Advertisement

ತುರ್ತು ಕರೆಗೆ ಸಿಬಂದಿ ಕೊರತೆ: ಅಗ್ನಿಶಾಮಕ ದಳ ಹರಸಾಹಸ

03:02 AM Mar 28, 2019 | Team Udayavani |

ಕಾಸರಗೋಡು: ನಗರ ಪ್ರದೇಶ ಮತ್ತು ಪರಿಸರ ಪ್ರದೇಶಗಳಲ್ಲಿ ಅಗ್ನಿ ಅನಾಹುತ ಸಹಿತ ವಿವಿಧ ಅನಾಹುತಗಳು ಸಂಭವಿಸಿದಾಗ ರಕ್ಷಿಸಲು ಸ್ಥಳಕ್ಕೆ ಧಾವಿಸಿ ತಲುಪಲು ಅಗ್ನಿಶಾಮಕ ದಳಕ್ಕೆ ಕಷ್ಟವಾಗುತ್ತಿದೆ. ಇದಕ್ಕೆ ಅಗ್ನಿಶಾಮಕ ದಳದಲ್ಲಿ ಸಿಬಂದಿ ಕೊರತೆ ಹಾಗೂ ವಾಹನಗಳ ಕೊರತೆ ಪ್ರಮುಖ ಕಾರಣವಾಗಿದೆ.

Advertisement

ಕಾಸರಗೋಡು ಅಗ್ನಿಶಾಮಕ ದಳದ ವ್ಯಾಪ್ತಿಯಲ್ಲಿ ಜನವರಿ ತಿಂಗಳಿಂದ ಜಿಲ್ಲೆಯಲ್ಲಿ ಈ ವರೆಗೆ 1,000 ದಷ್ಟು ಬೆಂಕಿ ಅನಾಹುತಗಳು ನಡೆದಿವೆ. ಬೇಸಗೆ ತಾಪ ಹೆಚ್ಚುತ್ತಿರುವಂತೆ ಬೆಂಕಿ ಅನಾಹುತ ಇನ್ನಷ್ಟು ಅಧಿಕವಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ಕಾಸರಗೋಡು ಅಗ್ನಿಶಾಮಕ ದಳದ ವ್ಯಾಪ್ತಿ ಸುಮಾರು 45 ಕಿಲೋ ಮೀಟರ್‌ ಸುತ್ತಳತೆಯಲ್ಲಿದೆ. ಈ ಕಾರಣದಿಂದ ಹಲವು ಸಂದರ್ಭಗಳಲ್ಲಿ ತತ್‌ಕ್ಷಣ ಸ್ಥಳಕ್ಕೆ ಧಾವಿಸಲೋ ಬೆಂಕಿ ಆರಿಸಲೋ ತಲುಪಲು ಕಷ್ಟಪಡಬೇಕಾಗುತ್ತದೆ. ಮುಳ್ಳೇರಿಯ ಪ್ರದೇಶದಲ್ಲಿ ಅನಾಹುತ ಸಂಭವಿಸಿದರೆ ಸುಮಾರು 25 ಕಿ.ಮೀ. ದೂರಕ್ಕೆ ಅಗ್ನಿಶಾಮಕ ದಳ ಕ್ರಮಿಸಬೇಕಾಗುತ್ತದೆ.

ಕಾಸರಗೋಡು ಅಗ್ನಿಶಾಮಕ ದಳದ ವ್ಯಾಪ್ತಿಯ ಸೀತಾಂಗೋಳಿ, ಪೆರ್ಲ, ಎಣ್ಮಕಜೆ, ಏತಡ್ಕ, ಮುಳ್ಳೇರಿಯ, ನೆಲ್ಲಿಕಟ್ಟೆ, ಮಾನ್ಯ ಮೊದಲಾದ ಪ್ರದೇಶಗಳು ಬದಿಯಡ್ಕ ಅಗ್ನಿಶಾಮಕ ದಳದ ವ್ಯಾಪ್ತಿಗೆ ಬರಲಿವೆ. ಕಾಸರಗೋಡು ಜಿಲ್ಲೆಯಲ್ಲಿ ಪ್ರಸ್ತುತ ಉಪ್ಪಳ, ಕಾಸರಗೋಡು, ಕುತ್ತಿಕೋಲ್‌, ಕಾಂಞಂಗಾಡ್‌, ತೃಕ್ಕರಿಪುರ ಎಂಬಂತೆ ಐದು ಅಗ್ನಿಶಾಮಕ ದಳ ಯೂನಿಟ್‌ಗಳಿವೆ. ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ 10 ಕಿ.ಮೀ. ವ್ಯಾಪ್ತಿಯೊಳಗೆ ಅಗ್ನಿಶಾಮಕ ದಳವಿದೆ. ಆದರೆ ಕಾಸರಗೋಡು ಜಿಲ್ಲೆಯಲ್ಲಿ ಅಗ್ನಿಶಾಮಕ ದಳಕ್ಕೆ ಸಂಬಂಧಿಸಿ ಅವಗಣನೆ ಮುಂದುವರಿದಿದೆ.

