ಶಿರಸಿ: ಉತ್ತರ ಕನ್ನಡ ಅಪ್ಪಟ ತೋಟಗಾರಿಕಾ ಜಿಲ್ಲೆ. 30 ಸಾವಿರ ಹೆಕ್ಟೇರ್‌ಗೂ ಅಧಿಕ ಅಡಿಕೆ ಕ್ಷೇತ್ರವಿದೆ. ಜೊತೆಗೆ ಬೆಳೆಯುತ್ತಿರುವ ಕಾಳು ಮೆಣಸು, ಕೊಕ್ಕೋ, ತೆಂಗು, ಶುಂಠಿ, ಅನಾನಸ್, ಪಪ್ಪಾಯಿ, ಬಾಳೆಕಾಯಿ ಕೃಷಿಗಳೂ ನಡೆಯುತ್ತಿವೆ.
ಜಿಲ್ಲೆಯಲ್ಲಿ ತೋಟಗಾರಿಕಾ ಬೇಸಾಯವೇ ರೈತರ, ರೈತರನ್ನು ನಂಬಿದ ಪೇಟೆಯ ಬದುಕೂ ನಿಂತಿದೆ. ಗೊಬ್ಬರ ಮಾರಾಟದಿಂದ ಹಿಡಿದು ಅಡಿಕೆ ಕೊಳೆಗೆ ಬೋರ್ಡೋ, ಸುಣ್ಣದ ವಹಿವಾಟಿನ ತನಕ ಮಾರುಕಟ್ಟೆಯ ವಹಿವಾಟು ಕೂಡ ಬೇಸಾಯದ ಮೇಲೇ ಇದೆ.
ಏನೆಲ್ಲ ಗೊಂದಲ?: ಜಿಲ್ಲೆಯಲ್ಲಿ ಅಡಿಕೆ, ಕೊಕ್ಕೋ, ಶುಂಠಿಗೆ ಕೊಳೆ, ಕಾಳು ಮೆಣಸಿಗೆ ಸೊರಗು ರೋಗಗಳ ಕಾಟವೂ ಇದೆ. ಜಿಲ್ಲೆಯಲ್ಲಿ ಮಾವಿನ ಕಾಯಿಗೆ ಒಳ್ಳೆಯ ಬೇಡಿಕೆ ಇದೆ. ಆದರೆ, ಹಣ್ಣಿಗೆ ನೊಣಗಳ ಕಾಟ, ಗೇರು ಬೀಜಕ್ಕೆ ಕಾಯಿ ಕೊರಕ, ಬಾಳೆಗೆ ಕಟ್ಟೆ ಒಂದೆರಡೇ ಅಲ್ಲ. ಈ ವರ್ಷ ತೋಟಗಾರಿಕಾ ಕೃಷಿ ಅನುಕೂಲಕರ ಎಂದರೆ, ಅತಿ ಮಳೆಗೆ, ಸಕಾಲಕ್ಕೆ ಮಳೆ ಬಾರದೇ ಬೆಳೆ ನಷ್ಟವಾಗುತ್ತದೆ. ರೈತರು ಬೇಸಾಯ ಮಾಡುತ್ತಿದ್ದರೆ ಇನ್ನೊಂದಡೆ ರೋಗಗಳ ಕಾಟ ಕೂಡ ಕಾಡುತ್ತಿದೆ. ಇದಕ್ಕಾಗಿ ಆಧುನಿಕ ಕೃಷಿಗೂ, ಸಾವಯವ ರಾಸಾಯನಿಕ ಮಿಶ್ರ ಕೃಷಿಗೂ ರೈತರು ಒಗ್ಗಿಕೊಳ್ಳುತ್ತಿದ್ದಾರೆ.
