ಕನ್ನಡ ಚಿತ್ರರಂಗದಲ್ಲಿ ಹಾರರ್-ಥ್ರಿಲ್ಲರ್ ಚಿತ್ರಗಳ ಸರದಿ ಮುಂದುವರೆದಿದ್ದು, ಈ ಸಾಲಿಗೆ ಈ ವಾರ “ಮೂರ್ಕಲ್ ಎಸ್ಟೇಟ್’ ಎನ್ನುವ ಮತ್ತೂಂದು ಚಿತ್ರ ಸೇರ್ಪಡೆಯಾಗಿದೆ. ನಾಲ್ಕಾರು ಹುಡುಗರು ನಿಗೂಢ ಸ್ಥಳಕ್ಕೆ ಹೋಗುವುದು, ಅಲ್ಲಿ ನಡೆಯುವ ಚಿತ್ರ-ವಿಚಿತ್ರ ಘಟನೆಗಳನ್ನು ಎದುರಿಸುವುದು. ಕೊನೆಗೆ ಅವುಗಳಿಂದ ಪಾರಾಗಿ ಹೊರಗೆ ಬರುತ್ತಾರಾ.., ಇಲ್ಲವಾ ಅನ್ನೋದೇ ಬಹುತೇಕ ಚಿತ್ರಗಳ ಕ್ಲೈಮ್ಯಾಕ್ಸ್. ಈ ಚಿತ್ರದಲ್ಲೂ ಅದೇ ಕಥೆ ಮುಂದುವರೆದಿರುವುದರಿಂದ ಚಿತ್ರದ ಕಥಾ ಹಂದರದ ಬಗ್ಗೆ ಹೆಚ್ಚೇನು ವಿಶೇಷತೆಗಳಿಲ್ಲ.
ಹಾಗಂತ, “ಮೂರ್ಕಲ್ ಎಸ್ಟೇಟ್’ನಲ್ಲಿ ಕೆಲ ಹಾರರ್-ಥ್ರಿಲ್ಲರ್ ಚಿತ್ರಗಳಲ್ಲಿ ಕಾಣುವ ರಕ್ತಪಾತ, ಅಶ್ಲೀಲತೆ, ಕೊಲೆ, ವಿಕೃತ ಸಾವು-ನೋವುಗಳಿಲ್ಲ. ಆದರೆ ಚಿತ್ರದಲ್ಲಿ ಅಲ್ಲಲ್ಲಿ ಬರುವ ಹಿನ್ನೆಲೆ ಸದ್ದು ಕೆಲವೊಮ್ಮೆ ಸಣ್ಣಗೆ ನೋಡುಗರನ್ನು ಬೆಚ್ಚಿ ಬೀಳಿಸುವಂತಿದೆ. ಚಿತ್ರದಲ್ಲಿ ದೆವ್ವ-ಭೂತ, ದ್ವೇಷಿಸುವ ಆತ್ಮ, ಕಾಟ ಕೊಡುವ ಪಿಶಾಚಿ ಕಣ್ಣಿಗೆ ಕಾಣದಿದ್ದರೂ, ಅದೆಲ್ಲವೂ ಎನರ್ಜಿಯಲ್ಲಿ ಅಡಕವಾಗಿದೆ ಎನ್ನುವುದನ್ನು ನಿರ್ದೇಶಕರು ಹೇಳುವ ಪ್ರಯತ್ನ ಮಾಡಿದ್ದಾರೆ. ಸೌಂಡ್ ಎಫೆಕ್ಟ್ ಮತ್ತು ಛಾಯಾಗ್ರಹಣ ಚಿತ್ರದಲ್ಲಿ ಗಮನ ಸೆಳೆಯುವ ಪ್ರಮುಖ ತಾಂತ್ರಿಕ ಅಂಶಗಳು.
ಇನ್ನು ಚಿತ್ರದ ನಾಯಕ ಪ್ರವೀಣ್, ನಾಯಕಿ ಪ್ರಕೃತಿ ಅಭಿನಯದಲ್ಲಿ ಸಾಕಷ್ಟು ಪಳಗಬೇಕಿದೆ. ಉಳಿದಂತೆ ಇತರೆ ಕಲಾವಿದರದ್ದು ಪರವಾಗಿಲ್ಲ ಎನ್ನಬಹುದಾದ ಅಭಿನಯ. ಚಿತ್ರದ ಕಥೆ ಮತ್ತು ನಿರೂಪಣೆಯ ಕಡೆಗೆ ನಿರ್ದೇಶಕರು ಇನ್ನಷ್ಟು ಗಮನ ನೀಡಿದ್ದರೆ, “ಮೂರ್ಕಲ್ ಎಸ್ಟೇಟ್’ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುವ ಸಾಧ್ಯತೆಗಳಿದ್ದವು. ಕೆಲವೊಂದು ಲೋಪಗಳನ್ನು ಬದಿಗಿಟ್ಟು ನೋಡುವ ತಾಳ್ಮೆಯಿದ್ದರೆ, ಹಾರರ್-ಥ್ರಿಲ್ಲರ್ ಚಿತ್ರಗಳ ಕಡೆಗೆ ಒಲವಿರುವವರು ಒಮ್ಮೆ “ಮೂರ್ಕಲ್ ಎಸ್ಟೇಟ್’ ನೋಡಿ ಬರಲು ಅಡ್ಡಿಯಿಲ್ಲ.
ಚಿತ್ರ: ಮೂರ್ಕಲ್ ಎಸ್ಟೇಟ್
ನಿರ್ಮಾಣ: ಕುಮಾರ್ ಎನ್.ಭದ್ರಾವತಿ
ನಿರ್ದೇಶನ: ಪ್ರಮೋದ್ ಕುಮಾರ್
ತಾರಾಗಣ: ಪ್ರವೀಣ್, ಪ್ರಕೃತಿ, ವಿಜಯ್, ಅಭಿಷೇಕ್ ಮತ್ತಿತರರು
* ಕಾರ್ತಿಕ್