Advertisement

ಉತ್ತರ ಕರ್ನಾಟಕ ಮಾದರಿ ನೆರೆ ಪರಿಹಾರ

07:50 PM Nov 16, 2019 | Naveen |

ಹೊಸದುರ್ಗ: ಹೊಸದುರ್ಗ ತಾಲೂಕು ನೆರೆಪೀಡಿತ ತಾಲೂಕಾಗಿ ಘೋಷಣೆಯಾಗಿದ್ದು, ನೆರೆ ಪೀಡಿತವಾಗಿದ್ದ ಉತ್ತರಕರ್ನಾಟಕದ ಮಾದರಿಯಲ್ಲೇ ಎಲ್ಲ ರೀತಿಯ ಸೌಲಭ್ಯ ಸಿಗಲಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್‌ ಹೇಳಿದರು.

Advertisement

ತಾಲೂಕಿನ ನೀರಗುಂದ ಗ್ರಾಮದ ಬನಶಂಕರಿದೇವಿ ನೂತನ ದೇವಸ್ಥಾನದ ಲೋಕಾರ್ಪಣೆ ಅಂಗವಾಗಿ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಳೆ ಹಾನಿಗೆ 10 ಕೋಟಿ ರೂ.ಅನುದಾನ ಬಂದಿದೆ. ಅದರಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ನೀರಗುಂದ ಕೆರೆಯ ಏರಿ ದುರಸ್ತಿ ಸೇರಿದಂತೆ ಇನ್ನಿತರ ಮೂಲಸೌಕರ್ಯ ಒದಗಿಸಲಾಗುವುದು. 1.25 ಕೋಟಿ ರೂ. ವೆಚ್ಚದಲ್ಲಿ ಒಂದು ತಿಂಗಳೊಳಗೆ ನೀರಗುಂದ-ಸಾಣೇಹಳ್ಳಿ-ಕೋಡಿಹಳ್ಳಿ ರಸ್ತೆ ಸುಧಾರಣೆ ಮಾಡಲಾಗುವುದು ಎಂದರು.

ಕುಂಚಿಟಿಗ ಮಹಾಸಂಸ್ಥಾನದ ಡಾ| ಶಾಂತವೀರ ಸ್ವಾಮೀಜಿ ಮಾತನಾಡಿ, ಜಾತಿಯ ವೈಭವೀಕರಣ ಆಗುತ್ತಿರುವುದು ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಪ್ರಾಚೀನ ಕಾಲದಲ್ಲಿ ನಮ್ಮ ತಪ್ಪು ತಿದ್ದಲು ದೇಗುಲಗಳಿದ್ದವು. ಇಂದು ಶಾಲೆಗಳು ಆ ಕೆಲಸ ಮಾಡುತ್ತಿವೆ. ಹಿಂದೆ ಕುಂಚಿಟಿಗರು ಹಾಗೂ ದೇವಾಂಗ ಸಮಾಜದವರು ಅಣ್ಣ ತಮ್ಮಂದಿರಾಗಿ ಬದುಕುತ್ತಿದ್ದರು. ಕಲಿಯುಗದಲ್ಲಿ ಅನೇಕ ಜಾತಿಗಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ನೇಕಾರರ ಒಕ್ಕೂಟದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಮಾತನಾಡಿ, ಬಾದಾಮಿ ಬನಶಂಕರಿ ಹಾಗೂ ನೀರಗುಂದಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿನ ದೇವಾಂಗ ಸಮಾಜದವರು ದೇಗುಲ ನಿರ್ಮಾಣಕ್ಕೆ ಕೊಟ್ಟಿರುವ ಒತ್ತನ್ನು ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೂ ನೀಡಬೇಕು. ದೇವಾಂಗ ನೇಕಾರ ಸಮುದಾಯದಲ್ಲಿ 29 ಉಪಪಂಗಡಗಳಿದ್ದು, ಸಮಾಜದ ಅಭಿವೃದ್ಧಿಗೆ ಭೇದ ಮರೆತು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ತಾಲ್ಲೂಕು ದೇವಾಂಗ ಸಂಘದ ಅಧ್ಯಕ್ಷ ಗೋ. ತಿಪ್ಪೇಶ್‌ ಮಾತನಾಡಿ, ಮಾನವ ಕುಲದ ಮೈ ಮುಚ್ಚಲು ಬಟ್ಟೆ ನೇಯುವ ಶ್ರೇಷ್ಠ ಕಾಯಕ ಮಾಡುತ್ತಿರುವ ದೇವಾಂಗ ಸಮಾಜದ ಸಂಸ್ಕೃತಿ ಇತರೆ ಸಮುದಾಯಗಳಿಗೆ ಮಾದರಿಯಾಗಿದೆ ಬಣ್ಣಿಸಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬುರುಡೇಕಟ್ಟೆ ರಾಜೇಶ್‌ ಮಾತನಾಡಿ, ತಾಲೂಕಿನಲ್ಲಿ ದೇವಾಂಗ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ರಾಜಕೀಯ ಪ್ರಾತಿನಿಧ್ಯ ಇಲ್ಲದಿರುವುದರಿಂದ ಎಲ್ಲಾ ಕ್ಷೇತ್ರದಲ್ಲಿ ಸಮಾಜ ಹಿಂದುಳಿದಿದೆ. ಎಂದು ವಿಷಾದಿಸಿದರು.

Advertisement

ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಆರ್‌. ಹನುಮಂತಪ್ಪ ಮಾತನಾಡಿ, ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಎಲ್ಲಾ ಸಮುದಾಯದವರು ಸಾಮರಸ್ಯ ಹಾಗೂ ಸ್ನೇಹಪರತೆಯಿಂದ ಜೀವಿಸಬೇಕು ಎಂದರು. ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾವರಕೆರೆ ಶಿಲಾ ಮಠದ ಶ್ರೀಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ನೂತನ ದೇಗುಲಕ್ಕೆ ಕಲಶಾರೋಹಣ ನೆರವೇರಿಸಿದರು. ನೀರಗುಂದ ದೇವಾಂಗ ಸಮಾಜದ ಅಧ್ಯಕ್ಷ ಎನ್‌.ವಿ. ಶೇಖರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಹೊಸದುರ್ಗ ದೇವಾಂಗ ಸಮಾಜದ ಅಧ್ಯಕ್ಷ ಡಿ.ಆರ್‌. ಗೋವಿಂದರಾಜು, ಪುರಸಭೆ ಸದಸ್ಯ ದಾಳಿಂಬೆ ಗಿರೀಶ್‌, ಕಾರ್ಮಿಕ ನಿರೀಕ್ಷಕ ಪರಶುರಾಮ್‌, ಗ್ರಾಪಂ ಅಧ್ಯಕ್ಷ ಕೆ.ಆರ್‌. ಪರಮೇಶ್ವರಪ್ಪ, ಸದಸ್ಯೆ ಓಂಕಾರಮ್ಮ ತಿಪ್ಪೇಶಪ್ಪ, ಮುಖಂಡರಾದ ಮಹೇಶ್‌, ಈ. ಬೈರಪ್ಪ, ಶಂಕ್ರಮ್ಮ ವಿಜಯಕುಮಾರ್‌, ಗೌಡ್ರು ಪುಟ್ಟಪ್ಪ, ರಾಮಣ್ಣ, ಕೃಷ್ಣಪ್ಪ, ಚನ್ನಬಸವಣ್ಣ, ಮಲ್ಲಣ್ಣ, ಶಿಲ್ಪಿ ಮಲ್ಲೇಶಾಚಾರ್‌, ಸುರೇಶ್‌ ನೀರಗುಂದ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next