Advertisement
“ಬೆಕ್ಕಿನ ಕಣ್ಣಿದ್ದವರಿಗೆ ದೆವ್ವಗಳು ಕಾಣುತ್ತವಂತೆ. ಹೌದಾ..?’ ಎಂದಿದ್ದ ಗೆಳೆಯನ ಮಾತಿಗೆ ನಸುನಕ್ಕಿದ್ದ ಬೆಕ್ಕಿನ ಕಣ್ಣಿನವನು. “ಅದೊಂದು ಭ್ರಮೆಯಷ್ಟೇ, ದೆವ್ವಗಳೇ ಸುಳ್ಳು ಎಂದ ಮೇಲೆ ಬೆಕ್ಕಿನ ಕಣ್ಣಲ್ಲ, ಹದ್ದಿನ ಕಣ್ಣಿಗೂ ದೆವ್ವಗಳು ಕಾಣಲಾರವು’ ಎಂದ. ಜೊತೆಗಾರನ ಮಾತಿನ ಹಿಂದಿದ್ದ ವ್ಯಂಗ್ಯ ಅರ್ಥವಾಗಿ ಗೆಳೆಯ ಸಹ ನಸುನಕ್ಕಿದ್ದ. ಅಮಾವಾಸ್ಯೆಯ ಆ ರಾತ್ರಿ ಹುಣಸೆಯ ಮರದಲ್ಲಿ ತಲೆಕೆಳಗಾಗಿ ನೇತಾಡುತ್ತಿದ್ದ ಇಬ್ಬರಿಗೂ, ಮರದ ಕೆಳಗೆ ನಡುಗುತ್ತ ನಡೆಯುತ್ತಿದ್ದ ನಡುವಯಸ್ಕನೊಬ್ಬ ತಮ್ಮ ಬೇಟೆಯಾಗಿ ಗೋಚರಿಸಿದ್ದ.
Related Articles
Advertisement
* * *
ನಾನು ಅವನಲ್ಲ!
ಅರ್ಚಕರು ದೇವರ ಪೂಜೆ ಮುಗಿಸಿ ಗುಡಿಯಿಂದ ಹೊರಗೆ ಬರುವಷ್ಟರಲ್ಲಿ ಆತ ಕಾಣಿಸಿದ್ದ. ಆಸ್ತಿಗಾಗಿ ಜಗಳವಾಡುತ್ತಿದ್ದ ಅಣ್ಣ-ತಮ್ಮಂದಿರ ಪೈಕಿ ಕಿರಿಯವನನ್ನು ಕಂಡ ಅರ್ಚಕ ಗಾಬರಿಯಾಗಿದ್ದ. ಹಿಂದಿನ ದಿನದ ಸಂಜೆಯ ಹೊತ್ತಿಗೆ “ತಮ್ಮ ತೀರಿ ಹೋಗಿ¨ªಾನೆ’ ಎನ್ನುವ ಸುದ್ದಿಯನ್ನು ಅವನ ಅಣ್ಣನ ಬಾಯಲ್ಲಿ ಕೇಳಿದ್ದ ಅರ್ಚಕ ಆತಂಕದಲ್ಲಿ ನಿಂತಿ¨ªಾಗಲೇ, ಅರ್ಚಕನನ್ನು ಸಮೀಪಿಸಿದ್ದ “ಅವನು’ ನಿರ್ಭಾವುಕ ಧ್ವನಿಯಲ್ಲಿ, “ಅಣ್ಣ ನೇಣುಹಾಕಿಕೊಂಡು ತೀರಿ ಹೋದ ಭಟ್ರೆ, ಮುಂದಿನ ಕಾರ್ಯಗಳಿಗೆ ನೀವು ಬರಬೇಕು’ ಎಂದ.
* * *
ಬಾಗಿಲು ಮುಚ್ಚಿಕೊಂಡಿತು!
