Advertisement

ನೆರೆ ಹಾನಿ ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ಮನೆ!

04:41 PM Jun 15, 2020 | Naveen |

ಹೊಸನಗರ: ಕೋವಿಡ್ ಆತಂಕದ ನಡುವೆ ಈ ವರ್ಷದ ಮಳೆ ಕೂಡ ಆರಂಭವಾಗಿದೆ. ಕಳೆದ ವರ್ಷದ ವರ್ಷಧಾರೆಯ ರುದ್ರನರ್ತನದಿಂದಾದ ಹಾನಿ ಇನ್ನೂ ಹಸಿಯಾಗಿವೇ ಇದೆ. ಹಾನಿಗೊಂಡ ರಸ್ತೆಗಳು ದುರಸ್ತಿಯಾಗಿವೆ. ಆದರೆ ಮನೆ ಕಳೆದುಕೊಂಡ ಸಂತ್ರಸ್ತರು ಮಾತ್ರ ಮನೆ ನಿರ್ಮಾಣವಾಗದೇ ಅತಂತ್ರರಾಗಿ ಉಳಿಯುವಂತಾಗಿದೆ.

Advertisement

ಮನೆ ನಿರ್ಮಾಣಕ್ಕೆ ಅಧಿಕೃತ ಜಾಗದ ಸಮಸ್ಯೆ: ಕಳೆದ ವರ್ಷ ಸುರಿದ ಕುಂಭದ್ರೋಣ ಮಳೆಗೆ ತಾಲೂಕಿನಲ್ಲಿ 232 ಮನೆಗಳು ಹಾನಿಗೊಳಗಾಗಿದ್ದವು. ಅದರಲ್ಲಿ 20 ಮನೆಗಳು ಸಂಪೂರ್ಣ ನೆಲಸಮಗೊಂಡು ಗಂಜಿಕೇಂದ್ರ ಆಶ್ರಯಿಸುವ ಸ್ಥಿತಿ ಬಂದಿತ್ತು. ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹೊಸಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೀಡುವ ಭರವಸೆ ನೀಡಿ ಆದೇಶವನ್ನು ಹೊರಡಿಸಿದ್ದರು. ಆದರೆ ಆರಂಭಿಕವಾಗಿ ಒಂದು ಲಕ್ಷ ಬಂದಿದ್ದು ಬಿಟ್ಟರೆ ಉಳಿದ ಹಣ ಕೈಗೆ ಸಿಗದೆ ಮನೆ ಕಟ್ಟಲಾಗದ ಸ್ಥಿತಿಗೆ ಬಂದಿದ್ದಾರೆ.

ಮನೆಯೂ ಇಲ್ಲ.. ಪರಿಹಾರವೂ ಇಲ್ಲ: ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ಚಿಕ್ಕಪೇಟೆಯಲ್ಲಿ ಧರೆ ಸಮೇತ ಮರ ಬಿದ್ದು ಒಂದು ಮನೆ ಸಂಪೂರ್ಣ ಧ್ವಂಸಗೊಂಡರೆ ಉಳಿದ ಮೂರು ಮನೆಗಳು ಬಿರುಕು ಬಿಟ್ಟು ಜಖಂಗೊಂಡಿದ್ದವು. ಉದಯ, ಬಂಗಾರಿ, ಸುಬ್ರಹ್ಮಣ್ಯ, ಸುರೇಶ ಎಂಬುವವರಿಗೆ ಹೊಸ ಮನೆ ನೀಡುವ ಭರವಸೆ ನೀಡಲಾಗಿತ್ತು. ಈ ಕುಟುಂಬಗಳಿಗೆ ಮೊದಲ ಕಂತಿನ ಹಣ ಕೂಡ ಬಂದಿಲ್ಲ. ಮನೆ ಇಲ್ಲದ ಆತಂಕದಲ್ಲಿ ಈ ವರ್ಷದ ಮಳೆಗಾಲ ಎದುರಿಸುವ ಸಂದಿಗ್ಧ ಸ್ಥಿತಿಗೆ ಬಂದಿದ್ದಾರೆ. ಮಳೆಹಾನಿಯ ಎ- ಕೆಟಗೆರಿಯ 20 ಫಲಾನುಭವಿಗಳಿದ್ದು, ಮನೆಗಳಿಗೆ ರೂ. 9 ಲಕ್ಷ, ಬಿ- ಕೆಟಗೆರಿ 65 ಫಲಾನುಭವಿಗಳಿದ್ದು, ರೂ.34 ಲಕ್ಷ, ಸಿ- ಕೆಟಗೆರೆಯಲ್ಲಿ 165 ಮನೆಗಳಿದ್ದು ರೂ.50 ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ ಎಂಬುದು ಇಲಾಖೆಯ ಮಾಹಿತಿ.

