದೇ ಮಹತ್ವವಿದೆ ಎಂದು ಶೃಂಗೇರಿ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಶ್ರೀಗಳು ಆಶೀರ್ವಚಿಸಿದರು.
ತಾಲೂಕಿನ ಇತಿಹಾಸ ಪ್ರಸಿದ್ಧ ಬಿದನೂರು ನಗರದಲ್ಲಿ ನೀಲಕಂಠೇಶ್ವರನ ನೂತನ ಶಿಲಾಮಯ ದೇಗುಲದಲ್ಲಿ ಕುಂಭಾಭಿಷೇಕ ಸಂಪನ್ನಗೊಳಿಸಿ ಅವರು ಆಶೀರ್ವಚನ ನೀಡಿದರು.
ಪೂಜಾ ಮಂದಿರಗಳಲ್ಲಿ ಮಾತ್ರ ದೇವರಿದ್ದರೆ ಸಾಲದು. ನಮ್ಮ ನಮ್ಮ ಮನಸ್ಸಿನಲ್ಲೂ ದೇವರಿರಬೇಕು. ದೇವರು ನೆಲೆ ನಿಂತ ದೇವಸ್ಥಾನಗಳು ಪರಿಶುದ್ಧವಾಗಿರಬೇಕು. ಮಾತ್ರವಲ್ಲ, ಮನಸ್ಸು ಕೂಡ ಪರಿಶುದ್ಧವಾಗಿ ಇರಬೇಕು. ಬಾಹ್ಯ ಮತ್ತು ಅಂತರಂಗ ಶುದ್ಧಿ ಎರಡೂ ಅಗತ್ಯ. ಆಗ ಮಾತ್ರ ದೇವರು ದೇವಸ್ಥಾನ ಮತ್ತು ಮನಸ್ಸನ್ನು ತನ್ನ ಆವಾಸ ಸ್ಥಾನ ಮಾಡಿಕೊಳ್ಳುತ್ತಾನೆ. ನಾವು ಭಗವಂತನ ಆರಾಧನೆಯನ್ನು ಯಾರೊಬ್ಬರಿಗಾಗಿ ಮಾಡುವುದಲ್ಲ. ಆರಾಧನೆ ಮಾಡಿದರೆ ಲಾಭವೂ ನಮಗೆ, ಮಾಡದಿದ್ದರೆ ನಷ್ಟವೂ ನಮಗೇ. ಗುರುಗಳು ಬರುತ್ತಾರೆ ಎಂದಾಗ ಮಾತ್ರ ಶುದ್ಧವಾಗಿಡುವುದಲ್ಲ. ಸದಾಕಾಲ ಶುದ್ಧವಾಗಿರಬೇಕು ಎಂದರು.
ಅಭಿನಂದನೆ: ಶೃಂಗೇರಿ ಪೀಠಕ್ಕು ಬಿದನೂರಿನ ನೀಲಕಂಠೇಶ್ವರ ದೇವಾಲಯಕ್ಕೂ ಅವಿನಾಭಾವ ಸಂಬಂಧವಿದೆ. ಇದಕ್ಕೆ ಸೇತುವಾಗಿ ಕಾರ್ಯ ನಿರ್ವಹಿಸಿದ ವೇದಮೂರ್ತಿ ವಿನಾಯಕ ಉಡುಪರ ಸೇವೆಯ ಬಗ್ಗೆ ಶ್ರೀಗಳು ಶ್ಲಾಘಿಸಿದರು. ಅವರ ಸೇವೆಯನ್ನು ಗುರುತಿಸಿ ಗೌರವಿಸಿ ಸನ್ಮಾನಿಸಿದರು.
ಶ್ರೀಗಳ ಆಶೀರ್ವಾದ: ಸಭಾ ಕಾರ್ಯಕ್ರಮದಲ್ಲಿ ಉತ್ಸವ ಕಾರ್ಯಕ್ರಮಕ್ಕೆ ಶ್ರಮದಾನದ ಮೂಲಕ ಸೇವೆ ಮಾಡಿದ ಮಧು ಕೆಸರೆಮನೆ, ಬಾಬು ಬಾಳೆಕೊಪ್ಪ, ಅಬ್ಟಾಸ್ ನೂಲಿಗ್ಗೇರಿ, ನಾಗರಾಜ ಭಂಡಾರಿ, ಕೃಷ್ಣ ದೇವಾಡಿಗ ಚೀಕಳಿ, ನಾಗರಾಜ ವಾಕೋಡು, ನಾಗರಾಜ ಭಟ್ ಕುಂದಗಲ್ ಸೇರಿದಂತೆ 150 ಕ್ಕು ಹೆಚ್ಚು ಸೇವಾರ್ಥಿಗಳಿಗೆ ಶ್ರೀಗಳು ಗೌರವಿಸಿ ಆಶೀರ್ವದಿಸಿದರು.
ಮಹಾ ರುದ್ರಯಾಗದ ಪೂರ್ಣಾಹುತಿ ಶ್ರೀಗಳ ಸಾನ್ನಿಧ್ಯದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಮಹಾರುದ್ರಯಾಗದ ಸೇವಾಕರ್ತ ರಂಗನಾಥ ಭಾಗವತರನ್ನು ಶ್ರೀಗಳು ಗೌರವಿಸಿದರು.
ಸಭೆಯಲ್ಲಿ ವಸಚಿತ ಹೋಬಳಿದಾರ್ ಕುಟುಂಬ, ಗಿರಿಜಾ ಶಂಕರ್ ಚೆನ್ನೈ, ನೇರುಮಂಗಲ ವೆಂಕಟರಾಮನ್, ಶೃಂಗೇರಿ ಆಸ್ಥಾನ ವಿದ್ವಾನ್ ಶಂಕರ ಸ್ಥಪತಿ, ನೀಲಕಂಠೇಶ್ವರ ಜೀರ್ಣೋದ್ಧಾರ ಟ್ರಸ್ಟ್‌ನ ಸರ್ವ ಸದಸ್ಯರು ಇದ್ದರು.
ತಾಪಂ ಮಾಜಿ ಸದಸ್ಯ ಕೆ.ವಿ. ಕೃಷ್ಣಮೂರ್ತಿ, ವಸುಧಾ ಡಾ| ಚೈತನ್ಯ ಕಾರ್ಯಕ್ರಮ ನಿರ್ವಹಿಸಿದರು.