Advertisement

ಮಲೆನಾಡಿನ ಮಾದರಿ ಕೃಷಿ ಹೊಂಡ

11:00 AM May 04, 2019 | Naveen |

ಹೊಸನಗರ: ಸರ್ಕಾರಿ ಯೋಜನೆಗಳೆಂದರೆ ಕೇವಲ ನಾಮಕಾವಸ್ಥೆಯಾಗಿ ಕಂಡು ಬರುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ಪ್ರಗತಿಪರ ಕೃಷಿಕ ಸರ್ಕಾರದ ಸಹಾಯಧನದೊಂದಿಗೆ ನಿರ್ಮಿಸಿದ ಕೃಷಿ ಹೊಂಡ ಮಾದರಿ ಮಾತ್ರವಲ್ಲ, ಮಲೆನಾಡಿನ ಮಾಡೆಲ್ ಆಗಿ ಹೊರಹೊಮ್ಮಿದೆ.

Advertisement

ಹೌದು, ಎಲ್ಲರ ಗಮನ ಸೆಳೆಯುವಂತ ಕೃಷಿ ಹೊಂಡ ನಿರ್ಮಾಣ ಆಗಿರುವುದು ತಾಲೂಕಿನ ಮೂಡುಗೊಪ್ಪ- ನಗರ ಗ್ರಾಪಂ ವ್ಯಾಪ್ತಿಯ ಬಾಳೆಕೊಪ್ಪ ಗ್ರಾಮದಲ್ಲಿ. ಇಲ್ಲಿಯ ಪ್ರಗತಿಪರ ಕೃಷಿಕ ಸುಬ್ರಹ್ಮಣ್ಯ ಮತ್ತು ಸಹೋದರರು ತೋಟಗಾರಿಕ ಇಲಾಖೆಯ ಸಹಾಯಧನ ಸದ್ಬಳಕೆ ಮಾಡಿಕೊಂಡು ಎಲ್ಲರ ಗಮನ ಸೆಳೆಯುವಂತಹ ಕೃಷಿಹೊಂಡವನ್ನು ನಿರ್ಮಿಸಿದ್ದಾರೆ.

ಏನಿದು ಕೃಷಿಹೊಂಡ: ತೋಟಗಾರಿಕಾ ಬೆಳೆಗಳಿಗೆ ಅಗತ್ಯ ಸಮಯದಲ್ಲಿ ನೀರಿನ ಕೊರತೆ ತಡೆಗಟ್ಟುವ ಸಲುವಾಗಿ ಕೃಷಿ ಹೊಂಡ ನಿರ್ಮಿಸಿ ನೀರು ಸಂಗ್ರಹಿಸಿಟ್ಟುಕೊಂಡು ಬೆಳೆಗೆ ಅಗತ್ಯ ಸಂದರ್ಭದಲ್ಲಿ ನೀರುಣಿಸಲು ಕೃಷಿ ಹೊಂಡ ನಿರ್ಮಾಣ ಮಾಡುವ ಯೋಜನೆಗೆ ತೋಟಗಾರಿಕಾ ಇಲಾಖೆ ಚಾಲನೆ ನೀಡಿದೆ. 21 ಮೀ. ಅಗಲ, 21 ಮೀ. ಉದ್ದ ಮತ್ತು 3 ಮೀ. ಆಳದ ಸುಮಾರು 1ಲಕ್ಷದ 20 ಸಾವಿರ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯದ ಕೃಷಿ ಹೊಂಡ ನಿರ್ಮಿಸಲು ತೋಟಗಾರಿಕಾ ಇಲಾಖೆ ರೂ.75 ಸಾವಿರ ಸಹಾಯಧನ ನೀಡುತ್ತಿದೆ. ಆದರೆ ಸರ್ಕಾರ ನೀಡುವ ಸಹಾಯಧನದಿಂದ ಉತ್ತಮ ಕೃಷಿಹೊಂಡ ನಿರ್ಮಾಣ ಕಷ್ಟ ಸಾಧ್ಯ. ಆದರೆ ರೈತರ ಕಾಳಜಿ ಮತ್ತು ಸ್ವಂತ ಶ್ರಮ ಹೆಚ್ಚು ಹಾಕಿದಲ್ಲಿ ಈ ಯೋಜನೆ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ.

