Advertisement

ತೋಟಗಾರಿಕೆ ಬೆಳೆಗೆ ಸುಧಾರಿತ ಕ್ರಮ ಅಗತ್ಯ

06:02 PM Dec 28, 2021 | Team Udayavani |

ಬಾಗಲಕೋಟೆ: ರೈತರ ಆದಾಯ ದ್ವಿಗುಣಗೊಳ್ಳಬೇಕು ಎಂಬ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವಾರು ಯೋಜನೆ ರೂಪಿಸಿದೆ. ಆ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು. ಕೃಷಿ ಜತೆಗೆ ತೋಟಗಾರಿಕೆ ಉತ್ಪನ್ನ ಹೆಚ್ಚಾಗಿ ಬೆಳೆಯಬೇಕು. ಆ ಮೂಲಕ ಆರ್ಥಿಕ ಸುಧಾರಣೆ ಕಂಡುಕೊಳ್ಳಬೇಕು ಎಂದು ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖಿಕ ಸಚಿವ ಮುನಿರತ್ನ ಹೇಳಿದರು.

Advertisement

ನವನಗರದ ಉದ್ಯಾನಗಿರಿಯ ತೋಟಗಾರಿಕೆ ವಿವಿಯಲ್ಲಿ ಮೂರು ದಿನಗಳಿಂದ ನಡೆದ ತೋಟಗಾರಿಕೆ ಮೇಳದ ಸಮಾರೋಪ ಸಮಾರಂಭದಲ್ಲಿ ವರ್ಚ್ಯುವಲ್‌ ಮೂಲಕ ಅವರು ಮಾತನಾಡಿದರು.

ತೋಟಗಾರಿಕೆ ಬೆಳೆಯ ಜತೆಗೆ ಸಮಗ್ರ ತೋಟಗಾರಿಕೆ ಮತ್ತು ಇತರೆ ಕೃಷಿ ಆಧಾರಿತ ಬೆಳೆ ಬೆಳೆಯಬೇಕು. ಇದಕ್ಕೆ ಸುಧಾರಿತ ಕ್ರಮ ಅನುಸರಿಸಬೇಕು. ಆ ಮೂಲಕ ಆದಾಯ ಪಡೆಯಲು ರೈತರು ಮುಂದಾಗಬೇಕು. ವಿಶ್ವ ವಿದ್ಯಾಲಯದ ವಿಜ್ಞಾನಿಗಳೊಂದಿಗೆ ಚರ್ಚಿಸಿ ಸುಧಾರಿತ ಕ್ರಮ ಅಳವಡಿಸಿಕೊಂಡು ಮಾದರಿ ರೈತರಾಗಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪುರ ಮಾತನಾಡಿ, ಅಭಿವೃದ್ಧಿಗೆ ಪೂರಕವಾದ ಸಂಶೋಧನೆಗಳು ರೈತರ ಜಮೀನುಗಳಿಗೆ ತಲುಪಿಸುವ ಕಾರ್ಯ ವಿಶ್ವ ವಿದ್ಯಾಲಯ ಮಾಡಬೇಕು. ಅಂದಾಗ ಮಾತ್ರ ರೈತರ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಂಶೋಧನೆಗಳು ಲ್ಯಾಬ್‌ನಿಂದ ರೈತರ ಜಮೀನುಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಬೇಕು.

ವಿವಿಧ ತಳಿ ಹಾಗೂ ಮಾರುಕಟ್ಟೆ ಬಗ್ಗೆ ಮಾಹಿತಿ ಒದಗಿಸಲು ತಾಲೂಕು ಮಟ್ಟದಲ್ಲಿ ಮಾಹಿತಿ ಕೇಂದ್ರ ಸ್ಥಾಪನೆ ಕ್ರಮ ವಹಿಸಬೇಕು. ಅಂದಾಗ ಮಾತ್ರ ರೈತರಿಗೆ ಅನುಕೂಲವಾಗಲಿದೆ ಎಂದರು.

Advertisement

ಇನ್ನೋರ್ವ ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ ಮಾತನಾಡಿ, ವಿಜಯಪುರ ಜಿಲ್ಲೆಯ ಭಾಗದಲ್ಲಿ ಹಣ್ಣುಗಳ ಬೆಳೆ ಉತ್ಪಾದನೆಗೆ ಉತ್ತಮ ಹವಾಮಾನವಿದೆ. ಬಾಗಲಕೋಟೆಯ ಕಲಾದಗಿ ಭಾಗದಲ್ಲಿ ಹೆಚ್ಚು ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆಯನ್ನು ಉತ್ತೇಜಿಸಲು ವಿವಿ ಮುಂದಾಗಬೇಕು. ರೈತರಿಗೆ ಪ್ರೋತ್ಸಾಹ ಹಾಗೂ ಸಹಕಾರ ದೊರೆತಲ್ಲಿ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಎಲ್ಲ ತರಹದ ಭೂಮಿ ಇದ್ದು, ಸಲಹೆ ಸೂಚನೆಗಳು ರೈತರ ಬಾಗಿಲಿಗೆ ಮುಟ್ಟಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.