ಮಡೋಡಿ ಸೇತುವೆ ದುರಸ್ತಿ: ರಾಣೇಬೆನ್ನೂರು- ಬೈಂದೂರು- ಕೊಲ್ಲೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಮಡೋಡಿಯ ಬಳಿ ಸೇತುವೆ ದಂಡೆ ಒಡೆದು ತಿಂಗಳು ಗಟ್ಟಲೆ ಮಾರ್ಗ ಬಂದ್‌ ಆಗಿತ್ತು. ನಂತರ ಬರೋಬ್ಬರಿ 42 ಲಕ್ಷ ರೂ. ಖರ್ಚು ಮಾಡಿ ದಂಡೆಯನ್ನು ದುರಸ್ತಿಗೊಳಿಸಲಾಗಿದೆ. ನೂತನ ಸೇತುವೆಗಾಗಿ 5 ಕೋಟಿ ರೂ. ಪ್ರಸ್ತಾಪ ಕಳುಹಿಸಲಾಗಿದೆ. ರ್ಯಾವೆ ಗ್ರಾಮದಲ್ಲಿ ರಸ್ತೆ ಮೇಲೆ ನೀರು ನಿಲ್ಲುವುದನ್ನು ತಪ್ಪಿಸಲು ಮೋರಿಯನ್ನು ನಿರ್ಮಿಸಲಾಗಿದೆ. ಅದನ್ನು ಹೊರತು ಪಡಿಸಿ ಸುಮಾರು 17 ಕಿಮೀ ರಸ್ತೆ ಹಾಳಾಗಿದ್ದು, ದುರಸ್ತಿಗೊಳಿಸಲಾಗಿದೆ.

ಧರೆಗೆರುಳಿದ 1800 ವಿದ್ಯುತ್‌ ಕಂಬಗಳು: ಅತಿ ಹೆಚ್ಚು ಮಳೆ ಬೀಳುವ ಹೊಸನಗರ ತಾಲೂಕಿನಲ್ಲಿ ವಿದ್ಯುತ್‌ ಸಂಪರ್ಕವೇ ಒಂದು ಸವಾಲು. ಪ್ರತಿವರ್ಷ ನೂರಾರು ಕಂಬಗಳು ಮಾಮೂಲಿ ಎಂಬಂತಾಗಿದೆ. ಕಳೆದ ವರ್ಷ ಕಂಡುಬಂದ ವಿಪರೀತ ಗಾಳಿ- ಮಳೆಗೆ 1800 ಹೆಚ್ಚು ವಿದ್ಯುತ್‌ ಕಂಬಗಳು ಧರೆಗುರುಳಿವೆ. ಈ ವರ್ಷ ಹಿಂದಿನ ಎರಡು ತಿಂಗಳ ಅವಧಿಯಲ್ಲಿ ಸುಮಾರು 400 ಕಂಬಗಳು ಧರೆಗುಳಿದಿದ್ದು, ಇನ್ನೂ ಜಾಸ್ತಿಯಾಗುವ ಸಾಧ್ಯತೆ ಕಂಡುಬಂದಿದೆ. ಈಗಾಗಲೇ ಎಲ್ಲಾ ಕಂಬಗಳನ್ನು ಮರುನಿಲ್ಲಿಸಲಾಗಿದೆ.

Advertisement

ಬೆಳೆ ಪರಿಹಾರ: ಕಳೆದ ವರ್ಷದ ಮಳೆ ರೈತರ ಪಾಲಿಗೆ ಶತ್ರುವಾಗಿ ಪರಿಣಮಿಸಿದ್ದು ಬಹುತೇಕ ರೈತರು ಬೆಳೆಯನ್ನು ಕಳೆದುಕೊಂಡಿದ್ದರು. ಬೆಳೆಹಾನಿ ಮಾಡಿಕೊಂಡ ಸುಮಾರು 2966 ಫಲಾನುಭವಿಗಳಿಗೆ ರೂ.1,47,25,547 ಹಣವನ್ನು ಪರಿಹಾರವಾಗಿ ನೀಡಲಾಗಿದೆ.

ಅನರ್ಹರಿಗೆ ಪರಿಹಾರ: ಮನೆ ಹಾನಿಗೊಳಗಾದ ಫಲಾನುಭವಿಗಳಿಗೆ ಮೂರು ಹಂತದ ಪರಿಹಾರವನ್ನು ಘೋಷಿಸಲಾಗಿತ್ತು. ಸಂಪೂರ್ಣ ಮನೆ ಕಳೆದುಕೊಂಡವರಿಗೆ ಹೊಸಮನೆ ಕಟ್ಟಲು 5 ಲಕ್ಷ ರೂ. ಪರಿಹಾರ, ಮನೆಕಟ್ಟಲು ಅವಕಾಶವಿಲ್ಲದಿದ್ದರೆ ರೂ.1 ಲಕ್ಷ ಪರಿಹಾರ, ಶೇ.60 ರಷ್ಟು ಹಾನಿಗೊಳಗಾಗಿದ್ದರೆ ರೂ. 3 ಲಕ್ಷ, ಮತ್ತು ಉಳಿದ ಮನೆಗಳಿಗೆ ಪರಿಶೀಲನೆ ಮಾಡಿ ಪರಿಹಾರ ನೀಡಲು ತೀರ್ಮಾನಿಸಲಾಗಿತ್ತು. ಇದರಲ್ಲಿ ತಮ್ಮ ಪ್ರಭಾವ ಬಳಸಿಕೊಂಡು ಅನರ್ಹರು ಪರಿಹಾರ ಪಡೆದುಕೊಂಡ ಆರೋಪ ಕೂಡ ಸಾರ್ವಜನಿಕ ವಲಯದಲ್ಲಿದೆ.

