Advertisement

ಕ್ಷೌರಿಕರಿಂದ ಕೋವಿಡ್ ಜಾಗೃತಿಗಾಗಿ ಸ್ವಯಂ ದಿಗ್ಬಂಧನ !

05:19 PM May 20, 2020 | Naveen |

ಹೊಸನಗರ: ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುತ್ತಲೇ ಇದೆ. ಆದರೂ ಜನರು ಕ್ಯಾರೇ ಅನ್ನದ ಘಟನೆಗಳು ನಡೆಯುತ್ತಿವೆ. ಆದರೆ ಹೊಸನಗರ ತಾಲೂಕಿನಲ್ಲಿ ಕ್ಷೌರಿಕ ವೃತ್ತಿ ಬಾಂಧವರು ಮಾದರಿಯಾಗುವಂತಹ ಕೆಲಸ ಮಾಡಿ ಜನರ ಗಮನ ಸೆಳೆದಿದ್ದಾರೆ.

Advertisement

ಹೌದು, ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಷೌರಿಕರು ಅಂಗಡಿಗಳನ್ನು ತಾವೇ ಸೀಲ್‌ ಡೌನ್‌ ಮಾಡಿಕೊಂಡು ಮೇ 31ರವರೆಗೆ ಕಾರ್ಯ ನಿರ್ವಹಿಸದಂತೆ ತೀರ್ಮಾನ ಮಾಡಿದ್ದಾರೆ. ಮಾತ್ರವಲ್ಲ, ತಮ್ಮ ತಮ್ಮ ಅಂಗಡಿಗಳನ್ನು ತಾವೇ ಲಾಕ್‌ ಮಾಡಿಕೊಂಡು ಗಮನ ಸೆಳೆದಿದ್ದಾರೆ. ಹಾಗಾಗಿ ಹೊಸನಗರ ತಾಲೂಕಿನ ಕಾರಗಡಿ, ಬಟ್ಟೆಮಲ್ಲಪ್ಪ, ಬಾಣಿಗ, ಜಯನಗರ, ವಾರಂಬಳ್ಳಿ, ನಾಗರಕೊಡಿಗೆ, ನಗರ, ನಿಟ್ಟೂರು, ಸಂಪೇಕಟ್ಟೆ, ಮಾಸ್ತಿಕಟ್ಟೆ ಸೇರಿದಂತೆ ಬಹುತೇಕ ಕಡೆ ಮೇ 31ವರೆಗೆ ಸೆಲೂನ್‌ಗಳು ಬಂದ್‌ ಆಗಲಿವೆ.

ಸರ್ಕಾರದಿಂದ ಅವಕಾಶ: ಜನರ ಅಗತ್ಯಗಳಲ್ಲೊಂದಾದ ಕ್ಷೌರಿಕ ಅಂಗಡಿಗಳನ್ನು ಹಲವು ಮುನ್ನೆಚ್ಚರಿಕಾ ಕ್ರಮ ಕೈಗೊಂಡು ತೆರೆಯಲು ಸರ್ಕಾರವೇ ಅವಕಾಶ ನೀಡಿದೆ. ಆದರೆ ಇಲ್ಲಿಯ ಕ್ಷೌರಿಕರು ಯಾವುದೇ ಅಪಾಯಕ್ಕೆ ಅವಕಾಶ ನೀಡದೆ ತಮ್ಮ ಅಂಗಡಿಗಳನ್ನು ಮೇ 31ರವರೆಗೆ ಮುಚ್ಚುವ ಮೂಲಕ ಸರ್ಕಾರದ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

ಕಳ್ಳದಾರಿಯಲ್ಲಿ ಮಾಡಿದರೆ ರೂ.2000 ದಂಡ: ಅಂಗಡಿಗಳನ್ನು ಮುಚ್ಚುವ ಮುನ್ನ ಸಭೆ ನಡೆಸಿದ ಕ್ಷೌರಿಕ ಬಾಂಧವರು ತಮಗೆ ತಾವೇ ಹಲವು ನಿಬಂಧನೆಗಳನ್ನು ಹಾಕಿಕೊಂಡಿದ್ದಾರೆ. ನಗರ ಹೋಬಳಿಯ ಕ್ಷೌರಿಕ ಬಾಂಧವರು ಒಂದು ಹೆಜ್ಜೆ ಮುಂದೆ ಹೋಗಿ, ಒಂದು ವೇಳೆ ಅಂಗಡಿಗಳನ್ನು ಮುಚ್ಚಿ ಕಳ್ಳದಾರಿಯಲ್ಲಿ ಮನೆಗಳಿಗೆ ಹೋಗಿ ಕ್ಷೌರ ಮಾಡಿ ಬರುವುದು ಕಂಡು ಬಂದರೆ ಅಂತವರಿಗೆ ರೂ.2000 ದಂಡ ಹಾಕಿ ಆ ಹಣವನ್ನು ಕೊರೊನಾ ಜಾಗೃತಿಗೆ ಬಳಸಲು ತೀರ್ಮಾನಿಸಿದ್ದಾರೆ.