ಮಾದರಿ ಕೆಲಸ: ತೋಟಗಾರಿಕಾ ಯೋಜನೆಯ ಸಹಾಯಧನವನ್ನು ಸದ್ಬಳಕೆ ಮಾಡಿಕೊಂಡ ಬಾಳೆಕೊಪ್ಪದ ಸುಬ್ರಹ್ಮಣ್ಯ ಮತ್ತು ಸಹೋದರರು ವೈಜ್ಞಾನಿಕವಾಗಿ ಹಲವು ಕ್ರಮ ಅಳವಡಿಸಿಕೊಂಡು ನೋಡಲು ಕೂಡ ಕಣ್ಮನ ತಣಿಸುವ ರೀತಿಯಲ್ಲಿ ವಿಶಾಲವಾದ ಕೃಷಿಹೊಂಡ ನಿರ್ಮಿಸಿ ಗಮನ ಸೆಳೆದಿದ್ದಾರೆ. ತಮ್ಮ ಜಮೀನಿನ ಎತ್ತರವಾದ ಪ್ರದೇಶದಲ್ಲಿ ಜಾಗ ಗುರುತಿಸಿಕೊಂಡು ಕೃಷಿಹೊಂಡ ನಿರ್ಮಿಸಲಾಗಿದೆ. ಅಲ್ಲದೆ ಶೇಖರಿಸಿದ ನೀರು ಭೂಮಿಯಲ್ಲಿ ಇಂಗದಂತೆ ಕೃಷಿಹೊಂಡಕ್ಕೆ ಪ್ರರ್ತಿಯಾಗಿ ಟಾರ್ಪಲ್ ಹೊದಿಕೆ ಅಳವಡಿಸಲಾಗಿದೆ. ಸುಮಾರು 1 ಲಕ್ಷದ 20 ಸಾವಿರ ನೀರು ಶೇಖರಿಸಿದ್ದು ಮೂರು ತಿಂಗಳು ಕಾಲ ಮೂರು ಎಕರೆ ಪ್ರದೇಶದಲ್ಲಿರುವ ತಮ್ಮ ಬೆಳೆಗೆ ನೀರುಣಿಸುವುದಕ್ಕೆ ಎಲ್ಲಾ ಕಾಮಗಾರಿಯನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ.

ಮಲೆನಾಡಿಗೂ ಬಂತು ಕೃಷಿಹೊಂಡ: ಕೃಷಿಹೊಂಡಗಳು ಮಳೆಯ ಅಭಾವ ಎದುರಿಸುತ್ತಿರುವ ಬಯಲುಸೀಮೆ ಪ್ರದೇಶಗಳಿಗೆ ಮಾತ್ರ ಎಂಬ ಮಾತಿತ್ತು. ಆದರೆ ಈಗ ಮಲೆನಾಡಲ್ಲೂ ಕೂಡ ಮಳೆ ಅಭಾವ ಕಂಡುಬರುತ್ತಿದೆ. ಬಂದರೂ ಸಕಾಲಕ್ಕೆ ನೀರಿಲ್ಲದೆ ಪರದಾಡುವ ಮಲೆನಾಡ ಕೃಷಿಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಮಲೆನಾಡಲ್ಲೂ ಕೂಡ ಕೃಷಿಹೊಂಡಗಳ ಅಗತ್ಯ ಕಂಡು ಬರುತ್ತಿದ್ದು ಹೊಸನಗರ ತಾಲೂಕಿನಲ್ಲಿ ಕೃಷಿಹೊಂಡ ಪ್ರಯೋಗ ಮಾಡಲಾಗಿದೆ. ತೋಟಗಾರಿಕಾ ಇಲಾಖೆ ಪ್ರಗತಿಪರ ಕೃಷಿಕ ಸುಬ್ರಹ್ಮಣ್ಯರಿಗೆ ಕೃಷಿಹೊಂಡ ನಿರ್ಮಿಸುವ ಅವಕಾಶ ನೀಡಿದೆ. ಇಲಾಖೆಯ ಸಹಕಾರ, ಶ್ರಮ ಕಾಳಜಿಯ ಜೊತೆಗೆ ಸ್ವಂತ ಹಣವನ್ನು ಕೂಡ ವಿನಿಯೋಗಿಸಿ ಕೃಷಿಹೊಂಡ ನಿರ್ಮಿಸಿದ್ದಾರೆ.

