ಗಜೇಂದ್ರಗಡ: ರೈತರ ತಾತ್ಸಾರದ ಬೆಳೆ ಜೊತೆ ಹಸುವಿನ ಆಹಾರವೆಂದೇ ಪರಿಗಣಿಸಲ್ಪಟ್ಟ ಹುರಳಿ ಫಸಲು ತಾಲೂಕಿನಾದ್ಯಂತ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ನಳನಳಿಸುತ್ತಿದೆ.
ಸದಾ ಶೇಂಗಾ, ಸೂರ್ಯಕಾಂತಿ, ಗೋವಿನ ಜೋಳ ಹಾಗೂ ಹತ್ತಿಯಂತಹ ವಾಣಿಜ್ಯ ಬೆಳೆ ಬೆಳೆದು ನಷ್ಟ ಅನುಭವಿಸಿ ಸಾಲಕ್ಕೆ ತುತ್ತಾದ ರೈತರು ಇನ್ನೇನು ಭೂಮಿ ಬಂಜರು ಗೆಡುವಬಾರದು. ಕೊನೆಗೆ ಹಸುವಿಗೆ ಆಹಾರವಾದರೂ ಆಗಲಿ ಎಂದು ಬೇಕಾಬಿಟ್ಟಿಯಾಗಿ ಬೆಳೆಯುತ್ತಿದ್ದ ಹುರಳಿ ಬೆಳೆಗೆ ಈಗ ಬೇಡಿಕೆ ಬಂದಿದೆ. ಹಾಗಾಗಿ, ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎನ್ನುವ ಮಾತು ಅಕ್ಷರ ಸಹ ಸತ್ಯವಾಗಿದೆ ಎನ್ನುವುದಕ್ಕೆ ಹುರಳಿ ಬೆಳೆ ಸಾಕ್ಷಿಯಾಗಿದೆ.
ಅತ್ಯಂತ ಕಡಿಮೆ ಖರ್ಚಿನ ಜತೆ ಬಿತ್ತಿದ 90 ದಿನದಲ್ಲಿ ಕೇವಲ ತಂಪು ವಾತಾವರಣದಲ್ಲಿ ಬೆಳೆಯುವ ಹುರಳಿ ಎಕರೆ ಒಂದಕ್ಕೆ 2ರಿಂದ 3ಕ್ವಿಂಟಲ್ ಬೆಳೆ ಬರುತ್ತದೆ. ಮಾರುಕಟ್ಟೆಯಲ್ಲಿ ಕೇವಲ 1200 ಇದ್ದ ಹುರಳಿ ಬೆಲೆ ಪ್ರಸ್ತುತ ದಿನಗಳಲ್ಲಿ ಕ್ವಿಂಟಲ್ ಒಂದಕ್ಕೆ 1,800 ರಿಂದ 2,000ರೂ. ವರೆಗೆ ಬೆಲೆ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 75 ರೂ. ಇದೆ. ಹೀಗಾಗಿ, ಹುರಳಿ ಬೆಳೆಗೆ ಉತ್ತಮ ಬೆಲೆ ದೊರೆಯುತ್ತಿದೆ.
ಕುಂಟೋಜಿ, ಕಾಲಕಾಲೇಶ್ವರ, ಬೆಣಚಮಟ್ಟಿ, ಗೊಗೇರಿ, ಬೈರಾಪೂರ, ಮುಶಿಗೇರಿ, ನೆಲ್ಲೂರ, ಮಾಟರಂಗಿ, ನಾಗರಸಕೊಪ್ಪ, ಮ್ಯಾಕಲಝರಿ, ರಾಜೂರು, ದಿಂಡೂರ, ರಾಮಾಪೂರ, ವೀರಾಪೂರ, ಲಕ್ಕಲಕಟ್ಟಿ, ಜಿಗೇರಿ ಸೇರಿದಂತೆ ತಾಲೂಕಿನ ಹಲವಾರು ಗ್ರಾಮದ ರೈತರು ಕೆಂಪು ಮಿಶ್ರಿತ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹುರಳಿ ಬೆಳೆ ಕಂಗೊಳಿಸುತ್ತಿದೆ. ಪೌಷ್ಟಿಕಾಂಶವುಳ್ಳ ಹುರಳಿ: ಇಂದಿನ ತಾಂತ್ರಿಕ ಯುಗದಲ್ಲಿ ಆಧುನಿಕ ಆಹಾರ ಪದ್ಧತಿಗೆ ಮಾರು ಹೋಗಿ ಸದಾ ಆರೋಗ್ಯದ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ದುಷ್ಪರಿಣಾಮ ಬೀರಿ ಮನುಷ್ಯನನ್ನು ರೋಗ ಗ್ರಸ್ತನನ್ನಾಗಿಸುವ ಆಹಾರಕ್ಕೆ ತದ್ವಿರುದ್ಧವಾಗಿ ಜತೆಗೆ ಉತ್ತಮ ಆರೋಗ್ಯಕ್ಕೆ ಅತ್ಯಂತ ಅವಶ್ಯ ಹಾಗೂ ಪೌಷ್ಟಿಕಾಂಶ ಗುಣವುಳ್ಳ ರಾಗಿ, ನವಣಿ ಹೊರತುಪಡಿಸಿದರೆ ಹುರಳಿ ಕಾಳು ಆರೋಗ್ಯಕ್ಕೆ ಹೇಳಿ ಮಾಡಿಸಿದ ಆಹಾರವಾಗಿದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆಯುಳ್ಳ ಬೆಳೆ ಇದಾಗಿದೆ. ರೈತರ ಬದುಕಿಗೆ ಸಹಕಾರಿಯಾಗಿದೆ.
