Advertisement

ಹಾರರ್‌ ನಂಬರ್‌ ಒನ್‌; ತೆಲುಗು ಮಂದಿಯ ಕನ್ನಡ ಸಿನ್ಮಾ

12:51 PM Jul 13, 2017 | Team Udayavani |

ತೆಲುಗು ಮಂದಿ ಕನ್ನಡಕ್ಕೆ ಬಂದು ಕನ್ನಡ ಸಿನಿಮಾ ಮಾಡೋದು ಹೊಸ ವಿಷಯವೇನಲ್ಲ. ಈಗಾಗಲೇ ತೆಲುಗಿನ ಅನೇಕರು ಗಾಂಧಿನಗರಕ್ಕೆ ಬಂದು ಕನ್ನಡ ಚಿತ್ರ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಆ ಸಾಲಿಗೆ ಹೀಗೊಂದು ಸಂಪೂರ್ಣ ತೆಲುಗು ತಂಡ ಹೊಸದೊಂದು ಸಿನಿಮಾ ಮಾಡೋಕೆ ಬಂದಿದೆ. 

Advertisement

ಕನ್ನಡದ ನಾಯಕ ಚೇತನ್‌ ಚಂದ್ರ ಹೊರತುಪಡಿಸಿದರೆ, ಉಳಿದವರೆಲ್ಲರೂ ತೆಲುಗಿನವರೇ. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿತು. ಸಿನಿಮಾಗಿನ್ನೂ ನಾಮಕರಣ ಮಾಡಿಲ್ಲ. ಆದರೆ, ಅದೊಂದು ಹಾರರ್‌ ಸಿನಿಮಾ ಅನ್ನೋದು
ತಂಡದ ಮಾತು. ಸೂರ್ಯಕಿರಣ್‌ ಈ ಚಿತ್ರವನ್ನು ನಿದೇಶಿಸುತ್ತಿದ್ದಾರೆ. ಇದು ಅವರ ಕನ್ನಡದ ಮೊದಲ ಚಿತ್ರ. ತೆಲುಗಿನಲ್ಲಿ ಐದಾರು ಚಿತ್ರ ನಿರ್ದೇಶಿಸಿದ್ದಾರೆ.

ಮೊದಲು ಮಾತಿಗಿಳಿದದ್ದು ನಿರ್ದೇಶಕ ಸೂರ್ಯಕಿರಣ್‌. “ನಾನು ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಎಂಟ್ರಿಯಾದವನು. ಈವರೆಗೆ ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದೇನೆ. ನಿರ್ದೇಶನವನ್ನೂ ಮಾಡಿದ್ದೇನೆ. ಕನ್ನಡದ ಮೊದಲ ಚಿತ್ರವಿದು. ಹಾರರ್‌ ಜಾನರ್‌ನ ಕಥೆ ಇದು. ಹಾಗಂತ ಇಲ್ಲಿ ಬಿಳಿ ಸೀರೆ ಇರೋಲ್ಲ. ಉದ್ದನೆಯ
ಕೂದಲು ಬಿಟ್ಟ ಲೇಡಿ ಕಾಣಿಸಲ್ಲ. ಒಮ್ಮೆಲೆ ಭಯಪಡಿಸೋ ಶಾಟ್ಸ್‌ ಕೂಡ ಇರಲ್ಲ, ಎಲ್ಲೂ ರಕ್ತವಾಗಲೀ, ಕಿರುಚಾಟವಾಗಲಿ ಇರೋದಿಲ್ಲ. ಆದರೆ, ಒಂದು ವಿಭಿನ್ನ ಅನುಭವ ಮಾತ್ರ ಮಿಸ್‌ ಆಗೋದಿಲ್ಲ. ಟೆಕ್ನಿಕಲಿ ಒಂದೊಳ್ಳೆಯ
ಚಿತ್ರ ಕೊಡುವ ಯೋಚನೆ ಇದೆ. ರೆಗ್ಯುಲರ್‌ ಹಾರರ್‌ಗಿಂದ ವಿಭಿನ್ನವಾಗಿರುತ್ತೆ. ಸಕಲೇಶಪುರ, ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ರವಿಶಂಕರ್‌ ಅವರಿಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ’ ಅಂದರು ಅವರು.

