ಹೊಸದುರ್ಗ: ಇಲ್ಲಿನ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಗೊಂಡಿದೆ. ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಪಟ್ಟಣದ 19ನೇ ವಾರ್ಡ್ ನ ಬಿಜೆಪಿಯ ಎಸ್‌ಟಿ ವರ್ಗದ ಸದಸ್ಯೆ ರಾಜೇಶ್ವರಿ ಆನಂದ್ ಪುರಸಭೆ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಿದೆ. 23 ಸದಸ್ಯ ಬಲದ ಪುರಸಭೆಯಲ್ಲಿ ಬಿಜೆಪಿ ಸಂಖ್ಯಾಬಲ 14 ಇದೆ. ಐವರು ಪಕ್ಷೇತರರು ಬಿಜೆಪಿಗೆ ಬೆಂಬಲ ಘೋಷಿಸಿರುವುದರಿಂದ ಬಿಜೆಪಿ ಸಂಖ್ಯಾಬಲ 19ಕ್ಕೆ ಏರಿದೆ. ಕಾಂಗ್ರೆಸ್ ಪಕ್ಷದ ನಾಲ್ವರು ಸದಸ್ಯರಿದ್ದಾರೆ.
ಅಧಿಕಾರಕ್ಕೆ ಬರಲು 12 ಸದಸ್ಯರ ಬೆಂಬಲದ ಅಗತ್ಯವಿದೆ. ಬಿಜೆಪಿ 14 ಹಾಗೂ ಪಕ್ಷೇತರರ ಬೆಂಬಲದಿಂದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಜೊತೆಗೆ ಶಾಸಕರು ಹಾಗೂ ಸಂಸದರು ಬಿಜೆಪಿಯವರೇ ಇರುವುದರಿಂದ ಪಕ್ಷದ ಹಾದಿ ಸಲೀಸು. ರಾಜೇಶ್ವರಿ ಏಕೈಕ ಎಸ್‌ಟಿ ಮಹಿಳೆಯಾಗಿರುವುದರಿಂದ ಅವರಿಗೆ ಅದೃಷ್ಟ ಖುಲಾಯಿಸಿದೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ದಿನಾಂಕ ನಿಗದಿಯಾಗಲು ಕ್ಷಣಗಣನೆ ಆರಂಭವಾಗಿದೆ. ಕಳೆದ ಒಂದೂವರೆ ವರ್ಷಗಳ ಹಿಂದೆ ಪುರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಸದಸ್ಯರು ಅಧಿಕಾರದಿಂದ ವಂಚಿತರಾಗಿದ್ದರು. ಈಗ ರಾಜ್ಯ ಸರ್ಕಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿರುವುದರಿಂದ ಪುರಸಭೆಯಲ್ಲಿ ಹೊಸ ಸಂಚಲನ ಮೂಡಿದೆ.
ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಬಿಜೆಪಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಹಲವು ಮಹಿಳೆಯರು ಪೈಪೋಟಿ ನೀಡುತ್ತಿದ್ದಾರೆ. 2ನೇ ವಾರ್ಡ್‌ನ ಪೂರ್ಣಿಮಾ ಶ್ರೀನಿವಾಸ್, 3ನೇ ವಾರ್ಡ್‌ನಿಂದ ಗೀತಾ ಗಜೇಂದ್ರ, 4 ನೇ ವಾರ್ಡ್‌ನ ಸರೋಜಮ್ಮ ಮಲ್ಲೇಶಪ್ಪ, 9ನೇ ವಾರ್ಡ್ ನ ಓಬಳಮ್ಮ, 12ನೇ ವಾರ್ಡ್‌ನ ಡಾ| ಸ್ವಾತಿ, 21ನೇ ವಾರ್ಡ್‌ನ ಜ್ಯೋತಿ ಸೇರಿದಂತೆ ಬಿಜೆಪಿ ಸದಸ್ಯರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಒಟ್ಟಿನಲ್ಲಿ ಹೊಸದುರ್ಗ ಪುರಸಭೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ದಿನಾಂಕ ಘೋಷಣೆಗೆ ಪುರಸಭೆ ಸದಸ್ಯರು ಎದುರು ನೋಡುತ್ತಿದ್ದಾರೆ.
ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸಂಬಂಧ ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಲಾಗುವುದು. ನೂತನ ಅಧ್ಯಕ್ಷ-ಉಪಾಧ್ಯಕ್ಷರಾರು ಎಂಬ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು.
ಗೂಳಿಹಟ್ಟಿ ಶೇಖರ್,
ಶಾಸಕರು