Advertisement

‘ಮತ್ತೆ ಕಲ್ಯಾಣ’ಪ್ರಚಾರದ ತಂತ್ರ ಅಲ್ಲ

11:57 AM Jul 31, 2019 | Naveen |

ಹೊಸದುರ್ಗ: ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ಪ್ರಚಾರದ ತಂತ್ರವಲ್ಲ, ಶ್ರಾವಣ ಸಂಜೆಯ ಮುಂದುವರೆದ ಭಾಗವಾಗಿದೆ. ಸಕಲ ಜೀವಾತ್ಮಗಳಿಗೂ ಒಳಿತನ್ನು ಬಯಸುವುದೇ ಮತ್ತೆ ಕಲ್ಯಾಣದ ಉದ್ದೇಶ ಎಂದು ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಸಾಣೇಹಳ್ಳಿ ಶ್ರೀಮಠದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಅಜ್ಞಾನ, ಮೂಢನಂಬಿಕೆ, ಲಿಂಗ ತಾರತಮ್ಯ, ಭ್ರಷ್ಟಾಚಾರ, ಅನೀತಿ, ಅತ್ಯಾಚಾರ, ಶೋಷಣೆ, ದೇವರು-ಧರ್ಮದ ಹೆಸರಿನಲ್ಲಿ ಸುಲಿಗೆ ಇತ್ಯಾದಿ ರೋಗಗಳಿಂದ ಮನುಕುಲ ಬಳಲುತ್ತಿದೆ. ಇಂತಹ ಸನ್ನಿವೇಶ ಹನ್ನೆರಡನೇ ಶತಮಾನದಲ್ಲಿಯೂ ಇತ್ತು. ಅಂದು ಬಸವಾದಿ ಶರಣರು ಇವುಗಳಿಗೆ ಕಂಡುಕೊಂಡ ಸಮ ಸಮಾಜದ ಪರಿಕಲ್ಪನೆಯ ಅರಿವು, ಆಶಯಗಳನ್ನು ಜನರಲ್ಲಿ ಬಿತ್ತುವುದು ಕಾರ್ಯಕ್ರಮದ ಮುಖ್ಯ ಧ್ಯೇಯ ಎಂದರು.

ಒಂದು ತಿಂಗಳ ಕಾಲ ನಡೆಯಲಿರುವ ‘ಮತ್ತೆ ಕಲ್ಯಾಣ’ದಲ್ಲಿ ತಾಲೂಕು ಹಾಗೂ ಜಿಲ್ಲಾ ಕೇಂದ್ರದ ಕಾಲೇಜುಗಳ ವಿದ್ಯಾರ್ಥಿಗಳಿಗೆ ‘ಮತ್ತೆ ಕಲ್ಯಾಣ’ ಎನ್ನುವ 108 ಪುಟಗಳ ಪುಸ್ತಕವನ್ನು ನೀಡಲಾಗುತ್ತದೆ. ಅದರಲ್ಲಿನ ಲೇಖನಗಳ ಮೇಲೆ ಸಂವಾದ ನಡೆಸಲಾಗುತ್ತದೆ. ನಂತರ ರಾಜ್ಯಾದ್ಯಂತ ಆಯ್ದ ವಿದ್ಯಾರ್ಥಿಗಳನ್ನು ಸಾಣೇಹಳ್ಳಿಗೆ ಕರೆಸಿ ಅವರಿಗೆ ಕಾರ್ಯಾಗಾರ ನಡೆಸುವ ಮೂಲಕ ಕಲ್ಯಾಣ ಕ್ರಾಂತಿಯ ಬೀಜವನ್ನು ಬಿತ್ತಿ ಸಮ ಸಮಾಜದ ಪರಿಕಲ್ಪನೆಯನ್ನು ಮೂಡಿಸಿ ನಿರಂತರವಾಗಿ ನಡೆಸುವಂತೆ ನೋಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮವನ್ನು ಸಹಮತ ವೇದಿಕೆಯ ಆಶ್ರಯದಲ್ಲಿ ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಖ್ಯಾತ ಕಲಾವಿದ ಶಶಿಧರ ಅಡಪ ನೇತೃತ್ವದ ತಂಡ ಕೂಡಲಸಂಗಮದ ಐಕ್ಯ ಮಂಟಪದ ಮಾದರಿಯಲ್ಲಿ ಶರಣ ವಚನಗಳು, ಪ್ರತಿಮೆಗಳನ್ನೊಳಗೊಂಡ ಪ್ರಚಾರ ವಾಹನವನ್ನು ಸಿದ್ಧಪಡಿಸಿದೆ. ಈ ವಾಹನ ಒಂದು ತಿಂಗಳ ಕಾಲ ಕಾರ್ಯಕ್ರಮ ನಿಗದಿಯಾಗಿರುವ ಸ್ಥಳಗಳಲ್ಲಿ ಸಂಚರಿಸಲಿದೆ. ಪ್ರತಿದಿನ ಮಧ್ಯಾಹ್ನ ವಿದ್ಯಾರ್ಥಿಗಳೊಂದಿಗೆ ಸಂವಾದ, ಸಂಜೆ 5 ಗಂಟೆಗೆ ಸಾಮರಸ್ಯ ನಡಿಗೆ, 6 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದೆ. ನಂತರ ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನಗೊಳ್ಳಲಿದೆ. ಆ. 1 ರಂದು ಬೆಳಿಗ್ಗೆ 7 ಗಂಟೆಗೆ ಸಾಣೇಹಳ್ಳಿಯಲ್ಲಿ ಶಿವ ಧ್ವಜಾರೋಹಣ, ಸಾಮೂಹಿಕ ಪ್ರಾರ್ಥನೆ, ಶಿವಮಂತ್ರ ಲೇಖನ, ಆಶೀರ್ವಚನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next