ಒಂದೂರಿನಲ್ಲಿ ಮನೆಯೊಂದರ ಬಳಿ ಇರುವ ಮರದ ಮೇಲೆ ಪಾರಿವಾಳ ವಾಸವಾಗಿತ್ತು. ಆ ಮನೆಯ ಅಡುಗೆ ಕೋಣೆಯ ಬಳಿಯೇ ಆ ಮರವಿತ್ತು. ಪ್ರತಿದಿನವೂ ಆಹಾರ ಹುಡುಕುತ್ತ ಸಾಗುವ ಪಾರಿವಾಳ ಆಗೀಗ ಅಡುಗೆ ಕೋಣೆಯ ಕಿಟಕಿಯ ಬಳಿ ಬಂದು ಕುಳಿತುಕೊಳ್ಳುತ್ತಿತ್ತು.
ಮನೆಯ ಯಜಮಾನಿಗೆ ಪ್ರತಿದಿನವೂ ಓಡಾಡುವ ಈ ಪಾರಿವಾಳದ ಬಗ್ಗೆ ಪ್ರೀತಿಯಿತ್ತು. ಅಡುಗೆ ಕೋಣೆಯ ಕಿಟಕಿಯಿಂದ ದಿನವೂ ಧಾನ್ಯದ ಕಾಳಗಳನ್ನು ಅಥವಾ ಮೀನಿನ ತುಂಡುಗಳನ್ನು ಎಸೆಯುತ್ತಿದ್ದಳು. ಇದರಿಂದ ಬಹಳ ಖುಷಿಯಾದ ಪಾರಿವಾಳ ಆಹಾರ ಹುಡುಕಲು ಹೆಚ್ಚು ದೂರ ಹೋಗುತ್ತಿರಲಿಲ್ಲ.
ವಿಹಾರಕ್ಕೆಂದೋ, ಸ್ನೇಹಿತರನ್ನು, ಅಥವಾ ಬಂಧುಗಳನ್ನು ಮಾತನಾಡಿಸಲೆಂದೋ ಆ ಪಾರಿವಾಳ ದೂರಕ್ಕೆ ಪ್ರಯಾಣಿಸುತ್ತಿತ್ತು. ಪಾರಿವಾಳದ ಈ ಆರಾಮ ಜೀವನವನ್ನು ಅಲ್ಲೇ ಪಕ್ಕದ ಮತ್ತೂಂದು ಮರದಲ್ಲಿ ವಾಸವಾಗಿದ್ದ ಕಾಗೆಯು ಗಮನಿಸುತ್ತಿತ್ತು. ಇಷ್ಟೊಂದು ಆರಾಮದಾಯಕ ಜೀವನ ಹೇಗೆ ಸಾಧ್ಯ ಎಂದು ಅದು ಯೋಚಿಸಲು ಶುರುಮಾಡಿತು. ನಾನು ಎಲ್ಲಿ ಹೋದರೂ, “”ಛೀ ಥೂ… ಹೋಗು ಎಂದು ಓಡಿಸುತ್ತಾರೆ. ಈ ಪಾರಿವಾಳಕ್ಕೆ ಎಷ್ಟೊಂದು ಆರಾಮ ಜಾಗ ಸಿಕ್ಕಿದೆಯಲ್ಲ” ಎಂದುಕೊಂಡಿತು.
ತಾನು ಈ ಪಾರಿವಾಳದ ಸ್ನೇಹ ಸಂಪಾದಿಸಿದರೆ ತನಗೂ ಅನಾಯಾಸವಾಗಿ ಆಹಾರ ಸಿಗಬಹುದು ಎಂದು ಭಾವಿಸಿದ ಕಾಗೆ, ಒಂದು ದಿನ ಪಾರಿವಾಳದ ಜೊತೆಗೆ ಮಾತು ಶುರು ಮಾಡಿತು. ಅದೂ ಇದೂ ಮಾತನಾಡುತ್ತ ಕಾಗೆ, ತನ್ನನ್ನೂ ಅಡುಗೆ ಕೋಣೆಯ ಕಿಟಕಿಯ ಬಳಿ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿತು. ಆದರೆ, ಪಾರಿವಾಳ ಒಪ್ಪಲಿಲ್ಲ. “”ನೀನು ತುಂಬಾ ಅವಸರ ಮಾಡುತ್ತಿ. ನಿನ್ನನ್ನು ಕರೆದುಕೊಂಡು ಹೋದರೆ, ನನಗೂ ಕಾಳುಕಡಿ ಸಿಗಲಿಕ್ಕಿಲ್ಲ” ಎಂದು ಸಿಡುಕಿತು. ಆದರೆ, ಕಾಗೆ ಛಲಬಿಡದ ತ್ರಿವಿಕ್ರಮನಂತೆ, ಪಾರಿವಾಳದ ಮನವೊಲಿಸಲು ಪ್ರಯತ್ನಿಸುತ್ತಲೇ ಇತ್ತು. ಕೊನೆಗೊಂದು ದಿನ ಪಾರಿವಾಳ, “”ಆಯಿತು ನೀನು ನನ್ನೊಂದಿಗೆ ಬಂದು ಕಿಟಕಿಯಲ್ಲಿ ಕುಳಿತುಕೊಳ್ಳಬಹುದು. ನಾವಿಬ್ಬರೂ ರಾಜಕೀಯವೋ, ಸಂಗೀತದ ವಿಷಯವೋ ಮಾತನಾಡುತ್ತ ಕುಳಿತುಕೊಳ್ಳಬಹುದು. ಆದರೆ, ಅವರು ನೀಡುವ ಆಹಾರದಲ್ಲಿ ನಾನು ನಿನಗೆ ಪಾಲು ಕೊಡುವುದಿಲ್ಲ” ಎಂದು ಹೇಳಿತು. ಮನದೊಳಗೆ ಬೇರೆಯೇ ಲೆಕ್ಕಾಚಾರ ಹಾಕಿದ ಕಾಗೆ, ಪಾರಿವಾಳದ ಮಾತಿಗೆ ಒಪ್ಪಿಗೆ ಸೂಚಿಸಿತು.
