ಹೈಟಿ: ಪೆಟ್ರೋಲ್ (ಗ್ಯಾಸೋಲಿನ್) ಸಾಗಿಸುತ್ತಿದ್ದ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ 60 ಮಂದಿ ಜೀವಂತವಾಗಿ ದಹನವಾಗಿದ್ದು, ಹಲವಾರು ಜನರು ಗಾಯಗೊಂಡಿರುವ ಭೀಕರ ಘಟನೆ ಹೈಟಿಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:1971ರಲ್ಲಿ ಬಾಂಗ್ಲಾದಲ್ಲಿ ಪಾಕ್ ಸೇನೆ ಧ್ವಂಸಗೊಳಿಸಿದ್ದ ಕಾಳಿ ದೇವಾಲಯಕ್ಕೆ ರಾಷ್ಟ್ರಪತಿ ಭೇಟಿ
ಹೈಟಿಯ ಎರಡನೇ ಅತೀ ದೊಡ್ಡ ನಗರವಾಗ ಉತ್ತರ ಕರಾವಳಿ ಪ್ರದೇಶದಲ್ಲಿ ಮಂಗಳವಾರ ಮಧ್ಯರಾತ್ರಿ ಘಟನೆ ನಡೆದಿತ್ತು. ಟ್ಯಾಂಕರ್ ಸ್ಫೋಟದಲ್ಲಿ ಈವರೆಗೆ 60 ಮಂದಿಯ ಶವ ಸಿಕ್ಕಿರುವುದಾಗಿ ಡೆಪ್ಯುಟಿ ಮೇಯರ್ ಪ್ಯಾಟ್ರಿಕ್ ಅಲ್ಮೋನೊರ್ ತಿಳಿಸಿದ್ದು, ಇನ್ನುಳಿದ ಶವಗಳಿಗಾಗಿ ಶೋಧ ಕಾರ್ಯ ಮುಂದುವರಿದಿರುವುದಾಗಿ ವಿವರಿಸಿದ್ದಾರೆ.
ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಸಂದರ್ಭದಲ್ಲಿ ಟ್ರಕ್ ಡ್ರೈವರ್ ನಿಯಂತ್ರಣ ಕಳೆದುಕೊಂಡಿದ್ದು, ಟ್ಯಾಂಕರ್ ಪಲ್ಟಿ ಹೊಡೆದು ಬಿದ್ದಿತ್ತು. ಈ ವೇಳೆ ಪೆಟ್ರೋಲ್ ರಸ್ತೆ ತುಂಬಾ ಹರಿದುಹೋಗ ತೊಡಗಿತ್ತು. ಈ ಸಂದರ್ಭದಲ್ಲಿ ಪಾದಚಾರಿಗಳು, ಸ್ಥಳೀಯರು ಪೆಟ್ರೋಲ್ ಸಂಗ್ರಹಿಸಲು ಮುಗಿಬಿದ್ದಿದ್ದರು. ಆಗ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ 60 ಮಂದಿ ಜೀವಂತವಾಗಿ ದಹನವಾಗಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಡೆಪ್ಯುಟಿ ಮೇಯರ್ ತಿಳಿಸಿದ್ದಾರೆ. ಇದೊಂದು ಭೀಕರ ಘಟನೆಯಾಗಿದ್ದು, ನಾವು ನೂರಾರು ಮಂದಿಯನ್ನು ಕಳೆದುಕೊಳ್ಳುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಜುಲೈನಲ್ಲಿ ಜೋವೆನೆಲ್ ಮೊಯಿಸೆ ಅವರ ಹತ್ಯೆಯ ನಂತರ ಹೈಟಿಯಲ್ಲಿ ಗುಂಪು ಹಿಂಸಾಚಾರ, ರಾಜಕೀಯ ಅಸ್ಥಿರತೆ ಮುಗಿಲು ಮುಟ್ಟಿದೆ. ಅಷ್ಟೇ ಅಲ್ಲ ಆಗಸ್ಟ್ ನಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪದಿಂದ ಹೈಟಿ ತತ್ತರಿಸಿ ಹೋಗಿರುವುದಾಗಿ ವರದಿ ವಿವರಿಸಿದೆ.