ತೋಟಗಾರಿಕೆ ವಿವಿಯ ವಿಶ್ರಾಂತ ಕುಲಪತಿ ಡಾ|ಎಸ್‌. ಬಿ.ದಂಡಿನ್‌, ಬೆಂಗಳೂರಿನ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜ, ರಾಜ್ಯ ಲಿಂಬೆ ಬೆಳೆಗಾರರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿದರು.

ವಿವಿಯ ವಿಸ್ತರಣಾ ನಿರ್ದೇಶಕ ಡಾ|ಎಸ್‌.ಐ.ಅಥಣಿ ತೋಟಗಾರಿಕೆ ಮೇಳದ-2021ರ ವರದಿ ವಾಚನ ಮಾಡಿದರು. ಇದೇ ಸಂದರ್ಭದಲ್ಲಿ ವಾರ್ಷಿಕ ವರದಿ ಸಿಡಿ ಹಾಗೂ ಸುಜಾಲಾ ಯೋಜನೆ ದಾಖಲಾತಿಯ ಗ್ರಂಥ ಬಿಡುಗಡೆ ಮಾಡಲಾಯಿತು. ಫಲಶ್ರೇಷ್ಠ ರೈತರಿಗೆ ಪ್ರಶಸ್ತಿ ಪ್ರದಾನ: ತೋಟಗಾರಿಕೆ ಮೇಳದ 3ನೇ ದಿನವಾದ ಸೋಮವಾರ 8 ಜನ ಫಲಶ್ರೇಷ್ಠ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರು ನಗರದ ಎಚ್‌.ಡಿ. ಸುಬ್ಬಣ್ಣ, ಮೈಸೂರಿನ ಚಿಕ್ಕಸ್ವಾಮಿ ಎಂ, ಮಂಡ್ಯದ ಪ್ರಸನ್ನ ಜಿ.ಸಿ, ಚಿಕ್ಕಬಳ್ಳಾಪುರದ ರವೀಂದ್ರ ರೆಡ್ಡಿ, ಚಾಮರಾಜ ನಗರದ ರಾಘವೇಂದ್ರ, ಕೋಲಾರದ ಟಿ.ನಾರಾಯಣಪ್ಪ ಹಾಗೂ ಹಾಸನ ಜಿಲ್ಲೆಯ ನವೀನ್‌ ಕುಮಾರ ಸಿ.ಎಂ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಚಿತ್ತರಗಿ ವಿಜಯ ಮಹಾಂತ ತೀರ್ಥ ಶಿರೂರಿನ ಡಾ| ಬಸವಲಿಂಗ ಸ್ವಾಮೀಜಿ, ತೋಟಗಾರಿಕೆ ವಿವಿಯ ಕುಲಪತಿ ಡಾ| ಕೆ.ಎಂ.ಇಂದಿರೇಶ, ಡೀನ್‌ ಡಾ|ಬಿ.ಎಸ್‌.ಕುಲಕರ್ಣಿ, ಡೀನ್‌ ವಿದ್ಯಾರ್ಥಿ ಕಲ್ಯಾಣ ಡಾ| ರಾಮಚಂದ್ರ ನಾಯ್ಕ ಕೆ.ಆರ್‌, ಕುಲಸಚಿವ ಡಾ| ಟಿ.ಬಿ.ಅಳ್ಳೊಳ್ಳಿ ಉಪಸ್ಥಿತರಿದ್ದರು. ರೈತರಿಗೆ ಪ್ರೋತ್ಸಾಹ ಹಾಗೂ ಸಹಕಾರ ದೊರೆತಲ್ಲಿ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಅವಳಿ ಜಿಲ್ಲೆಯಲ್ಲಿ ಎಲ್ಲ ತರಹದ ಭೂಮಿ ಇದ್ದು, ಸಲಹೆ ಸೂಚನೆಗಳು ರೈತರ ಬಾಗಿಲಿಗೆ ಮುಟ್ಟಿಸುವ ಕೆಲಸ ವಿಜ್ಞಾನಿಗಳು ಮಾಡಬೇಕು.
ಹನಮಂತ ನಿರಾಣಿ,
ವಿಧಾನಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next