Advertisement

ಹೊಸನಗರ: ಸರ್ಕಾರಿ ಶಾಲೆಗೆ ದಾಖಲಾತಿ ಹೆಚ್ಚಳ

12:26 PM Jun 15, 2019 | Naveen |

ಹೊಸನಗರ: ಪಟ್ಟಣದ ಶಾಸಕರ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್ಕೆಜಿ ಹಾಗೂ ಯುಕೆಜಿಗೆ ಸುಮಾರು 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶ್ವಿ‌ನಿಕುಮರ್‌ ತಿಳಿಸಿದರು.

Advertisement

ಆಂಗ್ಲ ಮಾಧ್ಯಮ ಹಾಗೂ ಎಲ್ಕೆಜಿ ತರಗತಿಗಳನ್ನು ಆರಂಭಿಸಿದ ನಂತರ ಕಳೆದ 4 ವರ್ಷದ ಹಿಂದೆ ಕೇವಲ 130 ವಿದ್ಯಾರ್ಥಿಗಳಿದ್ದ ಶಾಲೆಯು ಈಗ 350ಕ್ಕೆ ತಲುಪಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರ್ಕಾರಿ ಲೆಕ್ಕದ ಪ್ರಕಾರ 25 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರು ಇರಬೇಕು. ಆದರೆ ಕೇವಲ ಸಂಗೀತ, ದೈಹಿಕ ಹಾಗೂ ಮುಖ್ಯ ಶಿಕ್ಷಕರು ಸೇರಿದಂತೆ ಕೇವಲ 8 ಶಿಕ್ಷಕರು ಇದ್ದಾರೆ. ಇನ್ನೂ 16 ಶಿಕ್ಷಕರ ಕೊರತೆ ಇದೆ ಎಂದರು.

ಖಾಸಗಿ ಶಾಲೆಯಲ್ಲಿ ದನದ ದೊಡ್ಡಿಯ ಹಾಗೆ ಸಣ್ಣ ಕೊಠಡಿಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮಕ್ಕೆ ಅವಕಾಶ ನೀಡಿದ ಸರ್ಕಾರ, ಸರ್ಕಾರಿ ಆಂಗ್ಲ ಮಾಧ್ಯಮ ತರಗತಿಗಳಿಗೆ ಕೇವಲ 30 ವಿದ್ಯಾರ್ಥಿಗಳ ಸೇರ್ಪಡೆಗೆ ಮಾತ್ರ ಅವಕಾಶ ನೀಡಿರುವುದು ಅವೈಜ್ಞಾನಿಕ. ಇದರ ಹಿಂದೆ ಖಾಸಗಿ ಶಾಲೆಗಳ ಲಾಭಿ ಇದೆ ಎಂದು ಸಂಶಯ ವ್ಯಕ್ತಪಡಿಸಿದರು.

ಪಟ್ಟಣದ ಹೃದಯ ಭಾಗದಲ್ಲಿರುವ ಈ ಶಾಲೆಗೆ ಕೇವಲ 9 ಕೊಠಡಿ ಇದೆ. ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಆಂಗ್ಲ ಮಾಧ್ಯಮಕ್ಕೆ ಪ್ರತ್ಯೇಕ ಕೊಠಡಿ ಸೇರಿದಂತೆ ಇನ್ನೂ 10ಕ್ಕೂ ಹೆಚ್ಚು ಕೊಠಡಿಗಳ ಅವಶ್ಯಕತೆ ಇದೆ ಎಂದರು.

Advertisement

ಆರ್‌ಟಿಜಿ ಯೋಜನೆ ರದ್ದು ಮಾಡಿರುವ ಸರ್ಕಾರದ ನಿರ್ಧಾರದಿಂದ ಸರ್ಕಾರಿ ಶಾಲೆಗಳ ಗುಣಮಟ್ಟ ಹಾಗೂ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗಳ ಸಂಖ್ಯೆ ಹೆಚ್ಚುತ್ತಿರುವುದು ಶುಭ ಸಂದೇಶ ಆಗಿದೆ ಎಂದು ಅಭಿಪ್ರಾಯಪಟ್ಟರು.

ಇಂಗ್ಲಿಷ್‌ ಮಾಧ್ಯಮ ಬೋಧಿಸಲು ಕನ್ನಡ ಮಾಧ್ಯಮ ಶಿಕ್ಷಕರಿಗೆ ಕಷ್ಟವಾಗುತ್ತಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಇಂಗ್ಲಿಷ್‌ ಮಾಧ್ಯಮದಲ್ಲಿ ಪಾಠ ಮಾಡಲು ಆಂಗ್ಲ ಮಾಧ್ಯಮದಲ್ಲಿ ಕಲಿತ ಶಿಕ್ಷಕರನ್ನು ನೇಮಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯ ಮಾಡಿದರು.

ಈ ಸಾಲಿನಲ್ಲಿ ದಾನಿಗಳ ನೆರವಿನಿಂದ ಹಳೆ ಕಟ್ಟಡದ ಸೂರು, ಮಹಡಿಗಳನ್ನು ಸುಮಾರು ರೂ.3.5 ಲಕ್ಷ ವೆಚ್ಚದಲ್ಲಿ ದುರಸ್ತಿ ಮಾಡಲಾಗಿದೆ. ಪಟ್ಟಣದ ಪ್ರತಿಷ್ಠಿತ ಎಂದು ಹೇಳಿಕೊಳ್ಳುವ ಖಾಸಗಿ ಶಾಲೆಗಳಲ್ಲಿ ಸೂಕ್ತ ತರಬೇತಿ ಇಲ್ಲದ, ಬಿಎಡ್‌, ಡಿಎಡ್‌ ಶಿಕ್ಷಣ ಪಡೆಯದ ಶಿಕ್ಷಕರಿಂದ ಪಾಠ ನಡೆಸುತ್ತಿದ್ದಾರೆ. ಈ ಕುರಿತಂತೆ ಶಿಕ್ಷಣ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ. ಕೂಡಲೇ ಸೂಕ್ತ ತನಿಖೆ ನಡೆಸುವಂತೆ ಅವರು ಆಗ್ರಹಿಸಿದರು.

ಕಂಪ್ಯೂಟರ್‌, ಶುದ್ಧ ಕುಡಿಯುವ ನೀರಿನ ಘಟಕ, ಗುಣಮಟ್ಟದ ಬಿಸಿಯೂಟ, ಸರ್ಕಾರಿ ಶಿಕ್ಷಕರ ಸಹಕಾರದಿಂದ ಅತ್ಯಂತ ಕಡಿಮೆ ಹಣದಲ್ಲಿ ಖಾಸಗಿ ಶಾಲೆಗೆ ಸಮನಾಂತರವಾಗಿ ಪೈಪೋಟಿ ನೀಡುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಲಾಭಿವೃದ್ಧಿ ಸಮಿತಿಯ ನಾಸಿರ್‌, ಸತ್ಯನಾರಾಯಣ, ಪ್ರದೀಪ ಕುಮಾರ, ಶಮೀನಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next