ಹೊಸನಗರ: ತಾಲೂಕಿನ ಮಾಸ್ತಿಕಟ್ಟೆ ಸಮೀಪದ ಹುಲಿಕಲ್ ಬಾಳೆಬರೆ ಚಂಡಿಕಾಂಬಾ ದೇವಿಯ ನೂತನ ಶಿಲಾಮಯ ದೇಗುಲ ಲೋಕಾರ್ಪಣೆಗೊಳ್ಳುವ ಜೊತೆಗೆ ದೇವಿ ಮೂರ್ತಿಯ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿಸಲಾಯಿತು.
ನಸುಕಿನಿಂದಲೇ ವಿವಿಧ ದಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿ 10.20 ರ ಶುಭ ಲಗ್ನದಲ್ಲಿ ಶ್ರೀ ಚಂಡಿಕಾಂಬಾ ದೇವಿಯ ಬಿಂಬ ಪ್ರತಿಷ್ಠಾಪನೆ ನಡೆಯಿತು. ನಂತರ ಕಳಶ ಸ್ಥಾಪನೆ, ಕುಂಭಾಭಿಷೇಕ ಮತ್ತಿತರ ಧಾರ್ಮಿಕ ವಿಧಿಗಳು ಜರುಗಿದವು.
ಚಂಡಿಕಾಂಬಾ ದೇವಾಲಯದ ಪಕ್ಕದಲ್ಲಿ ಭದ್ರಕಾಳಿ ದೇವರಿಗೆ ನೂತನ ಶಿಲಾಮಯ ದೇಗುಲ ಮತ್ತು ದೇವಿ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು. ಬುಧವಾರ ಬೆಳಗ್ಗೆಯಿಂದಲೇ ದೇಗುಲ ಲೋಕಾರ್ಪಣೆ ಮತ್ತು ಪ್ರತಿಷ್ಠಾಪನೆ ಸಂಬಂಧ ವಿವಿಧ ಹೋಮಹವನ, ಅರ್ಚನೆಗಳು, ಅದಿವಾಸ ಹೋಮ, ಸಾಂಬ ಸದಾಶಿವ, ಮಹಾವಿಷ್ಣು ದೇವರಿಗೆ 25 ಬ್ರಹ್ಮ ಕಳಸ ಸ್ಥಾಪನೆ, ಮಹಾಪೂಜೆ ನಡೆಯಿತು.
ದೇವಸ್ಥಾನ ವಿಶೇಷ ಯೋಜನೆಗಳಲ್ಲೊಂದಾದ ಮಹಾ ಅನ್ನಸಂತರ್ಪಣೆ ಕಾರ್ಯ ನೆರವೇರಿತು. ಶಿವಮೊಗ್ಗ ಜಿಲ್ಲೆ ಮತ್ತು ಹೊರಜಿಲ್ಲೆಯ ಸಹಸ್ರಾರು ಭಕ್ತರು ಬಂದು ಸೇರಿದ್ದರು. ದೇಗುಲದ ಸುತ್ತಮುತ್ತಲಿನ ಯುವಕರ ತಂಡ ವಿವಿಧ ಸಮಿತಿ ರಚಿಸಿಕೊಂಡು ಉತ್ಸವ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದು ಕಂಡುಬಂದಿತು.
ಶಾಸಕ ಆರಗ ಭೇಟಿ: ಚಂಡಿಕಾಂಬಾ ದೇಗುಲದಲ್ಲಿ ನಡೆಯುತ್ತಿರುವ ಉತ್ಸವಕ್ಕೆ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ, ಜಿಪಂ ಸದಸ್ಯ ಸುರೇಶ ಸ್ವಾಮಿರಾವ್, ಖೈರಗುಂದ ಗ್ರಾಪಂ ಅಧ್ಯಕ್ಷ ಅನಿಲ್ ಗೌಡ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ದೇವಿಯ ದರ್ಶನ ಪಡೆದರು. ಈ ವೇಳೆ ನೂತನ ಶಿಲಾಮಯ ದೇಗುಲ ನಿರ್ಮಾಣ ಮತ್ತು ಉತ್ಸವ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರಮುಖರನ್ನು ದೇವಸ್ಥಾನ ಸಮಿತಿ ವತಿಯಿಂದ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.