ಸಾಗರ: ಪ್ರಸಕ್ತ ಸಾಲಿನ ಅತಿವೃಷ್ಟಿಯಿಂದ ಅಡಿಕೆ ತೋಟದಲ್ಲಾಗಿರುವ ಕೊಳೆ ರೋಗದ ತೀವ್ರತೆ ಅರಿಯಲು, ಬೆಳೆಗಾರರಿಗೆ ನೆರವಾಗುವಂತೆ ತೋಟಗಾರಿಕಾ ಸಚಿವರಿಗೆ ಇತ್ತೀಚೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ಮಾಡಿದ್ದ ಮನವಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸ್ಪಂದಿಸಿದ್ದು, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇ ನಡೆಸಿ ಪರಿಹಾರದ ಕ್ರಮ ತೆಗೆದುಕೊಳ್ಳುವಂತೆ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಕೆಲ ದಿನದ ಹಿಂದೆ ಬೆಂಗಳೂರಿನಲ್ಲಿ ತೋಟಗಾರಿಕಾ ಸಚಿವರಿಗೆ ಮನವಿ ಸಲ್ಲಿಸಿದ್ದ ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಮಲೆನಾಡಿನಲ್ಲಿ ವಿಪರೀತ ಮಳೆಯಿಂದಾಗಿ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಎದುರಿಸುತ್ತಿದ್ದಾರೆ.
ಸಾಗರ ಹೊಸನಗರ ಭಾಗದ ಬಹುತೇಕ ಅಡಿಕೆ ತೋಟದಲ್ಲಿ ಅತಿವೃಷ್ಟಿ, ಕೊಳೆರೋಗದಿಂದ ಬೆಳೆ ಸಂಪೂರ್ಣ ಹಾನಿಯಾಗಿದ್ದಲ್ಲದೆ, ಸುಮಾರು 350 ಕೋಟಿ ರೂ.ಗಳಷ್ಟು ಬೆಳೆ ನಷ್ಟದ ಅಂದಾಜಿಸಲಾಗಿದೆ.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಸರಕಾರದ ವಿಮಾ ಯೋಜನೆಯಡಿ ಕೊಳೆ ರೋಗದ ಪರಿಹಾರ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಅಡಿಕೆ ಬೆಳೆಗಾರರಿಗೆ ಅನ್ಯಾಯ ಮಾಡಿದಂತಾಗಿದೆ. ಮೊದಲಿದ್ದ ಮಾದರಿಯಂತೆಯೇ ಕೊಳೆ ರೋಗಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಕೋರಿಕೊಂಡಿದ್ದರು.
ಶಾಸಕ ಬೇಳೂರು ಮನವಿಯನ್ನು ಪರಿಶೀಲಿಸಿರುವ ಸಚಿವರು, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಲು ಅಗತ್ಯ ಸಿದ್ಧತೆ ನಡೆಸಬೇಕು. ಅಡಿಕೆ ಬೆಳೆಗಾರರ ತೊಂದರೆಗೆ ಸ್ಪಂದಿಸಬೇಕು ಎಂದು ಪತ್ರದಲ್ಲಿ ಹೇಳಿದ್ದಾರೆ.