ಬೇಸಾಯವೇ ಮೂಲ ವೃತ್ತಿ: ಮೈ ಮುರಿದು ದುಡಿದರೆ ಭೂತಾಯಿ ಕೈ ಬಿಡುವದಿಲ್ಲ ಎನ್ನುವ ನಂಬಿಕೆ ಜತೆ ವ್ಯವಸಾಯ ನಮ್ಮ ಉಸಿರು ಎಂದು ಬದುಕು ಸಾಗಿಸುತ್ತ ಬಂದಿರುವ ರೈತರು, ಪೂರ್ವಜರ ಮೂಲ ವೃತ್ತಿ ಬೇಸಾಯವನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಆದರೆ, ಇತ್ತೀಚಿನ ವರ್ಷದಲ್ಲಿ ಹವಾಮಾನ ವೈಪರೀತ್ಯ ಹಾಗೂ ಸಕಾಲಕ್ಕೆ ಬಾರದ ಮಳೆಯಿಂದಾಗಿ ರೈತಾಪಿ ಬದುಕು ಸದಾ ನಷ್ಟದ ಗುಡ್ಡೆಯಾಗಿದೆ. ಬೇಸಾಯ ಮಾಡಬೇಕೋ ಬೇಡವೊ ಎನ್ನುವ ಸಂದಿಗ್ಧ ಪರಿಸ್ಥಿತಿ ಎದುರಾದ ಪರಿಣಾಮ ಹಿರಿಯರು ಉಳಿಸಿಕೊಂಡು ಬಂದ ಬೇಸಾಯ ಮೂಲ ವೃತ್ತಿ ಉಳಿಸುವುದು ಹೇಗೆ ಎನ್ನುವ ಪ್ರಶ್ನೆ ರೈತರನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಭೂತಾಯಿ ನಂಬಿದವರನ್ನು ಕೈಬಿಡುವುದಿಲ್ಲ. ವಾಣಿಜ್ಯ ಬೆಳೆಗಳು ಕೈಕೊಟ್ಟರೂ ನಿರ್ಲಕ್ಷಿತ ಬೆಳೆಗಳು ರೈತರನ್ನು ಕೈಹಿಡಿಯುತ್ತವೆ ಎನ್ನುವುದಕ್ಕೆ ಹುರಳಿ ಬೆಳೆ ನಿದರ್ಶನವಾಗಿದೆ.
ಪ್ರತಿ ವರ್ಷ ಶೇಂಗಾ ಬೆಳೆದು ಸಾಲ ಮಾಡಿ, ಸಾಕಾಗೈತ್ರೀ. ಇನ್ನೇನು ಭೂಮಿ ಹಂಗ ಬಿಟ್ರ ಕಸ ಬೆಳೆದ ಭೂಮಿ ಹಾಳಾಕೈತಿ. ಬೆಳದ್ರ ಎತ್ತಿಗೆ ಹೊಟ್ಟು ಆಗತೈತಿ ಅಂತ ಹುಳ್ಳಿ ಬಿತ್ತೀವ್ರಿ. ಆದ್ರ ಈಗ ಬಜಾರದಾಗ ಹುಳ್ಳಿಗೆ ಚಲೋ ರೇಟ್ ಐತ್ರಿ. ಬಿತ್ತಿದ ಹುಳ್ಳಿ ಭಾರೀ ಚೋಲೋ ಐತ್ರಿ. ಭೂಮಿ ತಾಯಿ ಈ ಬೆಳ್ಯಾಗರ ಲಾಭ ಕೊಡ್ತಾಳ ಅನ್ನೋ ಆಸೆ ಹುಟೈತ್ರಿ. ಅಮರಪ್ಪ ಬೆನಹಾಳ, ಹುರಳಿ ಬೆಳದ ರೈತ
–ಡಿ.ಜಿ ಮೋಮಿನ್