ನಾಯಕ ಚೇತನ್‌ಚಂದ್ರ ಅವರಿಗೆ ನಿರ್ದೇಶಕರು ಕಳೆದ ಎರಡು ವರ್ಷಗಳಿಂದಲೂ ಕಥೆ ಹೇಳುತ್ತಲೇ ಇದ್ದರಂತೆ. “ಇಲ್ಲಿ ಸೆನ್ಸಿಬಲ್‌ ಹ್ಯೂಮರ್‌ ಇದೆ. ಕಥೆ ಕೇಳಿಲ್ಲ. ಆದರೆ, ನಿರ್ದೇಶಕರ ಮೇಲೆ ನಂಬಿಕೆ ಇದೆ. ಆ ವಿಶ್ವಾಸದಿಂದ ಒಪ್ಪಿ ಕೆಲಸ ಮಾಡುತ್ತಿದ್ದೇನೆ ಎಂದಷ್ಟೇ ಹೇಳಿ ಸುಮ್ಮನಾದರು’ ಚೇತನ್‌ ಚಂದ್ರ.

ಇನ್ನು, ಚಿತ್ರಕ್ಕೆ ಜಿ.ಕೆ. ಸಂಗೀತ ನೀಡುತ್ತಿದ್ದಾರೆ. ಈ ಹಿಂದೆ “ಫ್ರೆಂಡ್ಸ್‌’ ಮತ್ತು “ಶ್ರೀಮತಿ’ ಚಿತ್ರಕ್ಕೆ ಸಂಗೀತ ನೀಡಿದ್ದರು. ಕನ್ನಡದಲ್ಲಿ ಅವರಿಗಿದು ಮೂರನೇ ಚಿತ್ರ. ಇಲ್ಲಿ ಐದು ಹಾಡು ಕೊಡುತ್ತಿದ್ದು, ಆ ಪೈಕಿ ಮೂರು ಮೆಲೋಡಿ, ಒಂದು ರೊಮ್ಯಾಂಟಿಕ್‌ ಸಾಂಗ್‌ ಇದೆಯಂತೆ. ಚಿತ್ರಕ್ಕೆ ರಾಮ್‌ಬಾಬು ನಿರ್ಮಾಪಕರು. ಅವರಿಗೆ ಕನ್ನಡ ಸಿನಿಮಾ ಮಾಡಬೇಕು ಅನಿಸಿದ್ದು, ಇಲ್ಲಿ ಒಳ್ಳೇ ವ್ಯಾಪಾರ ಆಗುತ್ತೆ ಎಂಬ ಕಾರಣಕ್ಕಂತೆ. ಕನ್ನಡ ಚಿತ್ರರಂಗದ ಮಾರುಕಟ್ಟೆ ಚೆನ್ನಾಗಿದೆ ಅಂತ ಅನಿಸಿದ್ದರಿಂದ ಅವರು ಇಲ್ಲೊಂದು ಪ್ರಯತ್ನ ಮಾಡಲು ಬಂದಿದ್ದಾಗಿ ಹೇಳಿಕೊಂಡರು.

Advertisement

ಇನ್ನು, ಚಿತ್ರದಲ್ಲಿ ಫ‌ರ್ವೀನ್‌ ರಾಜ್‌, ಆನಂದ್‌ ನಂದ, ರೋಹಿಣಿ, ಚೈತನ್ಯ, ತರುಣಿಕಾ ಸಿಂಗ್‌, ಚಾಂದಿನಿ, ಭವ್ಯಾಶ್ರೀ ನಟಿಸುತ್ತಿದ್ದಾರೆ. ಮಲ್ಲಿ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಎಲ್ಲರೂ ಎರಡೆರೆಡು ಮಾತಾಡುವ ಹೊತ್ತಿಗೆ ಪತ್ರಿಕಾಗೋಷ್ಠಿಗೂ ತೆರೆಬಿತ್ತು.

Advertisement

Udayavani is now on Telegram. Click here to join our channel and stay updated with the latest news.

Next