Advertisement

ಮಲೆನಾಡಿನ ಮಾಡೆಲ್: ಅತ್ಯಂತ ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ಸುಂದರವಾಗಿ ನಿರ್ಮಾಣ ಕಂಡಿರುವ ಬಾಳೆಕೊಪ್ಪದ ಕೃಷಿಹೊಂಡ ಮಲೆನಾಡಿನ ಮಾಡೆಲ್ ಕೃಷಿಹೊಂಡವಾಗಿ ಹೊರಹೊಮ್ಮಿದೆ. ನೀಡಿದ ಸಹಾಯಧನವನ್ನು ಬಳಸಿಕೊಂಡು ಉತ್ತಮ ಕಾರ್ಯ ನಿರ್ವಹಿಸಿದ ಸುಬ್ರಹಣ್ಯರ ಕಾರ್ಯದ ಬಗ್ಗೆ ತೋಟಗಾರಿಕಾ ಇಲಾಖೆ ಪ್ರಶಂಸೆ ವ್ಯಕ್ತಪಡಿಸಿದೆ.

ಒಟ್ಟಾರೆ ಮಲೆನಾಡು ಪರಿಸರದಲ್ಲಿ ನೀರು ಪೋಲಾಗದಂತೆ ಮತ್ತು ನೀರಿನ ಮಹತ್ವ ಸಾರುವ ನಿಟ್ಟಿನಲ್ಲಿ ನಿರ್ಮಾಣ ಕಂಡ ಬಾಳೆಕೊಪ್ಪದ ಕೃಷಿ ಹೊಂಡ ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರಿನ ಕೊರತೆ ಎದುರಿಸುವ ರೈತರು ಮತ್ತು ಜಮೀನಿನಲ್ಲಿ ನೀರಿನ ಹರಿವು ಇದ್ದರು ಕೂಡ ಬಳಸಿಕೊಳ್ಳಲಾಗದಂತ ಸ್ಥಿತಿಯಲ್ಲಿರುವ ರೈತರು ಸರ್ಕಾರದ ಸಹಾಯಧನದೊಂದಿಗೆ ಇಂತಹ ಕೃಷಿಹೊಂಡ ನಿರ್ಮಿಸಿಕೊಳ್ಳುವುದು ಉತ್ತಮ.

ತೋಟಗಾರಿಕಾ ಇಲಾಖೆ ಕೃಷಿ ಹೊಂಡ ನಿರ್ಮಾಣಕ್ಕೆ ರೂ.75 ಸಾವಿರ ಸಹಾಯಧನ ಸಾಕಾಗಲಿಲ್ಲ. ಆದರೂ ನಾನು ಹಾಗೂ ನನ್ನ ಸಹೋದರರ ಸಹಕಾರದಿಂದ ಉತ್ತಮ ಕೃಷಿಹೊಂಡ ನಿರ್ಮಿಸಲು ಸಾಧ್ಯವಾಯಿತು. ಈಗ ನಿರ್ಮಿಸಿರುವ ಕೃಷಿಹೊಂಡದಿಂದ ತಮ್ಮ ಮೂರು ಎಕರೆಯ ಬೆಳೆಗಳಿಗೆ ಸಕಾಲಕ್ಕೆ ನೀರು ಒದಗಿಸಲು ಅನುಕೂಲವಾಗುತ್ತದೆ.
•ಸುಬ್ರಹ್ಮಣ್ಯ, ಬಾಳೆಕೊಪ್ಪ, ಪ್ರಗತಿಪರ ಕೃಷಿಕ

ಬಾಳೆಕೊಪ್ಪದ ಸುಬ್ರಹ್ಮಣ್ಯ ಮತ್ತು ಸಹೋದರರು ಉತ್ತಮ ಕೃಷಿಕರು. ತೋಟಗಾರಿಕಾ ಇಲಾಖೆಯ ಸಹಾಯಧನವನ್ನು ಉತ್ತಮವಾಗಿ ಸದ್ಬಳಕೆ ಮಾಡಿಕೊಂಡಿದ್ದಾರೆ. ಸುವ್ಯವಸ್ಥಿತವಾಗಿ ಅವರ ಜಮೀನಿನಲ್ಲಿ ನಿರ್ಮಿಸಲಾದ ಕೃಷಿಹೊಂಡ ಮಲೆನಾಡಿನ ಮಾಡೆಲ್ ಕೃಷಿ ಹೊಂಡ ಎನ್ನಲು ಖುಷಿಯಾಗುತ್ತದೆ.
ಸುರೇಶ್‌,
ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ, ಹೊಸನಗರ

ಕುಮುದಾ ಬಿದನೂರು

Advertisement

Udayavani is now on Telegram. Click here to join our channel and stay updated with the latest news.

Next