ಒಂದೆರಡು ದಿನ ಪಾರಿವಾಳದ ಜೊತೆಗೆ ಮಾತಿಗೆ ಕುಳಿತ ಕಾಗೆ ಮತ್ತೂಂದು ದಿನ ಅಲ್ಲಿಂದ ಕದಲಲೇ ಇಲ್ಲ. ಪಾರಿವಾಳವು ಬೇರೇನೂ ದಾರಿ ತೋಚದೇ ಸುಮ್ಮನಿತ್ತು. ಅಡುಗೆ ಮನೆಯಿಂದ “ಘಮ್’ ಎನ್ನುವ ಪರಿಮಳ ಬರುತ್ತಿರುವುದನ್ನು ಗಮನಿಸಿದ ಕಾಗೆಗೆ ತಳಮಳ ಶುರುವಾಯಿತು. ಅದು ಪಾರಿವಾಳವನ್ನು ಸರಿಸಿ, ಕಿಟಕಿಯ ಬಳಿ ಕೊಕ್ಕು ತೂರಿಸಿ ಮೀನು ಕರಿಯುತ್ತಿದ್ದ ಬಾಣಲೆಯನ್ನು ನೋಡಿತು. ಆಸೆಯನ್ನು ತಾಳಲಾರದೇ, “ಕಾ… ಕಾ’ ಎಂದು ಕಿರುಚಿತು.
ಅಡುಗೆಯಾಕೆ ಕಿಟಕಿಯಲ್ಲಿ ಕಾಗೆ ಕುಳಿತಿರುವುದನ್ನು ಕಂಡು ಬೆಚ್ಚಿ ಬಿದ್ದಳು. ಪಾರಿವಾಳವನ್ನು ಓಡಿಸಿ ಈ ಕಾಗೆ ಏತಕ್ಕೆ ಇಲ್ಲಿ ಬಂದಿದೆ ಎಂದು ಹುಬ್ಬುಗಂಟಿಕ್ಕುತ್ತಾ, ಪಕ್ಕದಲ್ಲೇ ಇಟ್ಟಿರುವ ಕವಣೆ ತೆಗೆದು ಬೀಸಿ ಒಗೆದಳು. ಕಾಗೆಯ ನೆತ್ತಿಗೆ ಕವಣೆಯ ಕಲ್ಲು ತಗುಲಿ ಅದು ನೆಲಕ್ಕುರುಳಿತು. ತನ್ನ ಮಾತು ಕೇಳದೇ ಅವಸರದಲ್ಲಿಯೇ ಅಪಾಯವನ್ನು ಆಹ್ವಾನಿಸಿಕೊಂಡ ಕಾಗೆಯ ಬಗ್ಗೆ ಪಾರಿವಾಳಕ್ಕೆ ಬಹಳ ಬೇಸರವಾಯಿತು. ತಾಳ್ಮೆಯಿಲ್ಲದ ಬಾಳಿನಲ್ಲಿ ಅಪಾಯ ಬೇಗನೇ ಬರುತ್ತದೆ. “ಅತಿಯಾಸೆ ಗತಿಕೇಡು’ ಎಂದು ಹಿರಿಯರು ಹೇಳಿರುವುದನ್ನು ಪಾರಿವಾಳ ಜ್ಞಾಪಿಸಿಕೊಂಡು ಅಡುಗೆ ಕೋಣೆಯ ಕಿಟಕಿಯ ಮೇಲೆ ಸುಮ್ಮನೇ ಕುಳಿತುಕೊಂಡಿತು.