ಹೊಸದುರ್ಗ: ಪ್ರೌಢಶಾಲಾ ಶಿಕ್ಷಕರೊಬ್ಬರ ಸೇವಾ ನಿವೃತ್ತಿ ದಿನ ಖುದ್ದು ಶಿಕ್ಷಣ ಸಚಿವರು ದೂರವಾಣಿ ಮೂಲಕ ಮಾತನಾಡಿ ಅವರ ಸೇವೆಯನ್ನು ಕೊಂಡಾಡಿ ಅಭಿನಂದಿಸಿದ್ದಾರಲ್ಲದೆ ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತಾಲೂಕಿನ ಶ್ರೀರಾಂಪುರ ಪಬ್ಲಿಕ್ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್. ಆಂಜಿನಪ್ಪ ಜ.31 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಇವರಿಗೆ ಶಾಲೆಯಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಅದೇ ವೇಳೆ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಅಂಜಿನಪ್ಪ ಅವರಿಗೆ ಫೋನ್ ಮಾಡಿ ಅಭಿನಂದಿಸಿದ್ದಾರೆ.
ಸಚಿವರಿಗೆ ತಿಳಿದಿದ್ದು ಹೇಗೆ? 34 ವರ್ಷ 6 ತಿಂಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಆಂಜಿನಪ್ಪ ಅವರು ನಿವೃತ್ತಿಯಾಗುತ್ತಿರುವ ವಿಷಯ ಸಚಿವರಿಗೆ ತಿಳಿದಿದ್ದಾರೂ ಹೇಗೆ ಎಂಬ ಕುತೂಹಲ ಸಹಜ. ಅಂಜಿನಪ್ಪನವರ ಶಿಷ್ಯ ಮಂಜುನಾಥ್ ಎಂಬುವವರು ಪೊಲೀಸ್ ಇಲಾಖೆಯಲ್ಲಿದ್ದು, ಸದ್ಯ ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವತಃ ಸಚಿವರೇ ಫೋನ್ ಮಾಡಿ ಅಭಿನಂದಿಸಿದ್ದಾರೆ. ಸಚಿವರ ಕ್ಷೇತ್ರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲೇ ಕಾರ್ಯನಿರ್ವಹಿಸುವ ಮಂಜುನಾಥ್‌ಗೆ ಸಚಿವರೊಂದಿಗೆ ಮಾತನಾಡುವ ಅವಕಾಶ ದೊರಕಿದೆ. ಈ ವೇಳೆ ತಮಗೆ ಪಾಠ ಮಾಡಿದ ಗುರುಗಳ ಬಗ್ಗೆ ಅವರು ನಿವೃತ್ತಿಯಾಗುತ್ತಿರುವ ವಿಷಯವನ್ನು ಸಚಿವರ ಗಮನಕ್ಕೆ ತಂದಿದ್ದಾರೆ.
ಮಂಜುನಾಥ್ ಅವರ ಗುರುಸ್ಮರಣೆಯಿಂದ ಅಚ್ಚರಿಗೊಂಡ ಸಚಿವರು ಶಿಕ್ಷಕರೊಂದಿಗೆ ಮಾತನಾಡಲು ಬಯಸಿ ಮಂಜುನಾಥ್ ಅವರ ಫೋನ್ ಮೂಲಕ ಶಿಕ್ಷಕರೊಂದಿಗೆ ಮಾತನಾಡಿದ್ದಾರೆ.
ವೃತ್ತಿ ಮುಂದುವರಿಸಿ ಎಂದ ಸಚಿವರು: ಶಿಕ್ಷಣ ಸಚಿವ ಸುರೇಶ್ ಕುಮಾರ್‌ಅಂಜಿನಪ್ಪ ಅವರಿಗೆ ಕರೆ ಮಾಡಿ, “ತಮ್ಮ ಸೇವೆಯನ್ನು ಶಿಷ್ಯರೊಬ್ಬರು ಸ್ಮರಿಸಿದಾಗಲೇ ನಿಮ್ಮ ಸೇವೆಗೆ ಫಲ ಸಿಕ್ಕಂತಾಗಿದೆ. ನಿಮ್ಮ ಸೇವೆ ಎಲ್ಲರಿಗೂ ಆದರ್ಶವಾಗಲಿ. ನಿವೃತ್ತಿಯಾದರೂ ವೃತ್ತಿ ಮುಂದುವರಿಸಿ ಎಂದಿದ್ದಾರೆ. ಇದಕ್ಕೆ ಅಂಜಿನಪ್ಪ ಅವರು ಪ್ರಸಕ್ತ ಶೈಕ್ಷಣಿಕ ವರ್ಷದವರೆಗೂ ಪಾಠ ಮಾಡುವುದಾಗಿ ಮಕ್ಕಳಿಗೆ ವಾಗ್ಧಾನ ಮಾಡಿದ್ದೇನೆ ಎಂದು ಸಚಿವರಿಗೆ ತಿಳಿಸಿದರು.
ನಿವೃತ್ತಿಯಾಗುತ್ತಿರುವ ಶಿಕ್ಷಕರೊಂದಿಗೆ ಸಚಿವರೇ ಮಾತನಾಡಿದ್ದು ಸಂತಸ ತಂದಿದೆ. ನನ್ನ ಮರಣಾ ನಂತರ ವೈದ್ಯಕೀಯ ಕಾಲೇಜಿಗೆ ದೇಹದಾನ ಮಾಡುವುದಾಗಿ ಶಿಕ್ಷಣ ಸಚಿವರಿಗೆ ಅಂಜಿನಪ್ಪ ತಿಳಿಸಿದರು. ಬೆಂಗಳೂರಿಗೆ ಬಂದಾಗ ತಮ್ಮನ್ನು ಭೇಟಿಯಾಗುವಂತೆ ಸಚಿವರು ಅಂಜಿನಪ್ಪ ಅವರಿಗೆ ಸೂಚಿಸಿದರು. ಈ ಎಲ್ಲ ವಿಷಯವನ್ನು ಸುರೇಶ್‌ಕುಮಾರ್ ಅವರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದು, ಇದು ಈಗ ವೈರಲ್ ಆಗಿದೆ.
ಆನಂದ ಭಾಷ್ಪ
ಶಾಲೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಶಿಕ್ಷಣ ಸಚಿವರು ಫೋನ್ ಮಾಡಿದ ವಿಷಯ ಹೇಳುವ ವೇಳೆ ಆಂಜನಪ್ಪ ಅವರ ಕಂಗಳಲ್ಲಿ ಆನಂದ ಬಾಷ್ಪ ಇಳಿಯಿತು. ಜೀವನದ 34 ವರ್ಷ ಶಿಕ್ಷಣ ಸೇವೆ ಮಾಡಿದ್ದಕ್ಕೆ ಸಿಕ್ಕ ಪ್ರತಿಫಲ. ಶಿಕ್ಷಕನಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಅಪಾರ ಶಿಷ್ಯವೃಂದ ಹೊಂದಿರುವ ನನಗೆ ಇಂದಿನ ಶಿಕ್ಷಣ ಮಂತ್ರಿಗಳ ಅಭಿನಂದನೆ ಅಪಾರ ಗೌರವ ಸಿಕ್ಕಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.