Advertisement

ಅಪಾಯಕಾರಿ ಶಾಲಾ ಕಟ್ಟಡ ತೆರವಿಗೆ ಆಗ್ರಹ

10:55 AM Jun 20, 2019 | Team Udayavani |

ಹೊಸನಗರ: ನಾದುರಸ್ತಿಯಲ್ಲಿರುವ ರಿಪ್ಪನ್‌ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವನ್ನು ತೆರವುಗೊಳಿಸುವ ಆದೇಶ ಪಾಲಿಸದ ಕ್ಷೇತ್ರ ಶಿಕ್ಷಣಾಧಿಕಾರಿ ಧೋರಣೆ ಖಂಡಿಸಿ ಹೊರಾಟಗಾರ ಟಿ.ಆರ್‌. ಕೃಷ್ಣಪ್ಪ ಬುಧವಾರ ಸಾರ್ವಜನಿಕ ಶಿಕ್ಷಣಾಧಿಕಾರಿ ಕಚೇರಿ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದೇಶಕರು ಮೇ 21ರಂದು ಶಾಲಾ ಮಕ್ಕಳ ಜೀವಕ್ಕೆ ಅಪಾಯ ತರುವ ಸ್ಥಿತಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡವನ್ನು ತೆರವುಗೊಳಿಸಲು ಆದೇಶ ನೀಡಿದ್ದಾರೆ.

ಆದರೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಜಕೀಯ ಒತ್ತಡದ ಕಾರಣ ಅನುಷ್ಠಾನ ಮಾಡುತ್ತಿಲ್ಲ ಎಂಬುದು ಪ್ರತಿಭಟನೆ ಕಾರಣ ಆಗಿದೆ ಎಂದರು.

ಮಳೆ ಬಂದರೆ ಮೇಲಿನ ಸೂರು, ಗೋಡೆಯು ಶಾಲಾ ಮಕ್ಕಳ ಮೇಲೆ ಬಿದ್ದು ಪ್ರಾಣಹಾನಿ ಆಗುತ್ತದೆ. ತಮ್ಮ ಮೇಲಿನ ವೈಯಕ್ತಿಕ ದ್ವೇಷದಿಂದ ಇಲಾಖಾ ಮುಖ್ಯಸ್ಥರು ಅರೆಬರೆ ಕಿತ್ತು ತೆಗೆದ ಕಟ್ಟಡವನ್ನು ಪೂರ¡ವಾಗಿ ತೆರವುಗೊಳಿಸಲು ಮುಂದಾಗುತ್ತಿಲ್ಲ ಎಂದು ದೂರಿದರು.

ಬಡಮಕ್ಕಳ ಜೀವಕ್ಕೆ ಸಂಚಕಾರ ತರುವ ಈ ಕಟ್ಟಡವನ್ನು ತೆರವುಗೊಳಿಸಿ. ಅದೇ ಸ್ಥಳದಲ್ಲಿ ಶಾಸಕರ ಅನುದಾನದಲ್ಲಿ ಮಂಜೂರಾದ ರೂ.17.40 ಲಕ್ಷ ವೆಚ್ಚದ 2 ಕೊಠಡಿಯನ್ನು ನಿರ್ಮಿಸುವಂತೆ ಅವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

Advertisement

ಈ ಸರ್ಕಾರಿ ಶಾಲೆಯು ಶತಮಾನ ಕಂಡಿದ್ದರೂ ಸಹ ಇಲ್ಲಿಯ ತನಕ ಸ್ಥಳ ಮಂಜೂರಾತಿ ಮಾಡಿಸಿಕೊಂಡಿಲ್ಲ. ಶಾಲಾ ನಿವೇಶನ ಗ್ರಾಪಂ ಹೆಸರಿನಲ್ಲಿದೆ. ಕೂಡಲೇ ಇಲಾಖೆ ತಮ್ಮ ಇಲಾಖೆಗೆ ಮಂಜೂರು ಮಾಡಿಸಿಕೊಳ್ಳಬೇಕು. ಶಾಲಾ ನಿವೇಶನ ಪರಭಾರೆ ಆಗದಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸರ್ಕಾರಿ ಶಾಲೆಯಲ್ಲಿರುವ ಬಡ ಮಕ್ಕಳಿಗಾಗಿ ಈ ಹೋರಾಟ ವಿನಃ, ತಮಗೆ ಈ ವಿಷಯದಲ್ಲಿ ಶಾಸಕರಲ್ಲಾಗಲಿ, ಗ್ರಾಪಂ, ಶಾಲಾಭಿವೃದ್ಧಿ ಸಮಿತಿ ಜತೆ ಸಂಘರ್ಷ ಇಲ್ಲ ಎಂದರು.