ನಡುರಾತ್ರಿಯ ಹೊತ್ತಿಗೆ ಆಸ್ಪತ್ರೆಯ ಸಿಸಿಟಿವಿಯಲ್ಲಿ ಗಂಡು-ಹೆಣ್ಣಿನ ಜೋಡಿಯನ್ನು ಕಂಡ ಸೆಕ್ಯುರಿಟಿಯವನು ತಕ್ಷಣ ಒಳಗೋಡಿದ್ದ. ಹಗಲಲ್ಲೇ ಯಾರೂ ಓಡಾಡದ ಸ್ಥಳದಲ್ಲಿ ಕಡುಗತ್ತಲ ಸಮಯಕ್ಕೆ ಆ ಜೋಡಿ ಕಂಡಿದ್ದು ಆತನಿಗೆ ಆಶ್ಚರ್ಯವುಂಟು ಮಾಡಿತ್ತು. ಜೋಡಿಯ ಬಳಿ ತೆರಳಿದ್ದ ಸೆಕ್ಯುರಿಟಿಯನ್ನು ಕಂಡ ಜೋಡಿ ಅವನನ್ನು ಗದರಿತ್ತು. ತಾವು ಆಸ್ಪತ್ರೆಯ ಪ್ರತಿಷ್ಠಿತ ವೈದ್ಯರೆಂದೂ, ಆಸ್ಪತ್ರೆಯ ಸೆಕ್ಯುರಿಟಿಯಾದವನಿಗೆ ತಮ್ಮ ಪ್ರೇಮ ಪ್ರಸಂಗದ ನಡುವೆ ತಲೆ ಹಾಕುವುದು ಅನಾವಶ್ಯಕವೆಂದೂ ಆತನನ್ನು ಗದರಿದರು. ತಲೆತಗ್ಗಿಸಿ ಕೋಣೆಯ ಬಾಗಿಲಿನೆಡೆಗೆ ನಡೆದಿದ್ದ ಸೆಕ್ಯುರಿಟಿ. ಇನ್ನೇನು ಆತ ಹೊರಗೆ ಹೋಗುತ್ತಾನೆ ಎನ್ನುವಷ್ಟರಲ್ಲಿ “ಆತ’ ಬಾಗಿಲು ಮುಚ್ಚಿದ್ದ. ಆತನ ಬಾಯಲ್ಲಿ ಸಣ್ಣಗೆ ಕೋರೆಹಲ್ಲುಗಳು ಮೂಡಿದ್ದವು.
* * *
ಕಳ್ಳ-ಪೊಲೀಸ್ ಆಟ!
“ಓಡಬೇಡ ನಿಲ್ಲು…’ ಎನ್ನುತ್ತ ಬೆನ್ನಟ್ಟಿದ್ದ ಪೊಲೀಸನೆಡೆಗೆ ಗನ್ ತೋರಿಸಿದ್ದ ಕಳ್ಳ. ನಡುರಾತ್ರಿಯಲ್ಲಿ ಆ ಸ್ಮಶಾನದಲ್ಲಿ, ಗವ್ವೆನ್ನುವ ಕತ್ತಲಲ್ಲಿ ಗನ್ ಹಿಡಿದಿದ್ದರು ಪರಸ್ಪರರು. ನಿಧಾನಕ್ಕೆ ಇಬ್ಬರ ಬೆರಳುಗಳೂ ಬಂದೂಕಿನ ಟ್ರಿಗರ್ ಅದುಮುವತ್ತ ಸಾಗಿದವು. ಮೊದಲು ಕಳ್ಳ ಟ್ರಿಗರ್ ಅದುಮಿದ್ದರೆ, ಮರುಕ್ಷಣವೇ ಪೊಲೀಸ್ ತನ್ನ ಕೈಯಲ್ಲಿದ್ದ ಗನ್ನಿನ ಟ್ರಿಗರ್ ಅದುಮಿದ್ದ. ಪೊಲೀಸನ ಗುಂಡು ಕಳ್ಳನ ಎದೆ ಹೊಕ್ಕರೆ, ಕಳ್ಳನ ಗುಂಡು ಪೊಲೀಸನ ತಲೆ ಸೀಳಿತ್ತು. ಇಬ್ಬರೂ ನಿಧಾನಕ್ಕೆ ನೆಲಕ್ಕಪ್ಪಳಿಸಿದ್ದರು. ಎರಡು ನಿಮಿಷಗಳ ನಂತರ, “ಈ ಆಟ ಈಗೀಗ ಬೋರು, ಸತ್ತು ಹತ್ತು ವರ್ಷಗಳಾಗಿದ್ದರೂ ಇದೇ ಆಟವಾಡುತ್ತಿದ್ದೇವೆ ನಾವು’ ಎನ್ನುತ್ತ ಇಬ್ಬರೂ ಎದ್ದು ಕುಳಿತರು.
* * *
ಸಮಾಧಿಯಿಂದ ಎದ್ದು ಬಂದು…
ಸಂಜೆಯ ಹೊತ್ತಿಗೆ ಅಂತಿಮ ಸಂಸ್ಕಾರಕ್ಕೆ ಬಂದಿದ್ದ ಪತಿಯ ಶವದ ಮೇಲೆ ಬಿದ್ದು ಆಕೆ ಗೋಳಾಡುತ್ತಿದ್ದಳು. ಆಕೆಯನ್ನು ಸಮಾಧಾನಿಸಲು ಪಕ್ಕದಲ್ಲಿದ್ದ ಮಹಿಳೆ ಹರಸಾಹಸಪಡುತ್ತಿದ್ದಳು. “ಸಮಾಧಾನ ಮಾಡ್ಕೊಳಿ, ಏನೂ ಮಾಡುವುದಕ್ಕಾಗುವುದಿಲ್ಲ. ಸಾವು, ಬದುಕಿನ ಅಂತಿಮ ಸತ್ಯ. ಇವತ್ತು ಅವರು, ನಾಳೆ ಇನ್ಯಾರೋ’ ಎನ್ನುವ ಸಮಾಧಾನದ ಮಾತುಗಳಿಗೆ ಸತ್ತವನ ಮಡದಿ ಸುಮ್ಮನಾಗಲಿಲ್ಲ. ಅಷ್ಟರಲ್ಲಿ ಅವರಿಬ್ಬರನ್ನೂ ಸಮೀಪಿಸಿದ ಅಜ್ಜಿಯೊಬ್ಬಳು, “ಸಾವು ಬದುಕಿನ ಅಂತಿಮ ಸತ್ಯ ಹೌದು. ಆದರೆ ಸತ್ತ ಮೇಲೆ ನಮ್ಮ ಮಾತುಗಳು ಬದುಕಿರುವವರಿಗೆ ಕೇಳುವುದಿಲ್ಲ ಮಗಳೇ’ ಎನ್ನುತ್ತ, ಸಮಾಧಾನಿಸುತ್ತಿದ್ದ ಮಹಿಳೆಯನ್ನು ಕರೆದುಕೊಂಡು ಅಲ್ಲಿದ್ದ ಸಮಾಧಿಯೊಳಗೆ ಲೀನವಾದಳು.
