ಕುಟುಂಬದ ಹಿರಿಯರು, ವಂಶಜರನ್ನು ಸ್ಮರಿಸುವುದಕ್ಕಾಗಿ, ಅವರಿಗೆ ತರ್ಪಣ ಬಿಟ್ಟು ಆಶೀರ್ವಾದ ಪಡೆಯುವುದಕ್ಕಾಗಿ ಪ್ರತಿವರ್ಷ ಪಿತೃ ಪಕ್ಷದಲ್ಲಿ ವಿಶೇಷ ಪೂಜೆ – ಪುನಸ್ಕಾರಗಳನ್ನು ನಮ್ಮಲ್ಲಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುವ ಪದ್ದತಿ ಇದೆ. ಇನ್ನು ಪಿತೃ ಪಕ್ಷದಲ್ಲಿ ನಡೆಯುವ ಈ ಸಾಂಪ್ರದಾಯಿಕ ಆಚರಣೆಗೆ “ಮಾರ್ಲಾಮಿ’ ಹಬ್ಬ ಎಂದೂ ಕರೆಯುವುದುಂಟು. ಈಗ ಇದೇ “ಮಾರ್ಲಾಮಿ’ ಎನ್ನುವ ಹೆಸರನ್ನು ಇಟ್ಟುಕೊಂಡು ಕನ್ನಡದಲ್ಲಿ ಚಿತ್ರವೊಂದು ತಯಾರಾಗುತ್ತಿದೆ.
ಇನ್ನು ಚಿತ್ರದಲ್ಲಿ “ಮಾರ್ಲಾಮಿ’ ಹಬ್ಬ ಹೇಗೆ ಆಚರಣೆಗೆ ಬಂತು? ಅದರ ಹಿನ್ನೆಲೆ ಏನು? ಅದರ ವಿಶೇಷತೆಗಳು ಏನು? ಹೀಗೆ ಹತ್ತಾರು ಸಂಗತಿಗಳನ್ನು ತೆರೆಮೇಲೆ ಹೇಳಲಾಗುತ್ತಿದೆಯಂತೆ. “ಮಾರ್ಲಾಮಿ’ ಚಿತ್ರಕ್ಕೆ ಟಿ. ವಿನಯ್ ಕುಮಾರ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕಿರುತೆರೆಯ ಸರಿಗಮಪ ರಿಯಾಲಿಟಿ ಶೋದ ವಿಜೇತ ಚನ್ನಪ್ಪ ನಾಯಕನಾಗಿ, “ಪದ್ಮಾವತಿ’ ಧಾರವಾಹಿ ಖ್ಯಾತಿಯ ವರ್ಷಿತ ವರ್ಮ ನಾಯಕಿಯಾಗಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ವರುಣ್, ಮೋಹನ್ ಜುನೇಜಾ, ಶೋಭರಾಜ್, ಮುನಿ, ಕೆಂಪೇಗೌಡ, ಸುಧಾ, ದಿನೇಶ್ ಗುರೂಜಿ, ರೆಮೋ ಚಿತ್ರದ ಇತರೆ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
“ಮಾರ್ಲಾಮಿ’ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಟಿ. ವಿನಯ್ ಕುಮಾರ್, ಪಕ್ಕಾ ಗ್ರಾಮೀಣ ಹಿನ್ನೆಲೆಯಲ್ಲಿ ನಡೆಯುವ ಕಥೆಯೇ ಇದು. ಪಿತೃಪಕ್ಷವನ್ನು ಗ್ರಾಮೀಣ ಪ್ರದೇಶಗಳಲ್ಲಿ ತುಂಬ ಭಯ-ಭಕ್ತಿಯಿಂದ ಆಚರಿಸುತ್ತಾರೆ. ಈ ಹಬ್ಬವನ್ನು ತೋರಿಸುವ ಮೂಲಕ ಸಮಾಜಕ್ಕೆ ಸಂದೇಶ ಹೇಳಲು ಪ್ರಯತ್ನಿಸುತ್ತಿದ್ದೇನೆ. ಈ ಚಿತ್ರದಲ್ಲಿ ಕಥೆಯೇ ಹೀರೋ. ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ಸ್ ಇದೆ. ಚೆನ್ನಪ್ಪ ಅವರ ಪಾತ್ರ ಚಿತ್ರಕ್ಕೆ ಹೊಸ ತಿರುವು ಕೊಡುತ್ತದೆ. ಇದರ ಜೊತೆಗೆ ಹಾರಾರ್ ಟಚ್ ಕೂಡ ಇದೆ. ಚನ್ನರಾಯಪಟ್ಟಣ ಸುತ್ತಮುತ್ತ ನಡೆಯುವ ಕಥೆ ಇದಾಗಿದ್ದು, ಶೇಕಡಾ 95ರಷ್ಟು ಚಿತ್ರೀಕರಣವನ್ನು ಅಲ್ಲೇ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಚಿತ್ರದ ಉಳಿದ ಭಾಗ ನಗರ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ ಎನ್ನುತ್ತಾರೆ.
