Advertisement

ಸಮತೋಲನದಲ್ಲಿರಲಿ ಹಾರ್ಮೋನ್‌

11:21 PM May 20, 2019 | Sriram |

ಹಾರ್ಮೋನ್‌ನ ಅಸಮತೋಲನ ಹೆಚ್ಚಿನ ಮಹಿಳೆಯರನ್ನು ಕಾಡುವ ಸಮಸ್ಯೆ. ಇದು ದೇಹಕ್ಕೆ ಮಾತ್ರವಲ್ಲ ಮಾನಸಿಕ ನೆಮ್ಮದಿಯನ್ನೂ ಕಸಿದುಕೊಳ್ಳುತ್ತದೆ. ಇಂದಿನ ಜೀವನಶೈಲಿ, ಆಹಾರ ಕ್ರಮವೇ ಇದಕ್ಕೆ ಮುಖ್ಯ ಕಾರಣ. ಆಧುನಿಕತೆಗೆ ಒಗ್ಗಿಕೊಂಡು ಆರೋಗ್ಯದತ್ತ ಗಮನ ಹರಿಸದೇ ಇದ್ದಾಗ ಈ ಸಮಸ್ಯೆ ಕಂಡು ಬರುತ್ತದೆ. ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಹಾರ್ಮೋನ್‌ ಅನ್ನು ಸಮತೋಲನದಲ್ಲಿರಿಸಬಹುದು.

Advertisement

ಹೆಣ್ಣಿನ ಶರೀರದಲ್ಲಿ ಕಿಶೋರಾವಸ್ಥೆಯಿಂದ ವೃದ್ಧಾಪ್ಯದವರೆಗೂ ಹಲವಾರು ರೀತಿಯ ದೈಹಿಕ ಬದಲಾವಣೆಗಳಾಗುತ್ತವೆ. ಇದಕ್ಕೆ ಆಕೆಯ ಶರೀರ ಒಗ್ಗಿಕೊಳ್ಳುತ್ತದಾದರೂ, ಕೆಲವೊಮ್ಮೆ ಆರೋಗ್ಯದ ಏರುಪೇರಿಗೂ ಇದು ಕಾರಣವಾಗುವುದು. ಅದರಲ್ಲಿ ಮುಖ್ಯವಾಗಿ ಹಾರ್ಮೋನ್‌ನ ಅಸಮತೋಲನ.

ಹಾರ್ಮೋನ್‌ನಲ್ಲಿ ವ್ಯತ್ಯಾಸ ಹೆಣ್ಣು ಮಕ್ಕಳಲ್ಲಿ ಸಾಮಾನ್ಯ. ಇದಕ್ಕೆ ಕಾರಣಗಳು ಕೆಲವೊಮ್ಮೆ ವಂಶಪಾರಂಪರ್ಯವಾಗಿ ಬಂದರೆ, ಬಹುತೇಕ ಸಂದರ್ಭದಲ್ಲಿ ತಿನ್ನುವ ಆಹಾರ, ಜೀವನಶೈಲಿಯಿಂದಾಗಿರುತ್ತದೆ. ಆಧುನಿಕ ಕಾಲಘಟ್ಟದಲ್ಲಂತೂ ವಂಶಪಾರಂಪರ್ಯ ಎನ್ನುವುದಕ್ಕಿಂತ ಆಹಾರ, ಜೀವನಶೈಲಿಯೇ ಮುಖ್ಯ ಕಾರಣ.

ಹಾರ್ಮೋನ್‌ಗಳಲ್ಲಿ ವ್ಯತ್ಯಾಸವಾದರೆ ಹೆಣ್ಣು ಮಕ್ಕಳಲ್ಲಿ ದೈಹಿಕ, ಮಾನಸಿಕವಾಗಿ ಒಂದಲ್ಲ ಒಂದು ರೀತಿಯ ಸಮಸ್ಯೆ ಗಳನ್ನು ಎದುರಿಸಬೇಕಾಗುತ್ತದೆ. ಆರಂಭಿಕ ಹಂತದಲ್ಲೇ ಇದನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆದುಕೊಂಡರೆ ಜೀವನ ಸಲೀಸಾಗುತ್ತದೆ.