* * *
ಬೇಗ ಓಡಿಬನ್ನಿ…
ಅರುಣೋದಯದ ಮಬ್ಬುಗತ್ತಲಲ್ಲಿ ಕಸಗುಡಿಸುತ್ತಿದ್ದ ಕೆಲಸದಾಕೆಯನ್ನು ನೋಡಿ ಬೆಚ್ಚಿದ್ದ ಅವನು. ಪೊರಕೆಯ ಪರಪರ ಸದ್ದು ಅವನನ್ನು ಬೆದರಿಸಿತ್ತು. ಹಿಂದಿನ ರಾತ್ರಿಯಷ್ಟೇ ಆಕೆಯೊಂದಿಗಿನ ತನ್ನ ಅನೈತಿಕ ಸಂಬಂಧ ಮಡದಿಗೆ ಗೊತ್ತಾಗಿದ್ದು ನೆನಪಾಗಿ ಪಕ್ಕದಲ್ಲಿಯೇ ಇದ್ದ ಮಡದಿಯತ್ತ ನೋಡಿದ. ಆಕೆ ಕೋಪದ ಕಣ್ಣುಗಳಲ್ಲಿ ಆತನತ್ತ ನೋಡುತ್ತಿದ್ದಳು. ಅಷ್ಟರಲ್ಲಿ ಕಿಟಕಿಯಲ್ಲಿ ಬಗ್ಗಿ ನೋಡಿದ ಕೆಲಸದಾಕೆ ಕಿಟಾರನೇ ಕಿರುಚಿ, ” ಅಯ್ಯಯ್ಯೊ..! ಯಜಮಾನ,ಯಜಮಾನ್ತಿ ಒಟ್ಟಿಗೆ ನೇಣು ಹಾಕ್ಕೊಂಡಿದಾರೆ ಬನÅಪ್ಪಾ ಬನ್ನಿ’ ಎಂದು ಕೂಗುತ್ತಾ ಪೊರಕೆ ಎಸೆದು ಓಡಿ ಹೋದಳು.
* * *
ಸೋಫಾದ ಮೇಲೆ ಕರಡಿ!
ನಡುರಾತ್ರಿಯ ಕತ್ತಲಲ್ಲಿ ಮೊಬೈಲ್‌ಗೆ ಬಂದ ಮೆಸೇಜನ್ನು ನಿದ್ರೆಗಣ್ಣಿನಲ್ಲಿಯೇ ನೋಡುತ್ತಿದ್ದ ಅವನು. ಊರಿನಲ್ಲಿದ್ದ ಮಡದಿಯಿಂದ ಬಂದ ಸಂದೇಶವೋದಿ ನಸುನಗು ಅವನಿಗೆ. ಸಣ್ಣಗೆ ನಕ್ಕರೆ ಬೆನ್ನಹಿಂದೆಯೇ ಹೆಣ್ಣು ಸ್ವರವೊಂದು ನಕ್ಕಿತ್ತು. ಗಾಬರಿಯಲ್ಲಿ ತಿರುಗಿ ನೋಡದರೆ ಯಾರೂ ಕಾಣಿಸಲಿಲ್ಲ. ಭ್ರಮೆಯೆಂದುಕೊಂಡು ಸುಮ್ಮನಾದರೂ ಒಂದರೆಕ್ಷಣ ಮನಸಿಗೆ ಭಯವೆನ್ನಿಸಿ ಬೆಡ್ ರೂಮಿನ ಬಾಗಿಲು ಹಾಕುವುದಕ್ಕೆ ಹೊರಟ. ಬಾಗಿಲು ಹಾಕುವ ಕೊನೆಯ ಕ್ಷಣಕ್ಕೆ, ಹಾಲ್‌ನಲ್ಲಿದ್ದ ಸೋಫಾದ ಮೇಲೆ ಕೆದರಿದ ಕೂದಲುಗಳುಳ್ಳ ಕಪ್ಪು ಕರಡಿಯಂಥ ಆಕೃತಿಯೊಂದು ಕೂತಿದ್ದು ಮಬ್ಬುಗತ್ತಲಲ್ಲಿ ಕಾಣಿಸಿತ್ತು!