ವಿ. ಕುಮಾರ್ “ಮಾರ್ಲಾಮಿ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಕುರಿತಂತೆ ಮಾತನಾಡುವ ನಿರ್ಮಾಪಕ ವಿ. ಕುಮಾರ್, ಇದೊಂದು ಹಳ್ಳಿಯ ಸೊಗಡಿನ ಕಥೆ. ಮೊದಲು ನಿರ್ದೇಶಕರು ಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ಕಥೆಯಲ್ಲಿ ಒಂದಿಷ್ಟು ಸಸ್ಪೆನ್ಸ್-ಹಾರರ್ ಎಲಿಮೆಂಟ್ಸ್ ಕೂಡ ಇದೆ. ಚಿತ್ರದ ಕಾನ್ಸೆಪ್ಟ್ ಹೇಗಿರುತ್ತದೆ ಎಂಬುದನ್ನು ಚಿತ್ರ ಮುಗಿದ ನಂತರ ಟ್ರೇಲರ್ ಮಾಡಿ ಪ್ರೇಕ್ಷಕರಿಗೆ ಹೇಳಲಿದ್ದೇವೆ ಎಂದು ಹೇಳಿದರು.
ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನೆರವೇರಿತು. “ಮಾರ್ಲಾಮಿ’ ಚಿತ್ರದ ಪ್ರಥಮ ದೃಶ್ಯಕ್ಕೆ ಬಿಗ್‌ಬಾಸ್ ಖ್ಯಾತಿಯ ನಟ ಪ್ರಥಮ್ ಕ್ಲಾಪ್ ಮಾಡಿದರೆ, ಉದ್ಯಮಿ ಧಾತ್ರಿ ಮಂಜುನಾಥ್ ಕ್ಯಾಮರಾ ಸ್ವಿಚ್ ಆನ್ ಮಾಡುವ ಮೂಲಕ
ಚಿತ್ರೀಕರಣಕ್ಕೆ ಚಾಲನೆ ಮಾಡಿದರು. “ಮಾರ್ಲಾಮಿ’ ಚಿತ್ರಕ್ಕೆ ಎರಿಕ್ ವಿ.ಜೆ ಛಾಯಾಗ್ರಹಣ, ಕಾರ್ತಿಕ್ ವೆಂಕಟೇಶ್ ಸಂಕಲನ ಕಾರ್ಯವಿದೆ. ಚಿತ್ರದಲ್ಲಿ 5 ಹಾಡುಗಳಿದ್ದು, ಅರುಣ್ ಆಂಡ್ರಿವ್ ಸಂಗೀತ ಸಂಯೋಜನೆ ಇದೆ. ಇದೇ ವರ್ಷಾಂತ್ಯಕ್ಕೆ “ಮಾರ್ಲಾಮಿ’ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.