ಆರೋಗ್ಯಕರ ಜೀವನಶೈಲಿ
ವಿಟಮಿನ್‌ಯುಕ್ತ ಆಹಾರ ಸೇವಿಸುವುದು, ಫಾಸ್ಟ್‌ಫುಡ್‌, ಕರಿದ ತಿಂಡಿಗಳ ಅತಿಯಾದ ಸೇವನೆಯಿಂದ ದೂರವಿರುವುದು, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದೇ ಹಾರ್ಮೋನ್‌ ಸಮತೋಲನಕ್ಕೆ ಪ್ರಥಮ ಚಿಕಿತ್ಸೆ. ತಾಜಾ ಹಣ್ಣಗಳು, ತರಕಾರಿ ಅದರಲ್ಲೂ ಸೊಪ್ಪು ತರಕಾರಿ ಸೇವನೆ ಜಾಸ್ತಿಯಾಗಬೇಕು. ನೆಲ್ಲಿಕಾಯಿ, ಕಾಳುಗಳು, ಮೂಸಂಬಿ, ಖರ್ಜೂರ, ಸೇಬು ಮುಂತಾದ ಹಣ್ಣುಗಳು ಹಾರ್ಮೋನ್‌ ಸಮತೋಲನದಲ್ಲಿರಿಸಲು ಸಹ ಕಾರಿ.

Advertisement

ಲಕ್ಷಣಗಳು
ಹಾರ್ಮೋನ್‌ನಲ್ಲಿ ವ್ಯತ್ಯಾಸ ಕಿಶೋರಾವಸ್ಥೆಯಲ್ಲೇ ಕಾಣಿಸಿಕೊಳ್ಳುತ್ತದೆಯಾದರೂ, ಅತಿಯಾಗಿ ಕಾಡುವುದು 30ರಿಂದ 40 ವರ್ಷದೊಳಗಿನ ಮಹಿಳೆಯರಲ್ಲಿ. ವಯಸ್ಸಾದಂತೆ ಈ ಸಮಸ್ಯೆ ಹೆಚ್ಚಾಗುತ್ತದೆ. ಹಲವು ಸಮಯಗಳಿಂದ ಮುಟ್ಟಾಗದೇ ಇರುವುದು, ಆಯಾಸ, ಅಲರ್ಜಿ, ಕೂದಲು ಉದುರುವಿಕೆ, ಅನಗತ್ಯ ಕೂದಲು ಬೆಳೆಯುವುದು, ಹೆಚ್ಚಿನ ಅಥವಾ ಅನಿಯಮಿತ ರಕ್ತಸ್ರಾವ, ಗರ್ಭಧಾರಣೆ ಸಮಸ್ಯೆ, ಹಸಿವಾಗದಿರುವುದು, ತೂಕ ಹೆಚ್ಚಳ, ಚರ್ಮದ ಸಮಸ್ಯೆ, ಏಕಾಗ್ರತೆ ಕೊರತೆ, ನಿದ್ರಾಹೀನತೆ ಸಹಿತ ಹಲವಾರು ರೀತಿಯ ದೈಹಿಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಮಹಿಳೆಯರಲ್ಲಿ ಈಸ್ಟ್ರೋಜೆನ್‌ ಮತ್ತು ಪ್ರೊಜೆಸ್ಟೆರೋಜೆನ್‌ ಉತ್ಪಾದನೆಯಲ್ಲಿ ವ್ಯತ್ಯಾಸವಾದಾಗ ಹಾರ್ಮೋನ್‌ಗಳಲ್ಲಿ ಅಸಮತೋಲನವಾಗುತ್ತದೆ. ಇದರ ಉತ್ಪಾದನೆ ವ್ಯತ್ಯಾಸಕ್ಕೆ ಕಾರಣ ದೈಹಿಕ ಚಟುವಟಿಕೆ ಇಲ್ಲದಿರು ವುದು, ಅತಿಯಾದ ಗರ್ಭ ನಿರೋಧಕ ಮಾತ್ರೆ ಸೇವನೆ, ಮದ್ಯಪಾನ, ಧೂಮಪಾನ, ಕಾಫಿ, ಟೀಯ ಅತಿ ಯಾದ ಸೇವನೆ, ಬದಲಾದ ಆಧುನಿಕ ಜೀವನಶೈಲಿ, ಫಾಸ್ಟ್‌ ಫುಡ್‌ ಸೇವನೆಯೇ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ.

