ಹೊಸನಗರ: ತಾಲೂಕಿನ ಜೇನಿ ಗ್ರಾಪಂ ವ್ಯಾಪ್ತಿಯ ಮಸಗಲ್ಲಿ ಸ.10ರಲ್ಲಿ ಅಕ್ರಮವಾಗಿ ಅರಣ್ಯ ಭೂಮಿಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಜನ ಸಂಗ್ರಾಮ ಪರಿಷತ್ತಿನ ಗಿರೀಶ ಆಚಾರಿ ಹಾಗೂ ಅಖೀಲೀಶ್ ಚಿಪ್ಪಳಿ ದೂರಿದ್ದಾರೆ.
ಅರಣ್ಯ ಭೂಮಿಯಲ್ಲಿರುವ ಮರಗಳನ್ನು ಅಕ್ರಮವಾಗಿ ಕಡಿದು, ಬೆಂಕಿ ಹಾಕಿ ವ್ಯವಸ್ಥಿತವಾಗಿ ಕಾಡು ನಾಶ ಮಾಡಿ ಸರ್ಕಾರಿ ಇಲಾಖೆಗಳ ಸಹಕಾರದಿಂದ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಅವರು ಆರೋಪಿಸಿದ್ದಾರೆ.
ಅರಣ್ಯ ಭೂಮಿಯಲ್ಲಿರುವ ನಂದಿ, ಹೊನ್ನೆ ಮತ್ತಿತರರ ಪ್ರಶಸ್ತ ಮರಗಳಿಗೆ ಹಾಡಹಗಲೇ ಕೊಡಲಿ ಹಾಕಿ ಸರ್ವನಾಶ ಮಾಡಲಾಗಿದೆ. ಅಳಿದುಳಿದ ಮರಗಳಿಗೆ ಬೆಂಕಿ ಹಾಕಿ ನಾಶ ಮಾಡಲಾಗಿದೆ. ಸಂರಕ್ಷಿತ ಅರಣ್ಯಕ್ಕೆ ಬೆಂಕಿ ಹಾಕುವುದರಿಂದ ಕಾಡಿನಲ್ಲಿರುವ ಹಾವು, ಸರೀಸೃಪಗಳು ಸೇರಿದಂತೆ ಕಾಡುಪ್ರಾಣಿಗಳು ಸಹ ಬೆಂಕಿಗೆ ಆಹುತಿ ಆಗುತ್ತಿವೆ. ಇದರಿಂದ ಅಪಾರ ಪ್ರಮಾಣದ ಪರಿಸರ ನಾಶವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಕ್ರಮ ಕಲ್ಲು ಗಣಿಗಾರಿಕೆ ಕುರಿತಂತೆ ಅರಣ್ಯ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ, ಪೊಲೀಸ್ ಹಾಗೂ ತಾಲೂಕು ಆಡಳಿತಕ್ಕೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ತಿಳಿಸಿದರು.
ಅರಣ್ಯ ಇಲಾಖೆ ಸಾಥ್: ಮಸಗಲ್ಲಿ ಸ.10ರಲ್ಲಿ ಕಲ್ಲು ಗಣಿಗಾರಿಕೆಗಾಗಿ ಅರಣ್ಯ ನಾಶ ಆಗುತ್ತಿರುವುದನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಸಹ ಯಾವುದೇ ಕ್ರಮ ಜರುಗಿಸಿಲ್ಲ. ಅರಣ್ಯ ಇಲಾಖೆಯ ಅರಣ್ಯ ಉಪ ವಲಯಾಧಿಕಾರಿ, ಅರಣ್ಯ ರಕ್ಷಕರು ಈ ಅಕ್ರಮಕ್ಕೆ ಸಾಥ್ ನೀಡಿ ಸಹಕರಿಸುತ್ತಿದ್ದಾರೆ ಎಂದು ಅವರು ದೂರಿದರು.
ಅರಣ್ಯ ಭೂಮಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸಬೇಕು. ಗಣಿಗಾರಿಕೆ ನಡೆಸುತ್ತಿರುವವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಅರಣ್ಯ ಭೂಮಿ ಅತಿಕ್ರಮ ಮಾಡಿದರೂ ದಂಧೆಕೋರರ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳದ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.