Advertisement

Hosadu: 4 ವರ್ಷಗಳಿಂದ ಸ್ಥಳೀಯ ಸರಕಾರವೇ ಇಲ್ಲ!

03:10 PM Oct 14, 2024 | Team Udayavani |

ಕುಂದಾಪುರ: ಕಳೆದ 4 ವರ್ಷದಿಂದ ಹೊಸಾಡು ಗ್ರಾಮದಲ್ಲಿ ಗ್ರಾ.ಪಂ. ಚುನಾವಣೆ ನಡೆಯದಿರುವ ಕಾರಣ, ಸ್ಥಳೀಯ ಆಡಳಿತವೇ ಇಲ್ಲದಂತಾಗಿದೆ. ಇಲ್ಲಿ 4 ವರ್ಷಗಳಿಂದ ಆಡಳಿತಾಧಿಕಾರಿಗಳು, ಅಧಿಕಾರಿಗಳದ್ದೇ ಆಡಳಿತ ನಡೆಯುತ್ತಿದ್ದು, ತಮ್ಮನ್ನು ಪ್ರತಿ ನಿಧಿಸುವ ಸ್ಥಳೀಯ ಜನಪ್ರತಿನಿಧಿಗಳಿಲ್ಲದೆ, ಗ್ರಾಮಸ್ಥರು ತೊಂದರೆ ಪಡುವಂತಾಗಿದೆ. ಇನ್ನೊಂದೆಡೆ ಸೇನಾಪುರ ಗ್ರಾಮಸ್ಥರು ಸಹ ಅತ್ತ ನಾಡಕ್ಕೂ ಸೇರದೇ, ಇತ್ತಾ ಹೊಸಾಡಿಗೂ ಸೇರದೇ ತ್ರಿಶಂಕು ಸ್ಥಿತಿಯಲ್ಲಿ ಅತಂತ್ರರಾಗಿದ್ದಾರೆ.

Advertisement

4 ವರ್ಷಗಳ ಹಿಂದೆ ನಾಡ ಗ್ರಾ.ಪಂ.ನಿಂದ ಬೇರ್ಪಟ್ಟ ಸೇನಾಪುರ ಗ್ರಾಮವನ್ನು ದೂರದ ಹೊಸಾಡು ಗ್ರಾ.ಪಂ.ಗೆ ಸೇರಿಸಲಾಗಿತ್ತು. ಇದಕ್ಕೆ ಸೇನಾಪುರ ಗ್ರಾಮದವರು ಆಕ್ಷೇಪವೆತ್ತಿದ್ದರಿಂದ ಈ ಸಮಸ್ಯೆ ಉದ್ಭವಗೊಂಡಿತ್ತು. ಅದಿನ್ನೂ ಬಗೆಹರಿಯದಿರುವ ಕಾರಣ ಹೊಸಾಡು ಹಾಗೂ ಸೇನಾಪುರ ಈ ಎರಡೂ ಗ್ರಾಮಗಳ ಅಭಿವೃದ್ಧಿಗೆ ಸ್ಥಳೀಯ ಸರಕಾರವಿಲ್ಲದೇ, ಅಡ್ಡಿಯಾದಂತಾಗಿದೆ.
ಸೇನಾಪುರ ಗ್ರಾಮಸ್ಥರು ಪ್ರಾದೇಶಿಕ ಆಯುಕ್ತರು ನ್ಯಾಯಾಲಯಕ್ಕೆ ಆಕ್ಷೇಪಣೆ ಅರ್ಜಿ ಅಲ್ಲಿಸಿದ್ದರಿಂದ, ಗ್ರಾ.ಪಂ. ಚುನಾವಣೆಯು ನಡೆಯದೆ, ಚುನಾಯಿತ ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಸರಕಾರ ಹೊಸಾಡು ಗ್ರಾ.ಪಂ.ಗೆ ಆಡಳಿತಾಧಿಕಾರಿ ನೇಮಕ ಮಾಡಿತ್ತು.

