Advertisement

ಕಿಳಂದೂರು ಸರ್ಕಾರಿ ಶಾಲೆ ಮೇಲ್ಚಾವಣಿ ಕುಸಿತ

11:44 AM Aug 22, 2019 | Naveen |

ಹೊಸನಗರ: ಸರ್ಕಾರಿ ಶಾಲೆಯೊಂದರ ಮೇಲ್ಚಾವಣಿ ದಿಢೀರ್‌ ಕುಸಿತ ಕಂಡಿದ್ದು, ಸಮಯ ಪ್ರಜ್ಞೆಯಿಂದ ಮಕ್ಕಳು ಪಾರಾದ ಘಟನೆ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಕಿಳಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

Advertisement

ಮಕ್ಕಳು ಶಾಲೆಗೆ ಆಗಮಿಸುತ್ತಿದ್ದಂತೆ ಪ್ರಾರ್ಥನೆ ಮುಗಿಸಿ ಕೊಠಡಿಯೊಳಗೆ ಕಲಿಕೆಯಲ್ಲಿ ತೊಡಗಿರುವಾಗ ಮೇಲ್ಛಾವಣಿಯಲ್ಲಾದ ಶಬ್ದವನ್ನು ಮಕ್ಕಳು ಗಮನಿಸಿದ್ದಾರೆ. ಅಲ್ಲದೆ ಪ್ರೀತಂ ಎಂಬ ಬಾಲಕನ ಮೇಲೆ ಮರದ ರೀಪಿನ ತುಂಡು ತುಂಡಾಗಿ ಬಿದ್ದಿದ್ದು, ಕೂಡಲೇ ಮಕ್ಕಳು ಕೂಗಿಕೊಳ್ಳುತ್ತ ಕೊಠಡಿಯಿಂದ ಹೊರಗೆ ಓಡಿ ಬಂದಿದ್ದಾರೆ. ಮಕ್ಕಳು ಕೂಗು ಕೇಳಿಸಿಕೊಂಡ ಶಿಕ್ಷಕರು ಮತ್ತು ಸ್ಥಳೀಯರು ಧಾವಿಸಿದ್ದಾರೆ.

ಸುಮಾರು ಮೂರ್‍ನಾಲ್ಕು ಅಡಿ ಕುಸಿದಿದ್ದ ಮೇಲ್ಚಾವಣಿ ಇನ್ನೇನು ಸಂಪೂರ್ಣ ಕುಸಿಯಬೇಕಿತ್ತು. ಜಾಗೃತಗೊಂಡ ಸ್ಥಳೀಯರು ಮರದ ಗುಜ್ಜನ್ನು ಆಧಾರವಾಗಿಟ್ಟು ಕುಸಿಯುವದನ್ನು ತಡೆದಿದ್ದಾರೆ. ಮೇಲ್ಚಾವಣಿ ಕುಸಿತಕ್ಕೆ ಗೋಡೆ ಬಿರುಕು ಬಿಟ್ಟಿದೆ.

ಶಾಲಾ ಕೊಠಡಿಯಲ್ಲಿ ಒಟ್ಟು 8 ವಿದ್ಯಾರ್ಥಿಗಳಿದ್ದು ಪ್ರೀತಂ ಎಂಬ ಬಾಲಕನ ಮೇಲೆ ಮರದ ತುಂಡು ಬಿದ್ದು ತುಸು ಗಾಯವಾಗಿತ್ತು. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಶಿಕ್ಷಣ ಇಲಾಖೆಯ ಸಿಆರ್‌ಪಿ ಮಂಜನಾಯ್ಕ, ಕರಿಮನೆ ಗ್ರಾಪಂ ಮಾಜಿ ಅಧ್ಯಕ್ಷ ಎನ್‌.ವೈ.ಸುರೇಶ್‌ ಭೇಟಿ ನೀಡಿ ಪರಿಶೀಲಿಸಿದರು.

ಅನಾಹುತವಾಗಿದ್ದರೆ ಯಾರು ಹೊಣೆ?: ಏನೋ ಅದೃಷ್ಟವಶಾತ್‌ ಮಕ್ಕಳಿಗೆ ಹಾನಿ ಸಂಭವಿಸಿಲ್ಲ. ಒಂದು ವೇಳೆ ಹಾನಿಯಾಗಿದ್ದರೆ ಯಾರು ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಮಕ್ಕಳಿಗೆ ಕೊಠಡಿಯೇ ಇಲ್ಲದಂತಾಗಿದೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಮತ್ತು ನೂತನ ಕಟ್ಟಡ ಮಂಜೂರು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಈ ವೇಳೆ ಮುಖ್ಯ ಶಿಕ್ಷಕಿ ಪ್ರಮೀಳಾ, ಗ್ರಾಮಸ್ಥರಾದ ಪ್ರಭಾಕರ್‌, ಕುಮಾರ್‌, ಹಿರಿಯಣ್ಣ, ದೇವೇಂದ್ರ, ದೇವರಾಜ್‌, ರಾಜೇಶ್‌, ವಿನಯ, ರಾಜು, ತಿಮ್ಮಪ್ಪ ಗೌಡ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next