Advertisement

“ಅಮೃತಕ್ಕೆ ಹಾರುವ ಗರುಡ’ಅಪೂರ್ವ ಕೃತಿ

05:18 PM Dec 09, 2019 | Naveen |

ಹೊಸದುರ್ಗ: ಜಗತ್ತಿನ ಪೂರ್ವ ಮತ್ತು ಪಶ್ಚಿಮದಲ್ಲಿ ಬಹು ದೊಡ್ಡ ಸಾಹಿತ್ಯ ದೃಷ್ಟಿಯಾಗುತ್ತಿದೆ. ಹಾಗಾಗಿ ಪಾಶ್ಚಿಮಾತ್ಯರ ಜ್ಞಾನ ಭಾರತೀಯರಿಗೆ ರಸಾನುಭವವನ್ನು ಕಟ್ಟಿಕೊಡುವ ಮಾರ್ಗವಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಚಂದ್ರಶೇಖರ ಕಂಬಾರ ಹೇಳಿದರು.

Advertisement

ವೀರಪ್ರತಾಪ ಮೀಡಿಯಾ ಟ್ರಸ್ಟ್‌ ವತಿಯಿಂದ ಮುದ್ರಣಗೊಂಡಿರುವ ಡಾ| ಲೋಕೇಶ ಅಗಸನಕಟ್ಟೆಯವರ “ಅಮೃತಕ್ಕೆ ಹಾರುವ ಗರುಡ’ ಕೃತಿಯನ್ನು ತಾಲೂಕಿನ ಬೆಲಗೂರು ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ರಸಾನುಭವವನ್ನು ಕಟ್ಟಿಕೊಡುವುದೆಂದರೆ ಅಹಂಕಾರದಿಂದ ನಿರಹಂಕಾರದ ಕಡೆ ಸಾಗುವುದು ಎಂದರ್ಥ. ರಸಾನುಭವದೊಂದಿಗೆ ನಾವು ಅನುಸಂಧಾನ ಮಾಡಲು ನಮ್ಮಲ್ಲಿರುವ ಅಹಂ ಖಾಲಿ ಮಾಡಿಕೊಳ್ಳಬೇಕು. ಎಂಟನೇ ಶತಮಾನದಿಂದ 12ನೇ ಶತಮಾನದವರೆಗೆ ಭಕ್ತಿ ಕ್ರಾಂತಿ ನಡೆದಿದೆ. ಭಕ್ತಿ ಕ್ರಾಂತಿ ತಮಿಳುನಾಡಿನಲ್ಲಿ ಹುಟ್ಟಿ ಕೇರಳ, ಗುಜರಾತ್‌ ಮೂಲಕ ಇಡೀ ಜಗತ್ತನ್ನೇ ಆವರಿಸಿದೆ. ಅಂತಹ ಪ್ರಕ್ರಿಯೆಗೆ ನಾವೆಲ್ಲರೂ ಒಳಗೊಂಡಿದ್ದೇವೆ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿ ನಾನು ದೇಶದ ಎಲ್ಲಾ ಭಾಷೆಯ ಸಾಹಿತ್ಯ ಕೃತಿಗಳನ್ನು ಗಮನಿಸುತ್ತಿದ್ದೇನೆ. ಇಂದು ಬಿಡುಗಡೆಯಾದ ಲೋಕೇಶ ಅಗಸನಕಟ್ಟೆಯವರು ಬರೆದಿರುವಂತಹ ಕೃತಿಯನ್ನು ಬೇರೆ ಯಾವುದೇ ಭಾಷೆಯಲ್ಲಿ ನೋಡಿಲ್ಲ. ಇದೊಂದು ಅಪೂರ್ವ ಕೃತಿ. ಇದನ್ನು ಬೇರೆ ಭಾಷೆಗಳಲ್ಲಿ ಪ್ರಕಟಿಸುವಂತಹ ಕೆಲಸ ಆಗಬೇಕು ಎಂದರು.

ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ| ಮಲ್ಲೇಪುರಂ ಜಿ. ವೆಂಕಟೇಶ್‌ ಮಾತನಾಡಿ, ಲೋಕೇಶ ಅಗಸನಕಟ್ಟೆ ಈ ಕಾಲದ ಪುರುಷ ಸರಸ್ವತಿ. ಅವರು ಬರೆದಿರುವ ಕೃತಿ ಹೃದಯಕ್ಕೆ ಒತ್ತಿಕೊಂಡು ತಲೆ ಮೇಲಿಟ್ಟುಕೊಳ್ಳುವಂಥದ್ದಾಗಿದೆ. ಪುಸ್ತಕದಲ್ಲಿ ಬರುವ ಹಲವು ಸಂಗತಿಗಳು ತರ್ಕಕ್ಕೆ ನಿಲುಕುವುದಿಲ್ಲವೆಂಬುದು ಕೆಲವರ ಅಭಿಪ್ರಾಯ. ಅದು ನಿಜವೂ ಇರಬಹುದು. ಆದರೆ ನಮ್ಮ ಅಧ್ಯಾತ್ಮಿಕ ಲೋಕದಲ್ಲಿ ಹಲವು ಸಿದ್ಧಿಗಳಿವೆ. ಅವು ಕೆಲವರಿಗೆ ಅರ್ಥವಾಗುವಂಥದ್ದಲ್ಲ. ವಚನ ಸಾಹಿತ್ಯದಲ್ಲಿ ಅಲ್ಲಮಪ್ರಭು, ಬಸವಣ್ಣ ಹಾಗೂ ಸಿದ್ಧರಾಮ ಪ್ರಮುಖರಾಗಿದ್ದಾರೆ. ಭಕ್ತಿಯ ಸಂದರ್ಭದಲ್ಲಿ ಬೆಲಗೂರಿನ ಬಿಂದುಮಾಧವ ಶರ್ಮ ಸ್ವಾಮೀಜಿಯವರನ್ನು ಹೆಸರಿಸಬಹುದು ಎಂದರು.