ಕಳೆದ ವರ್ಷದ ಮಳೆಗೆ ಧರೆ ಸಹಿತ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ನೆಲಸಮವಾಗಿದೆ. ಕೆಲಸಮಯ ಗಂಜಿ ಕೇಂದ್ರದಲ್ಲಿದ್ದೆವು. ಹೊಸಮನೆ ನಿರ್ಮಾಣ ಇರಲಿ. ಬಿಡಿಗಾಸು ಪರಿಹಾರ ಕೂಡ ನಮಗೆ ಬಂದಿಲ್ಲ. ಮತ್ತೆ ಮಳೆ ಆರಂಭವಾಗಿದೆ. ನಮ್ಮನ್ನು ಕೇಳುವವರೇ ಇಲ್ಲವಾಗಿದೆ.
ಸುರೇಶ್‌, ಚಿಕ್ಕಪೇಟೆ,
ಮನೆ ಕಳೆದುಕೊಂಡವರು

ಹೊಸಮನೆ ನೀಡುವ ಮುಖ್ಯಮಂತ್ರಿಗಳ ಆದೇಶ ಪ್ರತಿ ಮಾತ್ರ ನಮ್ಮ ಕೈಯಲ್ಲಿದೆ. ಆರಂಭದಲ್ಲಿ 1 ಲಕ್ಷ ರೂ. ಪರಿಹಾರ ಬಂದಿದೆ. ಆಮೇಲೆ ಗೋಡೆ ಕಟ್ಟಿ ಅಂದ್ರು, ಅದು ಆಯ್ತು, ಇದೀಗ ಮೇಲ್ಛಾವಣಿ ಮಾಡಿಕೊಳ್ಳಿ ಅಂತಿದಾರೆ. ನಮ್ಮ ಕೈಯಲ್ಲಿ ಹಣವಿಲ್ಲ. ಏನ್ಮಾಡೋದು ಸ್ವಾಮಿ?
ಮಲ್ಲಿಕಾರ್ಜುನಪ್ಪ ಗೌಡರು,
ಬಿದರಹಳ್ಳಿ

ಮಳೆಹಾನಿ ಪರಿಹಾರ ನೀಡುವುದರಲ್ಲಿ ಯಾವುದೇ ವಿಳಂಬವಾಗಿಲ್ಲ. ಆದರೆ ಅಧಿಕೃತ ಜಾಗದ ಸಮಸ್ಯೆ ಕಾರಣ ಹೊಸ ಮನೆ ನೀಡುವಲ್ಲಿ ಗೊಂದಲವಿದೆ. ಎ,ಬಿ,ಸಿ ಕೆಟಗರಿ ಆಧಾರದಲ್ಲಿ ಪರಿಹಾರ ವಿತರಿಸಲಾಗಿದೆ.
ಪ್ರವೀಣಕುಮಾರ್‌,
ಇಒ, ತಾಪಂ ಹೊಸನಗರ

ಹೊಸನಗರ ತಾಲೂಕಿನಲ್ಲಿ 232 ಮನೆಗಳು ಹಾನಿಗೊಳಗಾಗಿವೆ. ಇವುಗಳನ್ನು ಎ,ಬಿ,ಸಿ ಮಾದರಿಯಲ್ಲಿ ವಿಂಗಡಿಸಲಾಗಿದ್ದು, ಎ- ಕೆಟಗರಿಯ 20 ರಲ್ಲಿ 9 ಮನೆಗಳಿಗೆ, ಬಿ- ಕೆಟಗರಿಯಲ್ಲಿ 45ರಲ್ಲಿ 13 ಮನೆಗಳಿಗೆ, ಸಿ- ಕೆಟಗರಿಯ 165 ಮನೆಗಳಲ್ಲಿ ಎಲ್ಲರಿಗೂ ಪರಿಹಾರ ವಿತರಿಸಲಾಗಿದೆ.
ವಿ.ಎಸ್‌.ರಾಜೀವ್‌,
ತಹಶೀಲ್ದಾರ್‌ ಹೊಸನಗರ

ಕುಮುದಾ ನಗರ

Advertisement

Udayavani is now on Telegram. Click here to join our channel and stay updated with the latest news.

Next