ಒಂದೇ ಕೊಠಡಿಯಲ್ಲಿ ಕ್ಷೌರ ಸಲಕರಣೆ ಸೀಲ್‌!: ನಗರ ಹೋಬಳಿಯಲ್ಲಿ ಸುಮಾರು 35 ಸೆಲೂನ್‌ ಗಳಿವೆ. ಅಷ್ಟೂ ಜನರು ಕ್ಷೌರ ವೃತ್ತಿಗೆ ಬಳಸುವ ಸಲಕರಣೆಯನ್ನು ತರಿಸಿಕೊಂಡು ಒಂದೇ ಸೆಲೂನಿನ ಒಳಗಿಟ್ಟು ಲಾಕ್‌ ಮಾಡಿದ್ದಾರೆ. ಮೇ 31ರವರೆಗೆ ಆ ಕೊಠಡಿಯನ್ನು ತೆರೆಯದಿರಲು ಕೂಡ ನಿರ್ಧರಿಸಲಾಗಿದೆ. ಈ ವೇಳೆ ನಗರ ಹೋಬಳಿ ಸವಿತಾ ಸಮಾಜದ ಅಧ್ಯಕ್ಷ ಚಂದ್ರಶೇಖರ್‌ ಭಂಡಾರಿ, ಕಾರ್ಯದರ್ಶಿ ನವೀನ್‌ ಭಂಡಾರಿ, ಅಶೋಕ್‌, ತಾಲೂಕು ಕಾರ್ಯದರ್ಶಿ ಎಂ. ರಾಘವೇಂದ್ರ, ಗೌರವಾಧ್ಯಕ್ಷ ವೆಂಕಟೇಶ ಭಂಡಾರಿ, ಪ್ರಮುಖರಾದ ದೇವರಾಜ್‌ ಭಂಡಾರಿ, ಕೆ. ರಾಘವೇಂದ್ರ, ರಾಜೇಶ್‌, ಕೀರ್ತಿ, ಕಿಶೋರ್‌, ಅರುಣ ಭಂಡಾರಿ ಇದ್ದರು.

Advertisement

ಆರೋಗ್ಯ ಕಿಟ್‌, ವಿಮೆ ಒದಗಿಸಿ: ಈ ನಡುವೆ ಮುಂದಿನ ದಿನದಲ್ಲಿ ಕೋವಿಡ್ ಜೊತೆಗೆ ಕೆಲಸ ಮಾಡುವುದು ಅನಿವಾರ್ಯ. ಹಾಗಾಗಿ ಸಮಾಜದಲ್ಲಿ ವೃತ್ತಿ ಮಾಡುವಾಗ ಆರೋಗ್ಯ ಮತ್ತು ಜೀವ ರಕ್ಷಣೆ ಮುಖ್ಯ ಈ ನಿಟ್ಟಿನಲ್ಲಿ ಕ್ಷೌರಿಕ ವೃತ್ತಿಯನ್ನು ವಿಶೇಷವಾಗಿ ಪರಿಗಣಿಸಿ ಪ್ರತಿ ವೃತ್ತಿ ಬಾಂಧವರಿಗೆ ಆರೋಗ್ಯ ಕಿಟ್‌ ಜೊತೆಗೆ ಜೀವ ವಿಮೆ ಸೌಲಭ್ಯ ಒದಗಿಸುವಂತೆ ಕ್ಷೌರಿಕರು ಮನವಿ ಮಾಡಿದ್ದಾರೆ. ಒಟ್ಟಾರೆ ಶೋಷಿತ ಸಮುದಾಯಗಳಲ್ಲಿ ಒಂದಾದ ಕ್ಷೌರಿಕರು ಕೊರೊನಾ ವಿರುದ್ಧ ಹೋರಾಟಕ್ಕೆ ಸ್ವಯಂ ನಿಬಂಧನೆಗೊಳಪಟ್ಟು ಮಾದರಿ ಕಾರ್ಯಕ್ಕೆ ಮುಂದಾಗಿರುವುದು ಸ್ವಾಗತಾರ್ಹ.

ಕೋವಿಡ್ ತಂದಿಟ್ಟ ಅಪವಾದದಿಂದ ದೂರವಿರುವ ಸಲುವಾಗಿ ಮತ್ತು ಜನರಲ್ಲಿ ಕೋವಿಡ್ ಜಾಗೃತಿ ಮೂಡಿಸುವ ಸಲುವಾಗಿ ಮೇ 31ರವರೆಗೆ ಸೆಲೂನ್‌ಗಳನ್ನು ಮುಚ್ಚುವ ನಿರ್ಧಾರ ಮಾಡಲಾಗಿದ್ದು, ಸಹಕರಿಸುವಂತೆ ಕ್ಷೌರಿಕ ಬಾಂಧವರಿಗೆ ಮನವಿ ಮಾಡಲಾಗಿದೆ.
ಮಂಜಪ್ಪ ಟಿ., ಅಧ್ಯಕ್ಷರು,
ಭಂಡಾರಿ ಸಮಾಜ ಹೊಸನಗರ

ಈ ನಿರ್ಧಾರದಿಂದ ವೃತ್ತಿಯನ್ನೇ ನಂಬಿದ ಕುಟುಂಬಗಳಿಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ. ಆದರೆ ಸಮಾಜದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕ್ಷೌರಿಕರು ಒಟ್ಟಾಗಿ ಕುಳಿತು ಈ ತೀರ್ಮಾನ ಕೈಗೊಳ್ಳಲಾಗಿದೆ. ಕೋವಿಡ್  ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಲಾಗಿದೆ.
ಚಂದ್ರಶೇಖರ್‌ ನಿಲ್ಸಕಲ್‌,
ಅಧ್ಯಕ್ಷರು ಸವಿತಾ ಸಮಾಜ ನಗರ ಹೋಬಳಿ

ಕುಮುದಾ ನಗರ

Advertisement

Udayavani is now on Telegram. Click here to join our channel and stay updated with the latest news.

Next