ಏನಿದು ಸಮಸ್ಯೆ?
ಅವಿಭಜಿತ ಕುಂದಾಪುರ ತಾಲೂಕುಗಳನ್ನು ವಿಭಜಿಸುವ ವೇಳೆ ಗ್ರಾಮಗಳನ್ನು ವಿಂಗಡಿಸುವ ವೇಳೆ ನಾಡ ಗ್ರಾಮವನ್ನು ಬೈಂದೂರಿಗೆ, ಸೇನಾಪುರ ಗ್ರಾಮವನ್ನು ಕುಂದಾಪುರ ತಾಲೂಕಿಗೆ ಸೇರಿಸಲಾಗಿತ್ತು. ಇದರಿಂದ ನಾಡ ಗ್ರಾ.ಪಂ.ನೊಂದಿಗಿದ್ದ ಸೇನಾಪುರ ಗ್ರಾಮವನ್ನು ಕುಂದಾಪುರ ತಾಲೂಕಿನ ಹೊಸಾಡು ಗ್ರಾ.ಪಂ.ಗೆ ಸೇರಿಸಿ, ಕರ್ನಾಟಕ ಪಂಚಾಯತ್‌ ರಾಜ್‌ ಅಧಿನಿಯಮ 1993ರ 4ರ ಉಪಪ್ರಕರಣ 2(ಎ) ಅಡಿ ಉಡುಪಿ ಜಿಲ್ಲಾಧಿಕಾರಿ 2020ರ ಸೆ.23ರಂದು ಅಧಿಸೂಚನೆ ಹೊರಡಿಸಿದ್ದರು. ಹೊಸಾಡು ಗ್ರಾ.ಪಂ. 10 ಕಿ.ಮೀ.ಗೂ ಹೆಚ್ಚು ದೂರದಲ್ಲಿರುವುದರಿಂದ ಯಾವುದೇ ಕಾರಣಕ್ಕೂ ಸೇನಾಪುರ ಗ್ರಾಮವನ್ನು ಹೊಸಾಡು ವ್ಯಾಪ್ತಿಗೆ ಸೇರಿಸಬಾರದು ಎಂದು ಅಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದರು. ಡಿಸಿ ಅಧಿಸೂಚನೆ ಪ್ರಶ್ನಿಸಿ ಮೈಸೂರಿನ ಪ್ರಾದೇಶಿಕ ಆಯುಕ್ತರಿಗೂ ಆಕ್ಷೇಪಣೆ ಸಲ್ಲಿಸಲಾಗಿತ್ತು. ಆದರೆ ಡಿಸಿ ಹೊರಡಿಸಿರುವ ಅಧಿಸೂಚನೆಯಲ್ಲಿ ಯಾವುದೇ ಲೋಪ ಕಂಡು ಬಾರದಿರುವ ಹಿನ್ನೆಲೆಯಲ್ಲಿ ಆಕ್ಷೇಪಣ ಅರ್ಜಿ ತಿರಸ್ಕರಿಸಿ, ಹೊಸಾಡು ಗ್ರಾ.ಪಂ.ಗೆ ಚುನಾವಣೆ ನಡೆಸಲು ನಿಯಮಾನುಸಾರ ಅಗತ್ಯ ಕ್ರಮ ವಹಿಸುವಂತೆ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದರು.