ಬಂತು ಕ್ಯಾಲೆಂಡರ್!: ಕಳೆದ ವರ್ಷದಿಂದ ತೋಟಗಾರಿಕಾ ಇಲಾಖೆ ಒಂದು ಹೊಸ ಪ್ರಯೋಗ ನಡೆಸುತ್ತಿದ್ದು, ಮಾರ್ಗದರ್ಶನ ನೀಡುವಲ್ಲಿ ಈ ಹೊಸ ಶ್ರಮ ಫಲ ಕೊಟ್ಟಿದೆ. ಈಗಾಗಲೇ ಬೇರೆ ಬೇರೆ ಮಾದರಿಯಲ್ಲಿ ಕರಪತ್ರ ತಲುಪಿಸಿದರೂ ಪ್ರಯೋಜನ ಆಗಿರಲಿಲ್ಲ. ಪ್ರತಿ ಮಾಸದಲ್ಲೂ ಏನೆಲ್ಲ ಕ್ರಮ ಕೈಗೊಳ್ಳಬೇಕು, ರೈತರು ಯಾವ ಗೊಬ್ಬರ, ಔಷಧ ಹಾಕಬೇಕು ರೈತರಿಗೆ ಪ್ರತೀ ತಿಂಗಳು ತಿಳಿಸುವುದೇ ತೊಂದರೆ ಆಗತ್ತಿತ್ತು. ಪ್ರತಿ ತಿಂಗಳು ಏನು ಮಾಡಬೇಕು ಎಂದು ಇಲಾಖೆ ಅಧಿಕಾರಿಗಳನ್ನೋ, ಗೊಬ್ಬರ ಕೊಡುವ ಅಂಗಡಿಯವರನ್ನೇ ಕೇಳುತ್ತಿದ್ದರು. ಇದನ್ನು ತಪ್ಪಿಸಿ ಕರಾರುವಕ್ಕಾದ ಮಾಹಿತಿ ಒದಗಿಸಲು ಶಿರಸಿ ತೋಟಗಾರಿಕಾ ಅಧಿಕಾರಿ ಸತೀಶ ಹೆಗಡೆ ಹಾಗೂ ಅವರ ತಂಡ ಮಾಹಿತಿ ನೀಡುವ ಕ್ಯಾಲೆಂಡರ್ ಪ್ರಕಟಿಸಿದೆ.
ಏನೇನಿದೆ ಇಲ್ಲಿ?: ಏಪ್ರಿಲ್‌ನಿಂದ ಮುಂದಿನ ಮಾರ್ಚ್ ತನಕ ರೈತರಿಗೆ ಸಮಗ್ರ ತೋಟಗಾರಿಕಾ ಮಾಹಿತಿ ನೀಡುವ ಕ್ಯಾಲೆಂಡರ್ ಇದಾಗಿದೆ. ಮಾವು, ಗೇರಿನ ಬೆಳೆ ಉಳಿಸಿಕೊಳ್ಳಲು ಮಾಸಿಕ ಏನೇನು ಮಾಡಬೇಕು? ಕಾಳು ಮೆಣಸಿನ ರಕ್ಷಣೆ ಹೇಗೆ? ಬೋರ್ಡೋ ದ್ರಾವಣ ಸಿಂಪರಣೆ ಯಾವ ಕಾಲಕ್ಕೆ? ಎಳೆ ಅಡಿಕೆ ಹೀರುವ ತಿಗಣೆ ನಿಯಂತ್ರಣ ಹೇಗೆ? ಮಾಹಿತಿ ಇದೆ.ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಾವ ಕಾಲಕ್ಕೆ ಏನು ಮಾಡಬಹುದು? ಯಾವ ಕಾಲಕ್ಕೆ ಯಾವ ಸಹಾಯಧನಕ್ಕೆ ತೋಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಬಹುದು? ಯಾವುದಕ್ಕೆ ಎಷ್ಟು ಸಹಾಯಧನ ಸಿಗುತ್ತದೆ? ರೇವತಿ, ಭರಣಿ ನಕ್ಷತ್ರ ಎಂದು? ಜೇನು ದಿನ ವಿಶೇಷತೆ ಏನು? ಅಧಿಕಾರಿಗಳ ಸಂಪರ್ಕ ಸಂಖ್ಯೆ ಎಲ್ಲವೂ ಇಲ್ಲಿದೆ. ಶಿರಸಿ ತೋಟಗಾರಿಕಾ ಇಲಾಖೆ ಪ್ರಕಟಿಸಿದ ಕ್ಯಾಲೆಂಡರ್‌ನಲ್ಲಿ ಸ್ಥಳೀಯ ಸಾಧಕ ರೈತರ ಚಿತ್ರಗಳೂ ಇವೆ.
ರೈತರು ತೋಟಗಾರಿಕಾ ಬೆಳೆಗಳಿಗೆ ಏನೇನು ಮಾಡಬೇಕು ಎಂಬುದನ್ನು ತಿಳಿಸಿ, ಅವರ ಕೃಷಿ ಬದುಕಿನಲ್ಲಿ ರೂಢಿಸಬೇಕು ಎಂಬ ಕಾರಣಕ್ಕೆ, ಇಲಾಖೆಯ ಸೌಲಭ್ಯ ಕೂಡ ಪಡೆದುಕೊಂಡು ಪ್ರಗತಿಪರರಾಗಬೇಕು ಎಂಬ ಆಶಯದಲ್ಲಿ ಈ ಕ್ಯಾಲೆಂಡರ್ ಕೊಡುತ್ತಿದ್ದೇವೆ.
– ಸತೀಶ ಹೆಗಡೆ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ, ಶಿರಸಿ
-ರಾಘವೇಂದ್ರ ಬೆಟ್ಟಕೊಪ್ಪ