ದೈಹಿಕ ಚಟುವಟಿಕೆಯೇ ಮದ್ದು
ಇಂದು ದೇಹ ದಂಡನೆಗೆ ಅವಕಾಶ ಕೊಡದೆ ಬದುಕಲು ಸುಲಭದ ದಾರಿಗಳನ್ನಷ್ಟೇ ಹುಡುಕುತ್ತೇವೆ. ಇವು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಯಾವುದೇ ಶಾರೀರಿಕ ಕಾಯಿಲೆಗೆ ದೈಹಿಕವಾಗಿ ಚಟುವಟಿಕೆಯಿಂದಿರುವುದೇ ಉತ್ತಮ ಮದ್ದು. ಪ್ರತಿ ದಿನ ಯೋಗ, ಧ್ಯಾನ, ವ್ಯಾಯಾಮ ಮಾಡುವುದು, ಆದಷ್ಟು ನಡೆದಾಡುವುದು, ಮನೆಗೆಲಸ ಮಾಡುವುದು, ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಶಾರೀರಿಕ ನೋವುಗಳು ಶಮನವಾಗಿ ಆರೋಗ್ಯಕರ ಬದುಕು ಸಾಗಿಸಲು ಸಹಾಯಕವಾಗುತ್ತದೆ.

ಗುಳಿಗೆ ತಿನ್ನಬೇಡಿ
ಋತುಸ್ರಾವ, ಮಕ್ಕಳಾಗುವಿಕೆ ಈ ಸೃಷ್ಟಿಯಲ್ಲಿ ನೈಸರ್ಗಿಕವಾಗಿಯೇ ಬಂದಿರುವಂತಹದ್ದು. ಬೇಗನೇ ಮಕ್ಕಳು ಬೇಡವೆಂದು ಗರ್ಭ ನಿರೋಧಕ ಗುಳಿಗೆಗಳನ್ನು ಸೇವಿಸುವುದು, ಋತುಸ್ರಾವ ಮುಂದೆ ಹಾಕಲು ಗುಳಿಗೆ ಸೇವನೆ ಬೇಡವೇ ಬೇಡ. ಈ ಎರಡು ಪ್ರಕ್ರಿಯೆಗಳಿಂದ ಹಾರ್ಮೋನ್‌ ಏರುಪೇರು ಮಾತ್ರವಲ್ಲದೆ, ಜೀವನಪೂರ್ತಿ ದೈಹಿಕ ಸಮಸ್ಯೆಗೂ ಕಾರಣವಾಗುತ್ತದೆ. ದಿನಕ್ಕ 2- 3 ಲೀ. ನೀರು ಕುಡಿಯವುದು, ಯೋಗ, ಧ್ಯಾನದ ಮೇಲೆ ಗಮನ ಹರಿಸಿದರೆ ಹಾರ್ಮೋನ್‌ನ ಸಮತೋಲನ ಮಾಡಿಕೊಳ್ಳಬಹುದು.

ಹಾರ್ಮೋನ್‌ನಲ್ಲಿ ವ್ಯತ್ಯಾಸ ಬಹುತೇಕ ಎಲ್ಲ ವಯಸ್ಸಿನವರಲ್ಲೂ ಕಾಡುವಂತ ಸಮಸ್ಯೆಯಾಗಿದೆ. ಆಧುನಿಕ ಜೀವನಶೈಲಿ, ಆಹಾರ ಕ್ರಮವೇ ಇದಕ್ಕೆ ಮುಖ್ಯ ಕಾರಣ. ಆರಂಭಿಕ ಹಂತದಲ್ಲೇ ವೈದ್ಯರನ್ನು ಕಂಡು ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಸಮಸ್ಯೆ ಬಿಗಡಾಯಿಸುವುದನ್ನು ತಡೆಯಬಹುದು. ದಿನಂಪ್ರತಿ ವ್ಯಾಯಾಮ, ಯೋಗ ಮಾಡುವುದು ಅತ್ಯುತ್ತಮ ಪರಿಹಾರ.
– ಡಾ|ಸವಿತಾ,ವೈದ್ಯರು

 -ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next