ಶಿಕ್ಷಣ ಇಲಾಖೆ ಸ್ಪಷ್ಟನೆ: ಶಾಲಾ ಕಟ್ಟಡ ಕುರಿತಂತೆ ಶಾಲಾಭಿವೃದ್ಧಿ ಸಮಿತಿ, ಪೋಷಕರು, ಜನಪ್ರತಿನಿಧಿಗಳ ನಡುವೆ ಭಿನ್ನಾಬಿಪ್ರಾಯ ಇದೆ. ಈ ಕುರಿತಂತೆ 3 ಬಾರಿ ಸಭೆ ನಡೆಸಿದರೂ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯ ಆಗಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಪ್ಪ ಗೌಡ ಸ್ಪಷ್ಟನೆ ನೀಡಿದರು.

ಶಾಲಾ ನಿವೇಶನ ಇಲಾಖೆಯ ಹೆಸರಿನಲ್ಲಿ ಇಲ್ಲ. ಈ ಕಟ್ಟಡ ಕುರಿತಂತೆ ಮೂರು ವಿಭಿನ್ನ ಅಭಿಪ್ರಾಯ ಇದೆ. 1.ಕೆಲವರು ಅದೇ ಕಟ್ಟಡಕ್ಕೆ ಸೂರು ಮಾಡಿಸಲು, 2. ಕಟ್ಟಡ ತೆರವುಗೊಳಿಸಿದ ನಂತರ ಅದೇ ಸ್ಥಳದಲ್ಲಿ ಕಟ್ಟಡ ಮರು ನಿರ್ಮಾಣ. 3. ಕಟ್ಟಡ ತೆರವುಗೊಳಿಸಿದ ನಂತರ ಬೇರೊಂದು ಸ್ಥಳದಲ್ಲಿ ಕಟ್ಟಡ ನಿರ್ಮಿಸಿ ಎಂಬ ಅಭಿಪ್ರಾಯ ಇದೆ ಎಂದರು. ಶಾಲಾ ವಿಷಯದಲ್ಲಿ ರಾಜಕೀಯ ಬಿಟ್ಟು ಎಲ್ಲರೂ ಒಟ್ಟಾಗಿ ಬಂದು ಒಮ್ಮತದ ತೀರ್ಮಾನಕ್ಕೆ ಬಂದರೆ ತಾಲೂಕು ಅಧಿಕಾರಿಯಾಗಿ ಕೆಲಸ ಪ್ರಾಮಾಣಿಕವಾಗಿ ಅನುಷ್ಠಾನ ಮಾಡುತ್ತೇನೆ. ಈ ಕುರಿತಂತೆ ಇನೊಂದು ಸುತ್ತಿನ ಸಭೆಯನ್ನು ಶೀಘ್ರದಲ್ಲಿ ಕರೆಯಲಾಗುವುದು ಎಂದು ಪತ್ರಿಕೆಗೆ ತಿಳಿಸಿದರು.

ಜಿದ್ದು ಬೇಡ, ಸಹಕರಿಸಿ ಶಾಸಕರೇ!
ಶಾಲಾ ಮಕ್ಕಳ ಜೀವಕ್ಕೆ ಸಂಚಕಾರ ತರುವ ವಿಷಯದಲ್ಲಿ ಶಾಸಕರು ತಮ್ಮ ಮೇಲೆ ಯಾರದೋ ಮಾತುಕಟ್ಟಿಕೊಂಡು ಜಿದ್ದಿಗೆ ಬೀಳಬಾರದು. ಶಾಸಕರೇ ಮುಂದೆ ನಿಂತು ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ, ಕಟ್ಟಡ ತೆರವುಗೊಳಿಸಲು ಮುಂದಾಗಬೇಕು ಎಂದು ಕೃಷ್ಣಪ್ಪ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next