ಕುಮುದಾ ನಗರ
ಹೊಸನಗರ: ಉತ್ತಮ ಕಾರ್ಯ ನಿರ್ವಹಣೆ ಮೂಲಕ ಹೊಸನಗರ ತಾಲೂಕಿನ ನಗರ ಹೋಬಳಿ ಕೇಂದ್ರದಲ್ಲಿರುವ ನಾಡ ಕಚೇರಿ ರಾಜ್ಯದ ಗಮನ ಸೆಳೆದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸಕಾಲದಲ್ಲಿ ಉತ್ತಮ ಕಾರ್ಯ ನಿರ್ವಹಣೆ ಮಾಡುವ ಮೂಲಕ ರಾಜ್ಯದ ಮೂರನೇ ನಾಡ ಕಚೇರಿಯಾಗಿ ಹೊರಹೊಮ್ಮಿದೆ. ಹೌದು, ಹೋಬಳಿ ಕೇಂದ್ರ ನಗರದಲ್ಲಿರುವ ನಾಡಕಚೇರಿ ಸಕಾಲದಲ್ಲಿ ಇರುವ ವಿವಿಧ ಯೋಜನೆಗಳ ವಿಲೇವಾರಿಯಲ್ಲಿ ಉತ್ತಮ ಕಾರ್ಯ ನಿರ್ವಹಣೆ ತೋರಿದೆ. ಶೇ.96 ರಷ್ಟು ಸಾಧನೆ ಮಾಡುವ ಮೂಲಕ ರಾಜ್ಯದಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದೆ.
ರಾಜ್ಯದಲ್ಲಿ 1000ಕ್ಕಿಂತ ಕಡಿಮೆ ಅರ್ಜಿ ಸ್ವೀಕಾರವಾಗುವ ನಾಡಕಚೇರಿಗಳಲ್ಲಿ ನಗರದ ನಾಡಕಚೇರಿ ಸೆಪ್ಟೆಂಬರ್ -2019ರ ತಿಂಗಳಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ನಿಗ ತ ಅವ ಧಿಗೆ ಮುನ್ನವೇ ವಿಲೇವಾರಿ ಮಾಡಿರುವ ಹಿನ್ನಲೆಯಲ್ಲಿ ಈ ಗೌರವ ಸಿಕ್ಕಿದೆ.
ಉತ್ತಮ ಕಾರ್ಯ ನಿರ್ವಹಣೆಗೆ 3.5 ರಷ್ಟು ಸಿಗ್ಮಾ ಮೌಲ್ಯ ದಾಖಲು: ರಾಜ್ಯದ ಗಮನ ಸೆಳೆದ ಬಿದನೂರು ನಗರದ ನಾಡಕಚೇರಿ ಸೆಪ್ಟೆಂಬರ್ ತಿಂಗಳಲ್ಲಿ 506 ಅರ್ಜಿ ಸ್ವೀಕರಿಸಿದ್ದು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಿ ಗಮನ ಸೆಳೆದಿದೆ. ಶೇ.96.01 ರಷ್ಟು ಸಾಧನೆ ಮಾಡಿ 3.5 ರಷ್ಟು ಸಿಗ್ಮಾ ಮೌಲ್ಯವನ್ನು ದಾಖಲಿಸಿದೆ. ಇಂತಹ ಸಾಧನೆ ಮಾಡಿದ ಮೂರು ಅತ್ಯುತ್ತಮ ನಾಡ ಕಚೇರಿಗಳಲ್ಲಿ ನಗರ ನಾಡ ಕಚೇರಿ ಕೂಡ ಒಂದಾಗಿದ್ದು ರಾಜ್ಯದಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದೆ.
ಸರ್ಕಾರದಿಂದಲೇ ಅಭಿನಂದನೆ: ನಗರ ನಾಡಕಚೇರಿ ಸಾಧನೆ ದಾಖಲಿಸಿರುವುದಕ್ಕೆ ಭೂಮಾಪನ ಇಲಾಖೆ ಆಯುಕ್ತ ಮುನೀಶ್ ಮೌದ್ಗಿಲ್ ನಗರ ನಾಡಕಚೇರಿಯ ಉಪ ತಹಶೀಲ್ದಾರ್ ಸುಧೀಂದ್ರ ಕುಮಾರ ಅವರನ್ನು ಶ್ಲಾಘಿಸಿದ್ದಾರೆ. ಉತ್ತಮ ಕಾರ್ಯದ ಮೂಲಕ ಇತರ ನಾಡಕಚೇರಿಗೆ ಮಾದರಿಯಾಗಿದ್ದೀರಿ. ಮುಂದಿನ ದಿನದಲ್ಲೂ ಇದೇ ಸೇವೆಯನ್ನು ಮುಂದುವರಿಸಿಕೊಂಡು ಹೋಗುವಂತೆ ಹಾರೈಸಿದ್ದಾರೆ.
ಒಟ್ಟಾರೆ ಜನರ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವ ಮೂಲಕ ರಾಜ್ಯದ ಗಮನ ಸೆಳೆದ ನಗರ ನಾಡ ಕಚೇರಿ ನಗರ ಹೋಬಳಿ ಜನರ ಮೆಚ್ಚುಗೆಗೂ ಪಾತ್ರವಾಗಿದೆ.