Advertisement

ಹೊಸಬಾಳು ತಾತ್ಕಾಲಿಕ ಸೇತುವೆ ನೀರುಪಾಲು

06:00 AM Jun 14, 2018 | Team Udayavani |

ಸಿದ್ದಾಪುರ: ಹೊಸಬಾಳು ಬಳಿ ಕುಬಾj ನದಿಗೆ 40 ವರ್ಷಗಳ ಹಿಂದೆ ನಿರ್ಮಿಸಿದ್ದ ಸೇತುವೆ ಸಂಪೂರ್ಣ ಶಿಥಿಲವಾಗಿರುವ ಹಿನ್ನೆಲೆಯಲ್ಲಿ ಪರ್ಯಾಯವಾಗಿ 3.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬದಲಿ ಸೇತುವೆ (ಮೋರಿ) ಕೂಡ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಪರಿಣಾಮ ಹೊಸಂಗಡಿ ಹಾಗೂ ಯಡಮೊಗೆ ಸಂಪರ್ಕ ಕಡಿತಗೊಂಡಿದೆ.

Advertisement

ಜಿಲ್ಲಾ ಪಂಚಾಯತ್‌ ಅನುದಾನದಡಿ 3.50 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ಪಕ್ಕದಲ್ಲೇ 12 ಪೈಪ್‌ಗ್ಳನ್ನು ಹಾಕಿ ಮೋರಿ ನಿರ್ಮಿಸಲಾಗಿತ್ತು. ಅದು ಸೇತುವೆಗಿಂತ ಕೆಳಮಟ್ಟದಲ್ಲಿರುವುದರಿಂದ ಭಾರೀ ಮಳೆ ಬಂದಾಗ ನೆರೆಯಲ್ಲಿ ಕೊಚ್ಚಿಕೊಂಡು ಹೋಗಿದೆ. ನೂರಾರು ವಿದ್ಯಾರ್ಥಿಗಳು, ನಿತ್ಯ ಸಂಚಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಬೇರೆ ದಾರಿಯಿಲ್ಲದೆ ಸುತ್ತು ಬಳಸಿ ಯಡಮೊಗೆಯಿಂದ ಕಾರೂರು ಮಾರ್ಗವಾಗಿ ಕೆರೆಕಟ್ಟೆಗೆ ಬಂದು ಅಲ್ಲಿಂದ ಹೊಸಂಗಡಿಗೆ ತೆರಳಬೇಕಾದ ಪರಿಸ್ಥಿತಿ ಬಂದೊದಗಿದೆ.

