ಮೈಸೂರು: ಬಿಡಾಡಿ ಕುದುರೆಗಳ ದಾಳಿಗೆ ಸಿಲುಕಿ ಸೊಪ್ಪು ಮಾರಾಟ ಮಾಡುತ್ತಿದ್ದ ಮಹಿಳೆ ಮೃತಪಟ್ಟಿರುವ ಘಟನೆ ಮೈಸೂರಿನ ಗಾಯತ್ರಿಪುರಂನ 1ನೇ ಹಂತದ ಆಚಾರಿ ಕಾಲೋನಿಯಲ್ಲಿ ಸಂಭವಿಸಿದೆ. ಉದಯಗಿರಿ ಮುನೇಶ್ವರನಗರದ ನಿವಾಸಿ ಲೇಟ್ ಕೂಸಯ್ಯ ಪತ್ನಿ ಪಾರ್ವತಮ್ಮ(55) ಮೃತ ದುರ್ದೈವಿ.
ಮನೆ ಮನೆಗೆ ತೆರಳಿ ಸೊಪ್ಪು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದ ಪಾರ್ವತಮ್ಮ, ಮಂಗಳವಾರ ಬೆಳಗ್ಗೆ 9.30ರ ವೇಳೆಯಲ್ಲಿ ಆಚಾರಿ ಕಾಲೋನಿಯಲ್ಲಿ ಸೊಪ್ಪು ಮಾರಾಟ ಮಾಡುತ್ತಿದ್ದ ವೇಳೆ ಈ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಪಾರ್ವತಮ್ಮ, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಹಿನ್ನೆಲೆ: ಮೃತ ಪಾರ್ವತಮ್ಮ ಪ್ರತಿದಿನ ಮನೆ ಮನೆಗೆ ತೆರಳಿ ಸೊಪ್ಪು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅಂತೆಯೇ ಮಂಗಳವಾರ ಬೆಳಗ್ಗೆ ಸಹ ಆಚಾರಿ ಕಾಲೋನಿ ಮನೆಯೊಂದರಲ್ಲಿ ಸೊಪ್ಪು ಮಾರಿಕೊಂಡು ಮತ್ತೂಂದು ಮನೆಯತ್ತ ತೆರಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿದ್ದ ನಾಲ್ಕೈದು ಬಿಡಾಡಿ ಕುದುರೆಗಳು ಪರಸ್ಪರ ಕಿತ್ತಾಡಿಕೊಳ್ಳಲಾರಂಭಿಸಿವೆ.
ಈ ಸಂದರ್ಭದಲ್ಲಿ ದುರಾದೃಷ್ಟವಶಾತ್ ಕುದುರೆಗಳ ದಾಳಿಗೆ ಸಿಲುಕಿದ ಪಾರ್ವತಮ್ಮ ಅವರ ಮುಖ ಹಾಗೂ ತಲೆ ಭಾಗಕ್ಕೆ ಒದ್ದು ಗಾಯಗೊಳಿಸಿವೆ. ಘಟನೆಯಲ್ಲಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆ ನೆರವಿಗೆ ಧಾವಿಸಿದ ಸ್ಥಳೀಯರು, ಗಾಯಾಳನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಸಾವನಪ್ಪಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸದಸ್ಯ ಜಿ.ಎಸ್. ಸತ್ಯರಾಜು ಹಾಗೂ ಪಾಲಿಕೆ ಪಶು ವೈದ್ಯಾಧಿಕಾರಿ ಸುರೇಶ್, ಮಹಿಳೆ ಮೇಲೆ ದಾಳಿ ನಡೆಸಿದ ಐದು ಕುದುರೆಗಳನ್ನು ವಶಕ್ಕೆ ಪಡೆದು, ವಿದ್ಯಾರಣ್ಯಪುರಂನ ಸುಯೇಜ್‌ಫಾರಂನ ಹಸುಗಳ ದೊಡ್ಡಿಗೆ ಸ್ಥಳಾಂತರಿಸಿದರು. ಅಲ್ಲದೇ ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆ ಆಗದಂತೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ನಿತ್ಯವೂ ಸಮಸ್ಯೆ: ಕುದುರೆಗಳ ದಾಳಿಯಿಂದ ಮಹಿಳೆ ಮೃತಪಟ್ಟ ಬಗ್ಗೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಈ ಭಾಗದಲ್ಲಿ ಪ್ರತಿದಿನವೂ ಬಿಡಾಡಿ ಕುದುರೆಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಜತೆಗೆ ಬೀದಿ ನಾಯಿಗಳು, ಕೋತಿಗಳ ಹಾವಳಿಯೂ ಹೆಚ್ಚಾಗಿರುವುದರಿಂದ ಮಕ್ಕಳು ಸೇರಿದಂತೆ ಪ್ರತಿಯೊಬ್ಬರೂ ರಸ್ತೆಯಲ್ಲಿ ಓಡಾಡಲು ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಕ್ರಮವಹಿಸಬೇಕೆಂದು ಆಗ್ರಹಿಸಿದರು.