Advertisement
ಮೊದಲೇ ಮಳೆಗಾಲವೆಂದರೆ ಎಲ್ಲ ವ್ಯಾಪಾರ ವ್ಯವಹಾರಗಳೂ ಅಷ್ಟಕ್ಕಷ್ಟೇ. ಅದರಲ್ಲಿಯೂ ವಿಪರೀತ ಮಳೆ ಮತ್ತು ಹೊಸಮಠ ಸೇತುವೆ ಮುಳುಗಡೆ ಸಮಸ್ಯೆ ಒಟ್ಟಾಗಿ ಎದುರಾದರೆ ಸ್ಥಳೀಯ ಜನರು ಪೇಟೆಯತ್ತ ಹೊರಡುವುದೇ ವಿರಳ. ಅದರ ಪರಿಣಾಮ ನೇರವಾಗಿ ಬೀಳುವುದು ವರ್ತಕರ ಮೇಲೆ. ನಷ್ಟದ ಮೇಲೆ ನಷ್ಟ ವ್ಯಾಪಾರಿಗಳಿಗೆ. ಕಳೆದ ತಿಂಗಳು ನಿರಂತರವಾಗಿ 10 ದಿನಗಳ ಕಾಲ ಸೇತುವೆ ಮುಳುಗಡೆಯಾಗಿ ಕಡಬ-ಉಪ್ಪಿನಂಗಡಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡ ಪರಿಣಾಮ ಕಡಬದ ಎಲ್ಲ ವ್ಯಾಪಾರ- ವ್ಯವಹಾರಗಳು ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸಬೇಕಾಯಿತು. ಕಳೆದ ಕೆಲದಿನಗಳಿಂದ ಅದೇ ಪರಿಸ್ಥಿತಿ ಎದುರಾಗಿದೆ. ಈ ಸ್ಥಿತಿ ಇಂದು ನಿನ್ನೆಯದಲ್ಲ. ಆರು ದಶಕಗಳಿಂದ ಮುಂದುವರಿದಿದೆ. ಹೊಸ ಸೇತುವೆಯ ನಿರ್ಮಾಣ ಕಾಮಗಾರಿ ಈ ಬಾರಿ ಪೂರ್ಣಗೊಂಡರೆ ಮುಂದಿನ ಮಳೆಗಾಲದಲ್ಲಿ ಸೇತುವೆ ಮುಳುಗಡೆಯ ಭೀತಿ ದೂರವಾಗಲಿದೆ ಎನ್ನುವುದು ಜನರ ಆಶಾಭಾವನೆ.
ನಿರ್ಮಾಣ ಹಂತದಲ್ಲಿರುವ ಹೊಸ ಸೇತುವೆಯ ಮಟ್ಟಕ್ಕೆ ಈ ಬಾರಿ ನೆರೆ ನೀರು ಏರಿ ಹೊಸ ಸೇತುವೆಗೂ ಮುಳುಗಡೆಯ ಭೀತಿ ಎದುರಾಯಿತು. ಸೇತುವೆಯ ಕಾಮಗಾರಿ ಆರಂಭಗೊಂಡು ಪಿಲ್ಲರ್‌ಗಳ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿಯೇ ಸೇತುವೆಯ ಎತ್ತರದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಸುಳ್ಯ ಶಾಸಕ ಎಸ್. ಅಂಗಾರ ಅವರು ಸೇತುವೆ ನಿರ್ಮಾಣದ ಉಸ್ತವಾರಿ ನೋಡಿಕೊಳ್ಳುತ್ತಿರುವ ಕೆಆರ್‌ಡಿಸಿಎಲ್ (ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ) ದ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದು ಸೇತುವೆಯನ್ನು ಇನ್ನಷ್ಟು ಎತ್ತರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಆದರೆ ಅದಕ್ಕೆ ಕೆಆರ್‌ಡಿಸಿಎಲ್ ಅಧಿಕಾರಿಗಳು, ‘ಹಲವು ವರ್ಷಗಳ ನೆರೆಯ ಪ್ರಮಾಣವನ್ನು ಅಧ್ಯಯನ ಮಾಡಿ ಸೇತುವೆಯ ಎತ್ತರವನ್ನು ನಿಗದಿಪಡಿಸಲಾಗಿದೆ. ನೆರೆನೀರು ಹೊಸ ಸೇತುವೆಯ ತನಕ ಬಾರದು’ ಎಂದು ಪ್ರತಿಕ್ರಿಯಿಸಿದ್ದರು. ಆದರೆ ಇದೀಗ ನೆರೆನೀರಿನ ಮಟ್ಟ ಹೊಸ ಸೇತುವೆಯ ಸ್ಲ್ಯಾಬ್ ನ ತನಕ ಏರುವ ಮೂಲಕ ಅಧಿಕಾರಿಗಳ ಮಾತು ಸುಳ್ಳಾಗಿದೆ. ಸೇತುವೆಯನ್ನು ಎತ್ತರಿಸುವಂತೆ ಶಾಸಕರು ಹಾಗೂ ಸಾರ್ವಜನಿಕರು ಮಾಡಿದ ಮನವಿಯನ್ನು ಪುರಸ್ಕರಿಸದ ಅತಿ ಬುದ್ಧಿವಂತ ಅಧಿಕಾರಿಗಳ ವಿರುದ್ಧ ಇದೀಗ ಜನರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ
Related Articles
ಸೇತುವೆಯ ಮುಳುಗಡೆಯಾದರೆ ಅರ್ಧಕ್ಕರ್ಧ ವ್ಯಾಪಾರ ಕಡಿಮೆ. ಸಾಮಗ್ರಿಗಳು ಕೂಡ ಸಮಯಕ್ಕೆ ಸರಿಯಾಗಿ ಸರಬರಾಜಾಗುವುದಿಲ್ಲ. ಸುತ್ತು ಬಳಸಿ ತರಿಸಿದರೆ ಸಾಗಾಟ ವೆಚ್ಚವೂ ಹೆಚ್ಚಾಗುತ್ತದೆ. ಅದನ್ನು ಗ್ರಾಹಕರ ಮೇಲೆ ಹೊರಿಸಲು ಸಾಧ್ಯವಿಲ್ಲ. ಅದರಿಂದಲೂ ನಮಗೇ ನಷ್ಟ. ಕೆಲವೊಂದು ಕಂಪೆನಿಯ ವಿತರಕರು ಸುತ್ತು ಬಳಸಿ ಸಾಮಗ್ರಿ ಕಳುಹಿಸಲು ಮುಂದೆ ಬಾರದ ಕಾರಣ ಅಗತ್ಯ ವಸ್ತುಗಳ ಕೊರತೆಯೂ ಎದುರಾಗುತ್ತದೆ. ಅಂಗಡಿಯ ಕೆಲಸಗಾರರೂ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುವುದಿಲ್ಲ.
– ದಯಾನಂದ ಪ್ರಭು
ವರ್ತಕರು, ಕಡಬ
Advertisement
ನಾಗರಾಜ್ ಎನ್.ಕೆ.