ಹಳೆಯ ಸೇತುವೆ
ಹೊಸಬಾಳು ಸೇತುವೆ ಶಿಥಿಲವಾಗಿ ವರ್ಷಗಳೇ ಉರುಳಿವೆ. ಕಳೆದ ವರ್ಷ ಸ್ಥಳೀಯರು  ಜಿಲ್ಲಾ ಪಂಚಾಯತ್‌ಗೆ ದೂರು ಕೊಟ್ಟಿದ್ದರಿಂದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು  ಹಾಗೂ ಜಿಲ್ಲಾ ಪಂಚಾಯತ್‌ ಸಿಇಒ ಶಿವಾನಂದ ಕಾಪಶಿ ಅವರು ಸ್ವತಃ ಸ್ಥಳವನ್ನು ಪರಿಶೀಲಿಸಿದ್ದರು. ಬಳಿಕ ಸೇತುವೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಪರ್ಯಾಯ ರಸ್ತೆ ದುರಸ್ತಿ ಮಾಡಿ
ಇಲ್ಲಿನ 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹೊರಭಾಗದ ಶಾಲೆ-ಕಾಲೇಜುಗಳಿಗೆ ತೆರಳುತ್ತಾರೆ. ಬಸ್‌ ಸಂಚಾರವೂ ಇದೆ. ಆದರೆ ಈಗ ಸೇತುವೆಯೇ ಕೊಚ್ಚಿ ಹೋಗಿದೆ. ಹತ್ತಿರದಲ್ಲೇ ಬದಲಿ ವ್ಯವಸ್ಥೆ ಕಲ್ಪಿಸಿ ಅಥವಾ ಪರ್ಯಾಯವಾಗಿ ಸಂಪೂರ್ಣ ಹದಗೆಟ್ಟಿರುವ ಕಾರೂರು – ಕೆರೆಕಟ್ಟೆ – ಹೊಸಂಗಡಿ ರಸ್ತೆಯನ್ನು ಶೀಘ್ರ ದುರಸ್ತಿ ಮಾಡಿ ಆ ಮಾರ್ಗದಲ್ಲಿ ಬಸ್‌ ಸಂಚಾರ ಆರಂಭಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಳಪೆ ಕಾಮಗಾರಿ ಕಾರಣ
ಪ್ರಸ್ತುತ ನೀರುಪಾಲಾಗಿರುವ ಈ ಮೋರಿಯ ನಿರ್ಮಾಣಕ್ಕೆ ಜಿ.ಪಂ.ನಿಂದ 3.50 ಲಕ್ಷ ರೂ. ಬಿಡುಗಡೆಯಾಗಿತ್ತು. ಆದರೆ ಮೋರಿಯ ಕಾಮಗಾರಿ ನೋಡಿದರೆ ಕೇವಲ 1ರಿಂದ 1.50 ಲಕ್ಷ ರೂ. ವೆಚ್ಚ ಆಗಿರಬಹುದು. ಬಾಕಿ ಉಳಿದ 2 ಲಕ್ಷ ರೂ. ಕಾಣದ ಕೈಗಳ ಪಾಲಾಗಿದೆ. ಮಂಜೂರಾದ ಅನುದಾನವನ್ನು ಸಂಪೂರ್ಣವಾಗಿ ಬಳಸಿದ್ದರೆ ಮೊನ್ನೆಯ ಮಳೆಗೆ ಈ ಮೋರಿ ಕೊಚ್ಚಿಹೊಗುತ್ತಿರಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು
ಹೊಸಬಾಳು ಸೇತುವೆ ಸಮಸ್ಯೆಯನ್ನು ವೀಕ್ಷಿಸಿದ್ದೇನೆ. ಈ ಬಗ್ಗೆ ತತ್‌ಕ್ಷಣ ಪರಿಹಾರ ಕಾರ್ಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಸಿದ್ದಾಪುರ ಜಿ.ಪಂ. ಉಪ ಚುನಾವಣೆ ಮುಗಿದ ಬಳಿಕ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
– ಬಿ.ಎಂ. ಸುಕುಮಾರ ಶೆಟ್ಟಿ, 
ಬೈಂದೂರು ಶಾಸಕ

ಬೇರೆ ಮಾರ್ಗವಾಗಿ ಸಂಚಾರಕ್ಕೆ ಮನವಿ
ಸೇತುವೆ ಕೊಚ್ಚಿ ಹೋಗಿರುವುದರಿಂದ  ಕೆರೆಕಟ್ಟೆ-ಹೊಸಂಗಡಿ ಮಾರ್ಗವನ್ನು ಪರ್ಯಾಯವಾಗಿ ಬಳಸುವಂತೆ ಜನರಿಗೆ ತಿಳಿಸುತ್ತಿದ್ದೇವೆ. ಪಂಚಾಯತ್‌ ರಾಜ್‌ ಇಲಾಖೆಯ ಸೂಚನೆ ಮೇರೆಗೆ ರಸ್ತೆಯನ್ನು ಸಂಪೂರ್ಣವಾಗಿ ಬಂದ್‌ ಮಾಡಿ, ನಾಮಫಲಕ ಅಳವಡಿಸುತ್ತೇವೆ.
– ಸುದರ್ಶನ್‌, 
ಪಿಡಿಒ ಯಡಮೊಗೆ 

ಉದಯವಾಣಿ ಎಚ್ಚರಿಸಿತ್ತು
ಯಡಮೊಗೆ-ಹೊಸಂಗಡಿ ಸಂಪರ್ಕ ಕಡಿದುಕೊಳ್ಳುವ ಆತಂಕದ ಬಗ್ಗೆ ಉದಯವಾಣಿ ಜೂ. 9ರಂದು ವಿಶೇಷ ವರದಿ ಮೂಲಕ ಗಮನಸೆಳೆದಿತ್ತು. ಆದರೆ ಆಡಳಿತ ವರ್ಗದ ಆಲಸ್ಯದಿಂದಾಗಿ ಸ್ಥಳೀಯರು ಸಂಕಷ್ಟಕ್ಕಿಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next