ಬೆಳಗಾವಿ/ಗೋಕಾಕ: ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಕೊಣ್ಣೂರ ಮರಡಿಮಠದಲ್ಲಿಯ ಕುದುರೆಯನ್ನು ಕೋವಿಡ್ ಮಹಾಮಾರಿಯಿಂದ ಪಾರಾಗಲು ಗ್ರಾಮದಲ್ಲಿ ತಿರುಗಾಡಿಸುವ ಪ್ರತೀತಿ ಇದ್ದು, ದೈವ ಕುದುರೆ ಊರಲ್ಲಿ ಸುತ್ತು ಹಾಕಿದ ನಾಲ್ಕೇ ದಿನದಲ್ಲಿ ರವಿವಾರ ದುರದೃಷ್ಟವಶಾತ್ ಸಾವಿಗೀಡಾಗಿದ್ದು ಅಚ್ಚರಿ ಮೂಡಿಸಿದೆ.
ಮರಡಿ ಮಠದ ಶ್ರೀ ಪವಾಡೇಶ್ವರ ಮಹಾ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ಗ್ರಾಮದ ಜನತೆ ಕಾಡಸಿದ್ಧೇಶ್ವರ ಸ್ವಾಮಿ ಅವರ ಶೌರ್ಯ ಕುದುರೆಯನ್ನು ಬುಧವಾರ ಮಧ್ಯರಾತ್ರಿ 12 ಘಂಟೆಯಿಂದ ಗುರುವಾರ ಬೆಳಗ್ಗೆ 4 ಗಂಟೆಯವರೆಗೆ ಗ್ರಾಮದಲ್ಲಿ ಸಂಚರಿಸಿಸಲು ಬಿಡಲಾಗಿತ್ತು. ಕುದುರೆ ಗ್ರಾಮದಲ್ಲಿ ಸಂಚರಿಸಿದ ಕೆಲವೇ ದಿನಗಳಲ್ಲಿ ಮೃತಪಟ್ಟಿದೆ.ಇದು ಅಚ್ಚರಿಗೆ ಕಾರಣವಾಗಿದ್ದು, ಗ್ರಾಮಸ್ಥರು ಚಿಂತಾಕ್ರಾಂತರಾಗಿದ್ದಾರೆ. ಈ ದೈವ ಕುದುರೆಯಿಂದ ಗ್ರಾಮದ ಜನತೆ ಕೊರೊನಾ ಮಹಾಮಾರಿಯಿಂದ ರಕ್ಷಣೆಗೆ ಮೋರೆ ಹೋಗಿದ್ದರು.
ಕಳೆದ 51 ವರ್ಷಗಳ ಹಿಂದೆಯೂ ಮಲೇರೀಯಾ, ಪ್ಲೇಗ್ ಹಾಗೂ ಕಾಲಾರಾದಂತಹ ಸಾಂಕ್ರಾಮಿಕ ರೋಗಗಳು ಹರಡಿದ ಸಮಯದಲ್ಲಿ ಮರಡಿಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮಿ ಅವರು ಕಟ್ಟಿದ ಕುದುರೆಯನ್ನು ಮಧ್ಯರಾತ್ರಿ ಗ್ರಾಮದಾದ್ಯಂತ ಸುತ್ತಾಡಲು ಬಿಟ್ಟಿದ್ದರಂತೆ.
ಇದನ್ನೂ ಓದಿ : ಸಿನಿಮಾ ಪೋಷಕ ಕಲಾವಿದರಿಗೆ ಸಬ್ಸಿಡಿ ದರದಲ್ಲಿ ಮನೆ ಹಂಚಿಕೆ: ಡಿಸಿಎಂ ಅಶ್ವಥ್ ನಾರಾಯಣ
ಇದೇ ಮರ್ಗದರ್ಶನದಂತೆ, ಗ್ರಾಮದಲ್ಲಿ ನಡೆದುಕೊಂಡು ಬಂದ ಪ್ರತೀತಿಯಂತೆ ಕಳೆದ ವರ್ಷದ ಕೊರೊನಾ ಮೊದಲ ಅಲೆಯಲ್ಲೂ ದೈವ ಕುದುರೆಯನ್ನು ಗ್ರಾಮದಲ್ಲಿ ಸುತ್ತಾಡಲು ಬಿಡಲಾಗಿತ್ತು. ಆಗ ಗ್ರಾಮದಲ್ಲಿ ಯಾವುದೇ ಸಾವು-ನೋವುಗಳಾಗಿರಲಿಲ್ಲ. ಕೊರೊನಾ ಎರಡನೇ ಅಲೆಯಿಂದ ಪಾರಾಗಲು ಏನು ಮಾಡಬೇಕೆಂದು ತಿಳಿಯದೇ ಸಾವು ನೋವುಗಳಿಂದ ತತ್ತರಿಸಿದ ಜನರು ಕೊನೆಗೆ ಶ್ರೀಗಳನ್ನು ಭೇಟಿ ಮಾಡಿ ರೋಗ ನಿವಾರಣೆಗೆ ಪರಿಹಾರ ನೀಡುವಂತೆ ಮನವಿ ಮಾಡಿದ್ದರು. ಶ್ರೀಗಳು ತಮ್ಮ ಕುದುರೆಯನ್ನು ಊರಲ್ಲಿ ಬಿಡುವುದಾಗಿ ತಿಳಿಸಿದರು. ಆಗ ಗ್ರಾಮಸ್ಥರು ತಮ್ಮ ಇಚ್ಛೆಯಂತೆ ನಡೆಯಲಿ ಎಂದು ಕುದುರೆ ಪ್ರದಕ್ಷಿಣೆ ಹಾಕಿಸಿದ್ದರು.ಆದೇ ಕುದುರೆ ಪ್ರದಕ್ಷಿಣೆ ಹಾಕಿದ ಕೆಲವೇ ದಿನಗಳಲ್ಲಿ ರವುವಾರ ಬೆಳಗಿನ ಜಾವ ಮೃತಪಟ್ಟಿದೆ.
ಈ ಸುದ್ದಿ ತಿಳಿದ ಭಕ್ತರಿಗೆ ದೊಡ್ಡ ಆಘಾತವಾಗಿದೆ. ಗ್ರಾಮದ ಸುತ್ತಲಿನ ಸಾವಿರಾರು ಮಂದಿ ಕುದುರೆಯ ಕಳೆಬರ ನೋಡಲು ಆಗಮಿಸಿದ್ದಾರೆ. ಅಂತ್ಯಸಂಸ್ಕಾರಕ್ಕೆ ಸಾವಿರಾರು ಜನ ಜಮಾಯಿಸಿ ದೈವ ಕುದುರೆಯ ದರ್ಶನ ಪಡೆದುಕೊಂಡಿದ್ದಾರೆ.