ಹೊಸದುರ್ಗ: ತಾಲೂಕಿನಲ್ಲಿ ಬೆಂಬಲ ಬೆಲೆಯ ರಾಗಿ ಖರೀದಿ ಕೇಂದ್ರದಲ್ಲಿ ರೈತರ ರಾಗಿ ಚೀಲಗಳನ್ನು ಖರೀದಿ ಮಾಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಎಪಿಎಂಸಿ ಎದುರು ರೈತರು ಪ್ರತಿಭಟನೆ ನಡೆಸಿದರು.
ತಹಶೀಲ್ದಾರ್ ಮಧ್ಯಪ್ರವೇಶದಿಂದ ಪ್ರತಿಭಟನೆಯನ್ನು ಹಿಂಪಡೆದರು. ಪ್ರತಿಭಟನಾ ಸ್ಥಳಕೆ ಭೇಟಿ ನೀಡಿದ ತಹಶೀಲ್ದಾರ್ ತಿಪ್ಪೇಸ್ವಾಮಿ, ನಾಳೆಯಿಂದಲೇ ರೈತರಿಗೆ ಟೋಕನ್ ಮೂಲಕ ಪ್ರತಿನಿತ್ಯ ಖರಿದಿ ಮಾಡಲು ಸೂಚಿಸಲಾಗಿದೆ. ಈ ಬಗೆ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದಾಗ ರೈತರು ಪ್ರತಿಭಟನೆಯನ್ನು ವಾಪಸ್ ಪಡೆದರು.
ಇದಕ್ಕೂ ಮುನ್ನ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಪಿಎಂಸಿ ಅಧ್ಯಕ್ಷ ಹೆಬ್ಬಳ್ಳಿ ಮಲ್ಲಿಕಾರ್ಜುನ್, ಹೊಸದುರ್ಗದಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವ ರಾಗಿ ಖರೀದಿ ಕೇಂದ್ರದಲ್ಲಿ ಇದುವರೆಗೂ ರೈತರ ರಾಗಿಯನ್ನು ಖರೀದಿ ಮಾಡದೆ ಸತಾಯಿಸುತ್ತಿದ್ದಾರೆ. ಮಾರ್ಚ್ 31 ಕಡೆ ದಿನವಾಗಿದ್ದು ದಿನ ನಿತ್ಯ 150ಕ್ಕೂ ಹೆಚ್ಚು ಟ್ರ್ಯಾಕ್ಟರ್ ಬಂದು ನಿಲ್ಲುತ್ತಿವೆ. ಆದರೆ ರಾಗಿ ತೂಕ ಮಾಡಿ ತೆಗೆದುಕೊಳ್ಳಲು ನಿಧಾನಗತಿಯಲ್ಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆಹಾರ ಇಲಾಖೆ ಸಿಬ್ಬಂದಿ ಬೆಳಿಗ್ಗೆ ತಡವಾಗಿ ಬಂದು ನಂತರೆ ಸಂಜೆ ಬೇಗ ಮುಗಿಸುವುದರಿಮದ ರೈತರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ರೈತರಿಗೆ ದಿನಾಂಕ ನಿಗದಿ ಮಾಡಿ ಟೋಕನ್ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ತಾಲೂಕು ಕಚೇರಿ ಮುಂದೆ ಟ್ರ್ಯಾಕ್ಟರ್ ಜಮಾಯಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ರಾಗಿ ಖರೀದಿ ಮಾಡದೆ ದಲ್ಲಾಳಿಗಳ ರಾಗಿ ಖರೀದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಹಮಾಲರ ಸಮಸ್ಯೆ, ಕಂಪ್ಯೂಟರ್ ಸಮಸ್ಯೆ ಸೇರಿದಂತೆ ಹಲವು ಕಾರಣಗಳ ನೆಪವೊಡ್ಡಿ ರಾಗಿ ಖರೀದಿಯನ್ನು ನಿಧಾನವಾಗಿ ಮಾಡುತ್ತಿದ್ದಾರೆ ಎಂದು ದೂರಿದರು.
ರೈತರಾದ ರಂಗಪ್ಪ ಹಾಗೂ ಮಲ್ಲಿಕಾರ್ಜುನ್ ಮಾತನಾಡಿ, ಕಳೆದರಡು ದಿನಗಳಿಂದ ರಾಗಿ ತಂದು ವಾಪಸಾಗುತ್ತಿದ್ದೇವೆ. ಟೋಕನ್ ನೀಡಿದರೆ ತಿಳಿಸಿದ ದಿನದಂದು ಬಂದು ರಾಗಿ ನೀಡಲು ಅನುಕೂಲವಾಗುತ್ತದೆ ಎಂದರು.