1,992 ಚ. ಕಿ. ಮೀ. ವಿಸ್ತಾರದ ಕಾಸರಗೋಡು ಜಿಲ್ಲೆಯಲ್ಲಿ ಹುಲ್ಲು ಬೆಳೆಯುವ ಪಾರೆ ಪ್ರದೇಶಗಳು ಹಲವು ಇವೆ. ಬೇಸಗೆ ಕಾಲದಲ್ಲಿ ಒಣ ಹುಲ್ಲಿಗೆ ಬೆಂಕಿ ಹತ್ತಿಕೊಳ್ಳುವುದು ಸಾಮಾನ್ಯವಾಗಿದೆ. ಕಾಸರಗೋಡು ಅಗ್ನಿಶಾಮಕ ಯೂನಿಟ್‌ಗೆ ನೀಡಿದ ಮೂರು ಮೊಬೈಲ್‌ ಟ್ಯಾಂಕ್‌ ಯೂನಿಟ್‌ಗಳಲ್ಲಿ ಒಂದು ಮೂಲೆಗುಂಪಾಗಿದೆ.

Advertisement

ಬೆಂಕಿ ಆರಿಸಲು ನೀರಿಲ್ಲ
ಬೆಂಕಿ ಆರಿಸಲು ಅಗತ್ಯವುಳ್ಳ ನೀರಿಗಾಗಿ ಉಪ್ಪಳ ಅಗ್ನಿಶಾಮಕ ದಳ ಪರದಾಡುವ ಸ್ಥಿತಿ ಉಂಟಾಗಿದೆ. ಮಂಗಲ್ಪಾಡಿ ಪಂಚಾಯತ್‌ ವ್ಯಾಪ್ತಿಯ ಚೆರುಗೋಳಿ ರಸ್ತೆಯಲ್ಲಿರುವ ಪಂಚಾಯತ್‌ ಕಟ್ಟಡದಲ್ಲಿ ಉಪ್ಪಳ ಅಗ್ನಿಶಾಮಕ ದಳ ಕಾರ್ಯಾಚರಿಸುತ್ತಿದೆ. ಜನತೆ ದೀರ್ಘ‌ ಕಾಲದ ಬೇಡಿಕೆಯ ಫಲವಾಗಿ 2010 ಎಪ್ರಿಲ್‌ 17ರಂದು ಇಲ್ಲಿ ಅಗ್ನಿಶಾಮಕ ದಳ ಉದ್ಘಾಟನೆಗೊಂಡಿತು.

ಕೇವಲ 18 ಮಂದಿ ಫ‌ಯರ್‌ವೆುನ್‌
ಅಗ್ನಿಶಾಮಕ ದಳದಲ್ಲಿನ ಸಿಬಂದಿ ಸಂಖ್ಯೆಯೂ ಕಡಿಮೆ. ಇತರ ಜಿಲ್ಲಾ ಕೇಂದ್ರ ಗಳಲ್ಲಿರುವ ಅಗ್ನಿಶಾಮಕ ದಳಕ್ಕೆ ಹೋಲಿಸಿದರೆ ಕಾಸರಗೋಡು ಅಗ್ನಿಶಾಮಕ ದಳದಲ್ಲಿ ಸಿಬಂದಿ ಸಂಖ್ಯೆ ಏನೇನೂ ಸಾಲದು. ಕಾಸರಗೋಡು ಅಗ್ನಿಶಾಮಕ ದಳದಲ್ಲಿ 28 ಮಂದಿ ಫಯರ್‌ವೆುನ್‌ ಬೇಕಾಗಿದ್ದರೂ ಕೇವಲ 18 ಮಂದಿ ಇದ್ದಾರೆ. ಚಾಲಕರು 7 ಮಂದಿ ಇದ್ದಾರೆ. ಬದಿಯಡ್ಕ ದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸು ವುದಾಗಿ ಘೋಷಿಸಲಾಗಿದ್ದರೂ ಈ ವರೆಗೂ ಸಾಧ್ಯವಾಗಿಲ್ಲ.

ನೀರ್ಚಾಲಿನ ಬೇಳ ಗ್ರಾಮ ಕಚೇರಿಗೆ ಸಮೀಪದ ಎರಡು ಎಕರೆ ಸ್ಥಳವನ್ನು ಗುರುತಿಸಿ ದ್ದರೂ ಕಂದಾಯ ಇಲಾಖೆ ಯಿಂದ ಭೂಸ್ವಾಧೀನ ಕುರಿತಾದ ತಾಂತ್ರಿಕ ಅಡಚಣೆ ಯಿಂದ ಯೋಜನೆ ವಿಳಂಬವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next