ಕಳೆದ 3 ವರ್ಷಗಳಿಂದ ನಡೆಯುತ್ತಿದ್ದ ವಿವಾದ ಕೊನೆಗೂ ಬಗೆಹರಿದು ವರ್ಷ ಕಳೆದರೂ ಗ್ರಾ.ಪಂ. ಸದಸ್ಯರ ಆಯ್ಕೆಗೆ ಮಾತ್ರ ಇನ್ನೂ ಕಾಲ ಕೂಡಿ ಬಂದಿಲ್ಲ. ಆದಷ್ಟು ಬೇಗ ಚುನಾವಣೆ ನಡೆಸಿ ಚುನಾಯಿತ ಸದಸ್ಯರಿಗೆ ಗ್ರಾಮದ ಆಡಳಿತ ಚುಕ್ಕಾಣಿ ನೀಡಲು ಚುನಾವಣ ಆಯೋಗ ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
ಜನಸಂಖ್ಯೆ, ವಾರ್ಡ್‌ಗಳ ಗಡಿ ನಿರ್ಧರಿಸಿ, ಸದಸ್ಯರ ಒಟ್ಟು ಸಂಖ್ಯೆಯನ್ನು ನಿಗದಿಯನ್ನು ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗದ ಪ್ರಕಾರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಹೀಗೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಪ್ರಸ್ತಾವನೆ ಬಂದಿರುತ್ತದೆ. ಅದಕ್ಕೆ ಸರಕಾರ ಅನುಮೋದನೆ ನೀಡಿ, ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸುತ್ತದೆ. ಆ ಬಳಿಕ ಜಿಲ್ಲಾಡಳಿತ ವಾರ್ಡ್‌ವಾರು ಮೀಸಲಾತಿ ಹೊರಡಿಸಿ, ಚುನಾವಣೆ ಪ್ರಕ್ರಿಯೆ ಆರಂಭಿಸಲಿದೆ.
– ಮಮತಾ ದೇವಿ ಜಿ.ಎಸ್‌., ಅಪರ ಜಿಲ್ಲಾಧಿಕಾರಿ

Advertisement

ಯಾರ ಬಳಿಗೆ ಹೋಗಬೇಕು?
ಹೊಸಾಡು ಗ್ರಾಮವು ಸುಮಾರು 862 ಕುಟುಂಬ ಹಾಗೂ 4,510 ಜನಸಂಖ್ಯೆ, ಸೇನಾಪುರ ಗ್ರಾಮವು 900 ಮನೆ ಹಾಗೂ ಸುಮಾರು 2 ಸಾವಿರಕ್ಕೂ ಮಿಕ್ಕಿ ಜನಸಂಖ್ಯೆಯನ್ನು ಹೊಂದಿದೆ. ಗ್ರಾಮದ ಅಭಿವೃದ್ಧಿ ಹಾಗೂ ಆಡಳಿತ ವ್ಯವಸ್ಥೆ ಚುರುಕುಗೊಳ್ಳಬೇಕಾದರೆ ಚುನಾಯಿತ ಜನಪ್ರತಿನಿಧಿಗಳ ಆಡಳಿತ ಮಂಡಳಿ ಅತ್ಯವಶ್ಯವಾಗಿದೆ. ದೇಶದ ಎಲ್ಲ ರಾಜ್ಯಗಳ ಗ್ರಾಮಗಳಲ್ಲಿಯೂ ಮೂರು ಸ್ತರಗಳ ಪಂಚಾಯತ್‌ ಆಡಳಿತ ವ್ಯವಸ್ಥೆಯಿದೆ. ಆದರೆ ಹೊಸಾಡು ಹಾಗೂ ಸೇನಾಪುರ ಗ್ರಾಮಸ್ಥರು ಮಾತ್ರ ಈ ಮೂರರಿಂದಲೂ ವಂಚಿತರಾಗಿರುವುದು ದುರಂತ. ರಾಜ್ಯದಲ್ಲಿ ಜಿ.ಪಂ. ಹಾಗೂ ತಾ.ಪಂ. ಚುನಾವಣೆ ಇನ್ನೂ ನಡೆಯದ ಕಾರಣ, ಇತ್ತ ಗ್ರಾ.ಪಂ. ಚುನಾವಣೆಯು ಆಗಿಲ್ಲ. ಇದರಿಂದ ಇಲ್ಲಿನ ಗ್ರಾಮಸ್ಥರನ್ನು ಪ್ರತಿನಿಧಿಸುವ ಜಿ.ಪಂ., ತಾ.ಪಂ. ಹಾಗೂ ಗ್ರಾ.ಪಂ. ಸದಸ್ಯರೇ ಇಲ್ಲ. ಗ್ರಾಮದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ನೇರವಾಗಿ ಶಾಸಕರು, ಸಂಸದರ ಬಳಿಗೆ ಹೋಗಬೇಕಾದ ಅನಿವಾರ್ಯತೆ ಇಲ್ಲಿನ ಗ್ರಾಮಸ್ಥರದು.

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next