Advertisement

ಸರ್ವೋತ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪದ್ಮವಿಭೂಷಣ ಡಾ| ಎಂ.ಎನ್‌. ವೆಂಕಟಾಚಲಯ್ಯ ಮಾತನಾಡಿ, ಮನುಷ್ಯ ಸಂಬಂಧಗಳು ಅತ್ಯಂತ ಸುಂದರವಾದಂಥವು. ಸಹೋದರ ಭಾವದಿಂದ ಬದುಕುವಂತಹ ಸನ್ನಿವೇಶಗಳನ್ನು ನಾವು ಸೃಷ್ಟಿಸಿಕೊಳ್ಳಬೇಕು. ಪರಸ್ಪರರ ಅಭಿಪ್ರಾಯಗಳನ್ನು, ಗುಣವಂತಿಕೆಯನ್ನು ಗೌರವಿಸುವಂತಾಗಬೇಕು. ಕನ್ನಡತನವನ್ನು ಉಳಿಸಿಕೊಂಡು ಹೋಗಬೇಕು. ಕನ್ನಡದಲ್ಲಿ ಅತ್ಯಂತ ಸಮೃದ್ಧ ಸಾಹಿತ್ಯ ಕೃತಿಗಳಿವೆ ಎಂದು ತಿಳಿಸಿದರು.

ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿ, ರಾಜ್ಯದಲ್ಲಿರುವ ಮಠಮಾನ್ಯಗಳು ತಮ್ಮ ಜಾತಿ ಸಮುದಾಯಗಳಿಂದ ಗುರುತಿಸಿಕೊಂಡು ಕೆಲಸ ಮಾಡುತ್ತಿವೆ. ಆದರೆ ಬಿಂದುಮಾಧವ ಶರ್ಮ ಸ್ವಾಮೀಜಿಯವರು ಅವಧೂತ ಪರಂಪರೆಯವರು. ಬಡವರ ಬಗ್ಗೆ ಕಾಳಜಿಯನ್ನಿಟ್ಟುಕೊಂಡಿರುವ ಅವರು ಭತ್ತವನ್ನು ಬೆಳೆದು ಅದರಿಂದ ಬಂದ ಅಕ್ಕಿ ಮೂಲಕ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನ್ನ ದಾಸೋಹ ಮಾಡಿದವರು. ಭಕ್ತರ ಬಳಿಗೆ ಹೋಗಿ ಏನನ್ನೂ ಬೇಡಲಿಲ್ಲ. ಎಲ್ಲವೂ ಅವರಿದ್ದಲ್ಲಿಗೇ ಬರುತ್ತಿವೆ ಎಂದು ಮಾರ್ಮಿಕವಾಗಿ ನುಡಿದರು.

ಕೃತಿಕಾರ ಡಾ| ಲೋಕೇಶ ಅಗಸನಕಟ್ಟೆ ಮಾತನಾಡಿ, ಅವಧೂತ ಬಿಂದುಮಾಧವರದು ಜಡವಲ್ಲದ ನಿತ್ಯವೂ ಚಲನಶೀಲ ಬದುಕು. ಅವರು ಅಹಂ ಕಳೆದುಕೊಂಡ ಗುರುವಾಗಿದ್ದಾರೆ. ಅವರೊಂದಿಗೆ ನಿರ್ವಚನ ನಡೆಸುವ ಸಂದರ್ಭದಲ್ಲಿ ನಿತ್ಯವೂ ಹೊಸ ಹೊಸ ಸಂಗತಿಗಳು ತೆರೆದುಕೊಳ್ಳುತ್ತವೆ. ಅವರ ಹಲವು ಸಂಗತಿಗಳನ್ನು ಎಡಪಂಥೀಯರು ಒಪ್ಪುದಿಲ್ಲವೆಂಬ ಸಂಗತಿ ನನ್ನ ವಿವೇಚನೆಯಲ್ಲಿದೆ. ಇಂದು ಆತ್ಮ ಜ್ಞಾನ, ಜ್ಞಾನ ಮತ್ತು ವಿಜ್ಞಾನವೇ ಮುಖ್ಯ. ಆ ಮೂಲಕವೇ ನಮ್ಮ ಚಿಂತನೆಗಳು ಬೆಳೆಯಬೇಕಾಗಿವೆ ಎಂದು ಹೇಳಿದರು.

ಬೆಲಗೂರು ಕ್ಷೇತ್ರದ ಅವಧೂತ ಸದ್ಗುರು ಬಿಂದುಮಾಧವ ಶರ್ಮ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಜಯ ಮಾರುತಿ ಸ್ವಾಮೀಜಿ, ರಾಮ ಶರ್ಮ, ಕ್ಷೇತ್ರದ ಆಡಳಿತಾಧಿಕಾರಿ ಗುರುದತ್ತ, ಹೊಸಹಳ್ಳಿ ರಾಜಣ್ಣ, ಧರ್ಮದರ್ಶಿ ಎಸ್‌. ರವಿಕುಮಾರ್‌, ಪ್ರೊ| ಎಸ್‌. ಚಿದಾನಂದ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next