ಹೊಸನಗರ: ಪಟ್ಟಣದ ಹೊರ ವಲಯದ ಆರ್.ಕೆ. ರಸ್ತೆಯ ಅಂಗನವಾಡಿ ಕೇಂದ್ರದ ಹೆಚ್ಚುವರಿ ಕಟ್ಟಡವನ್ನು ಅಂಗನವಾಡಿ ಕೇಂದ್ರದ ಕಾಂಪೌಂಡ್ ಮೇಲೆಯೇ ಕಟ್ಟಲಾಗುತ್ತಿದೆ. ಇದು ಪೋಷಕರು ಮತ್ತು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಮಂಜೂರಾದ 2 ಲಕ್ಷ ರೂ. ವೆಚ್ಚದ ಹೆಚ್ಚುವರಿ ಕಟ್ಟಡವನ್ನು ಕೇಂದ್ರದ ಕಾಂಪೌಂಡ್ ಮೇಲೆ ಕಟ್ಟುತ್ತಿರುವುದು ತೀರಾ ಅವೈಜ್ಞಾನಿಕ ಕಾಮಗಾರಿ ಆಗಿದೆ. ಅಲ್ಲದೆ ಇಲ್ಲಿ ಇಲಾಖೆಯ ನೀತಿ- ನಿಯಮವನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ ಎಂದು ಪೋಷಕರು ಆರೋಪಿಸುತ್ತಾರೆ.
ಪಟ್ಟಣದ ಆರ್.ಕೆ. ರಸ್ತೆಯಲ್ಲಿರುವ ಈ ಅಂಗನವಾಡಿ ಕೇಂದ್ರ ತೀರಾ ಚಿಕ್ಕದಾಗಿದೆ. ಇಲ್ಲಿ ಸದ್ಯ ಕೇವಲ ನಾಲ್ಕು ಮಕ್ಕಳು ದಾಖಲಾಗಿದ್ದಾರೆ. ಹಿಂದೆ ಹೆಚ್ಚು ಸಂಖ್ಯೆಯ ಮಕ್ಕಳು ಇಲ್ಲಿದ್ದರು. ಕೇಂದ್ರದಲ್ಲಿ ಅಡುಗೆಮನೆ ಮತ್ತು ಆಹಾರ ಸಾಮಗ್ರಿ ಸಂಗ್ರಹ ಕೊಠಡಿಗೆ ಪ್ರತ್ಯೇಕ ಕೊಠಡಿಗಳಿಲ್ಲದೆ ಒಂದೇ ಕೊಠಡಿಯಲ್ಲಿ ಮಕ್ಕಳ ಓದು, ಆಹಾರ ತಯಾರಿಕೆ, ಸಂಗ್ರಹದ ವ್ಯವಸ್ಥೆ ಇದೆ.
ಈಚೆಗೆ ಅಂಗನವಾಡಿ ಕೇಂದ್ರಕ್ಕೆ ಹೆಚ್ಚುವರಿ ಕೊಠಡಿ ಮಂಜೂರು ಆಗಿದೆ. ಅಂಗನವಾಡಿ ಕೇಂದ್ರ ಹಿಂದೆ ಇದ್ದ ಖಾಲಿ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಂಗನವಾಡಿ ಕೇಂದ್ರದ ಕಾಂಪೌಡ್ ಬಳಸಿ ಕಾಂಪೌಡ್ ಗೋಡೆಯ ಮೇಲೆಯೇ ಕಟ್ಟಡದ ಗೋಡೆಯನ್ನು ಕಟ್ಟುವ ಕೆಲಸ ಭರದಿಂದ ಸಾಗುತ್ತಿದೆ.
ಸರ್ಕಾರವು ಶಾಲೆ ಮತ್ತು ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾರ್ಯ ಹೆಚ್ಚು ಪಾರದರ್ಶಕವಾಗಿರಬೇಕು. ಕಟ್ಟಡ ಗುಣಮಟ್ಟದಿಂದ ಕೂಡಿರಬೇಕು. ಭದ್ರತೆಯಲ್ಲಿ ಯಾವುದೇ ಕಾರಣಕ್ಕೂ ಲೋಪವಾಗಕೂಡದು ಎಂದು ಸ್ಪಷ್ಟ ಆದೇಶ ನೀಡಿದೆ. ಆದರೂ ಪಟ್ಟಣದ ಹೊರವಲಯದ ಜನಸಂದಣಿ ಇರುವ ಪ್ರದೇಶದಲ್ಲಿಯೇ ಅಂಗನವಾಡಿ ಕೇಂದ್ರದ ಕಾಮಗಾರಿ ಹಳ್ಳ ಹಿಡಿದಿರುವುದು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ.