– 1845 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಬೆಳೆದ 2800ಕ್ಕೂ ಹೆಚ್ಚು ರೈತರು
– ತೋಟಗಾರಿಕಾ ಬೆಳೆ ಅಭಿವೃದ್ಧಿ ಪಡಿಸಲು ಸೌಲಭ್ಯ ಒದಗಿಸಲು ಮುಂದಾದ ಇಲಾಖೆ
– ಹತ್ತು ಹಲವಾರು ರೈತೋಪಯೋಗಿ ಯೋಜನೆಗಳಿಗೆ ಆರ್ಥಿಕ ಸಹಾಯಧನ-ಸೌಕರ್ಯ
ಕಲಘಟಗಿ: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಗಳ ಮೂಲಕ ತೋಟಗಾರಿಕಾ ಇಲಾಖೆ ರೈತರ ಸಮಗ್ರ ಅಭಿವೃದ್ಧಿಗೆ ಅಣಿಯಾಗಲು ಕಾರ್ಯೋನ್ಮುಖವಾಗಿದೆ.
ಕಲಘಟಗಿ ತಾಲೂಕಿನ 1845 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 2800ಕ್ಕೂ ಹೆಚ್ಚು ರೈತರು ತೋಟಗಾರಿಕಾ ಬೆಳೆ ಬೆಳೆಯುತ್ತಿದ್ದಾರೆ. ತೋಟಗಾರಿಕಾ ಬೆಳೆ ಅಭಿವೃದ್ಧಿ ಪಡಿಸಲು ಇಲಾಖೆ ಮುಖೇನ ರಾಜ್ಯ-ಕೇಂದ್ರ ಸರಕಾರಗಳು ಹತ್ತು ಹಲವಾರು ಯೋಜನೆಗಳ ಮೂಲಕ ಸೌಲಭ್ಯ ಒದಗಿಸಲು ಮುಂದಾಗಿವೆ. ರೈತ ಸಮೂಹ ತೋಟಗಾರಿಕಾ ಬೆಳೆ ಬೆಳೆಯುವ ಮೂಲಕ ಆರ್ಥಿಕ ಸಬಲತೆ ಸಾ ಧಿಸಲು ನೀರು-ಕಳೆ ನಿರ್ವಹಣೆಗೆ ಹನಿ ನೀರಾವರಿ, ಅವಶ್ಯಕ ಯಂತ್ರೋಪಕರಣ, ಬೆಳೆ ಕೊಯ್ಲೋತ್ತರ ನಿರ್ವಹಣೆ ಹೀಗೆ ಹತ್ತು ಹಲವಾರು ರೈತೋಪಯೋಗಿ ಯೋಜನೆಗಳಿಗೆ ಆರ್ಥಿಕ ಸಹಾಯಧನದೊಂದಿಗೆ ಅವಶ್ಯವಿರುವ ಸೌಕರ್ಯ ಒದಗಿಸಲಾಗುತ್ತಿದೆ.
ತಾಲೂಕಿನಾದ್ಯಂತ ರೈತರ ಬೇಡಿಕೆಗಳಿಗೆ ಅನುಗುಣವಾಗಿ ದೊಡ್ಡ ಪ್ರಮಾಣದ ಹಸಿರುಮನೆ, ನೆರಳು ಪರದೆ, ಶೀಥಲ ಗೃಹಗಳನ್ನು ನೀಡಲಾಗುತ್ತಿದೆ. ಇಳುವರಿಯಲ್ಲಿ ಕುಂಠಿತಗೊಂಡ ಮಾವು-ಚಿಕ್ಕು ಬೆಳೆಗಳನ್ನು ರೈತರು ತಮ್ಮ ಜಮೀನುಗಳಿಂದ ತೆಗೆಯುತ್ತಿದ್ದು, ಅದರ ಬದಲಾಗಿ ರೈತ ವರ್ಗದ ಆರ್ಥಿಕ ಸಬಲತೆ ಹೆಚ್ಚಿಸಲು ಇಲಾಖೆ ಇಲ್ಲಿನ ಹವಾಮಾನಕ್ಕೆ ಅನುಗುಣವಾಗಿ ಹೆಚ್ಚು ಇಳುವರಿ ನೀಡುವ ಗೋಡಂಬಿ, ಅಡಿಕೆ, ಬಾಳೆ, ನುಗ್ಗೆ, ಹೊಸದಾಗಿ ಡ್ರ್ಯಾಗನ್ ಫ್ರೂಟ್ ಬೆಳೆಯುವಂತೆ ರೈತರಿಗೆ ಅರಿವು ಮೂಡಿಸಿ ಅವಶ್ಯಕ ಮಾಹಿತಿ ನೀಡಲಾಗುತ್ತಿದೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಮಾವು, ಬಾಳೆ, ಬಿಡಿ ಹೂ, ಕತ್ತರಿಸಿದ ಹೂ, ಗೆಡ್ಡೆಜಾತಿ ಹೂ, ಹೈಬ್ರಿàಡ್ ತರಕಾರಿ ಮುಂತಾದವುಗಳ ಪ್ರದೇಶ ವಿಸ್ತರಣೆಗೆ ಸಹಾಯಧನ ನೀಡಲಾಗುತ್ತದೆ. ಅದಲ್ಲದೇ ಹೊಸ ಪ್ರದೇಶ ವಿಸ್ತರಣೆಯಲ್ಲಿ ಮಾವು, ಬಾಳೆ ಬೆಳೆಗಳಿಗೆ ಸಹಾಯಧನ ಪಡೆದ ರೈತರಿಗೆ ನಂತರದ ವರ್ಷದಲ್ಲಿ ಅವುಗಳ ನಿರ್ವಹಣೆಗೆ ಸಹಾಯಧನ ನೀಡಲಾಗುತ್ತದೆ. ಉದಾಹರಣೆಗೆ ಬಾಳೆ ಬೆಳೆಯ ಹೊಸ ಪ್ರದೇಶ ವಿಸ್ತರಣೆಯ ಪ್ರತಿ ಹೆಕ್ಟೇರ್‌ಗೆ 30,600 ರೂ. ಹಾಗೂ ಮೊದಲ ವರ್ಷದ ನಿರ್ವಹಣೆಗೆ 10,400 ರೂ. ಸಹಾಯಧನ ನೀಡಲಾಗುತ್ತಿದೆ.
ತಾಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿರುವ ತೋಟಗಾರಿಕೆ ಕ್ಷೇತ್ರದಲ್ಲಿ ಪ್ರತಿ ವರ್ಷ ಸಾರ್ವಜನಿಕರಿಂದ ಬೇಡಿಕೆಯುಳ್ಳ ಹಾಗೂ ಇಲಾಖೆ ನೀಡಿದ ಗುರಿಯನ್ವಯ ಗಿಡ ಬೆಳೆಸಿ ವಿತರಿಸಲಾಗುತ್ತಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಹಾಂತೇಶ ಪಟ್ಟಣಶೆಟ್ಟಿ ತಿಳಿಸಿದ್ದಾರೆ.