Advertisement

ಅರಣ್ಯಾಧಿಕಾರಿಗಳ ಎದುರೇ ಚಿರತೆ ಕೊಂದರು!

11:46 AM Jul 04, 2019 | Team Udayavani |

ಹೊಸದುರ್ಗ: ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಚಿರತೆಯನ್ನು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ಎದುರೇ ಬಡಿದು ಕೊಂದ ಘಟನೆ ತಾಲೂಕಿನ ಶ್ರೀರಾಂಪುರ ಹೋಬಳಿಯ ಕುರುಬರಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.

Advertisement

ದಾಳಿಂಬೆ ತೋಟವೊಂದರಲ್ಲಿ ಬೆಳೆ ಕಾಯಲೆಂದು ಹಾಕಲಾಗಿದ್ದ ಸಣ್ಣ ಗುಡಿಸಲಿನಲ್ಲಿ ಅಡಗಿದ್ದ ಚಿರತೆ ಬುಧವಾರ ಬೆಳಿಗ್ಗೆ ತೋಟಕ್ಕೆ ಹೋದ ದೇವಿರಮ್ಮ ಹಾಗೂ ಅನಿಲ್ಕುಮಾರ್‌ ಎಂಬುವವರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಗಾಯಾಳುಗಳನ್ನು ಶ್ರೀರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಬೆಳಿಗ್ಗೆ 6 ಗಂಟೆ ಸುಮಾರಿಗೆ ಚಿರತೆ ದಾಳಿ ಮಾಡಿದೆ ಎನ್ನಲಾಗಿದ್ದು, ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ನಾಲ್ಕು ತಾಸು ತಡವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿದ್ದಾರೆ. ಇದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಯಿತು.

ಸ್ಥಳಕ್ಕೆ ಭೇಟಿ ನೀಡಿದ ಉಪ ವಲಯ ಅರಣ್ಯಾಧಿಕಾರಿ, ‘ನಾವು ಏನು ಮಾಡಲೂ ಸಾಧ್ಯವಿಲ್ಲ. ಚಿರತೆ ದಾಳಿ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅವರು ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ’ ಎಂದಾಗ ಗ್ರಾಮಸ್ಥರು ಮತ್ತಷ್ಟು ಸಿಟ್ಟಿಗೆದ್ದರು.

ಕಾರ್ಯಾಚರಣೆ ಆರಂಭಿಸದ್ದಕ್ಕೆ ಆಕ್ರೋಶ: ಬೆಳಿಗ್ಗೆ 11:30ಕ್ಕೆ ಆಗಮಿಸಿದ ಎಸಿಎಫ್‌ ಮಂಜುನಾಥ್‌, ಚಿರತೆ ಸೆರೆ ಕಾರ್ಯಾಚರಣೆಗೆ ಹಿರಿಯೂರಿನಿಂದ ತಂಡವೊಂದನ್ನು ಕರೆಸುವುದಾಗಿ ಹೇಳಿ ಕಾದು ಕುಳಿತರು. ಮಧ್ಯಾಹ್ನ ಒಂದು ಗಂಟೆಯಾದರೂ ಕಾರ್ಯಾಚರಣೆ ಆರಂಭಿಸಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿಯೇ ಚಿರತೆಯನ್ನು ಓಡಿಸಲು ಮುಂದಾದರು.

Advertisement

ಕಲ್ಲು, ಬಡಿಗೆಯಿಂದ ಹೊಡೆದರು: ಅರಣ್ಯ ಇಲಾಖೆ ಅಧಿಕಾರಿಗಳು ವಾಹನದಲ್ಲಿ ಚಿರತೆ ಅಡಗಿದ್ದ ಸ್ಥಳದತ್ತ ಹೋದರು. ಆಗ ಗಾಬರಿಗೊಂಡ ಚಿರತೆ ಜನರತ್ತ ಎರಗಿತು. ಕಂಗಾಲಾದ ಜನ ಜೀವ ರಕ್ಷಣೆಗಾಗಿ ಚಿರತೆಯತ್ತ ಕಲ್ಲು ತೂರಿದರು. ಕಲ್ಲೇಟಿನಿಂದ ತಪ್ಪಿಸಿಕೊಳ್ಳಲು ಚಿರತೆ ಮಾವಿನ ಮರ ಏರಿತು. ಆದರೂ ಸುಮ್ಮನಾಗದ ಜನ ಕಲ್ಲು ಎಸೆಯುತ್ತಲೇ ಇದ್ದರು. ಕಲ್ಲೇಟು ತಾಳಲಾರದೆ ಚಿರತೆ ಮರದಿಂದ ಕೆಳಕ್ಕೆ ಜಿಗಿದಿದ್ದು, ಆಕ್ರೋಶಗೊಂಡಿದ್ದ ಜನ ಬಡಿಗೆಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದು, ಚಿರತೆ ಪ್ರಾಣ ಬಿಟ್ಟಿದೆ ಎಂದು ಡೆಪ್ಯೂಟಿ ಆರ್‌ಎಫ್‌ಒ ಯೋಗೀಶ್‌ ತಿಳಿಸಿದ್ದಾರೆ.

ಬಲೆ ತರಿಸಿಕೊಟ್ರೂ ಹಿಡೀಲಿಲ್ಲ
ಚಿರತೆ ದಾಳಿ ಮಾಡಿದಾಗಿನಿಂದಲೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡುತ್ತಲೇ ಇದ್ದೆವು. ಆದರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮೊಬೈಲ್ ಸ್ವಿಚ್ ಆಫ್‌ ಮಾಡಿದ್ದರು. ನಂತರ ಎಸಿಎಫ್‌ ಮಂಜುನಾಥ್‌ ಅವರಿಗೆ ಮಾಹಿತಿ ನೀಡಲಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಬೇಕಾದ ಸಾಮಗ್ರಿಗಳನ್ನು ತರದೇ ಹಾಗೆಯೇ ಬಂದಿದ್ದರು. ಹಾಗಾಗಿ ಚಿರತೆ ಹಿಡಿಯಲು ಬಲೆಯನ್ನು ನಾವೇ ತರಿಸಿಕೊಟ್ಟೆವು. ಆದರೂ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಯಾವುದೇ ಪ್ರಯತ್ನ ನಡೆಸಲಿಲ್ಲ ಎಂದು ಕುರುಬರಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next