ಮುಂಬೈ: ಬಾಲಿವುಡ್ ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಇಂದು ನಿಧನರಾಗಿದ್ದಾರೆ. ಕಾರ್ಡಿಯಾಕ್ ಅರೆಸ್ಟ್ ನಿಂದಾಗಿ ಇಂದು ನಸುಕಿನ ವೇಳೆ ಕೊನೆಯುಸಿರೆಳೆದರು ಎಂದು ಅವರ ಸೋದರ ಸಂಬಂಧಿ ಮನನೀಷ್ ಜಗ್ವಾನಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸರೋಜ್ ಖಾನ್ ಅವರಿಗೆ 72 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರಿಗೆ ತೀವ್ರ ಉಸಿರಾಟ ತೊಂದರೆ ಕಾಣಿಸಿದ ಕಾರಣ ಜೂನ್ 20 ರಂದು ಗುರುನಾನಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಹೃದಯಸ್ತಂಭನದಿಂದ ಮೃತಪಟ್ಟಿದ್ದು ಅವರಿಗೆ ಕೋವಿಡ್ ಸೋಂಕು ಇರಲಿಲ್ಲ ಎಂದು ವರದಿಯಾಗಿದೆ.
ಸರೋಜ್ ಖಾನ್ ರನ್ನು ಬಾಲಿವುಡ್ ಅಂಗಳದಲ್ಲಿ ಮಾಸ್ಟರ್ ಜೀ ಎಂದೇ ಕರೆಯಲಾಗುತ್ತಿತ್ತು. ತಮ್ಮ 3ನೇ ವಯಸ್ಸಿನಲ್ಲಿ ನಜರಾನಾ ಎಂಬ ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸುವ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. 1950 ರಲ್ಲಿ ಸಿನಿಮಾಗಳಲ್ಲಿನ ನೃತ್ಯ ತಂಡಗಳಲ್ಲಿ ಸಹ ನರ್ತಕಿಯಾಗಿ ಗುರುತಿಸಿಕೊಂಡರು.
ಮೂರು ಬಾರಿ ರಾಷ್ಟ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಅವರು, ಹಿಂದಿ ಸಿನಿಮಾ ಕ್ಷೇತ್ರದಲ್ಲಿ ಸ್ಮರಣೀಯ ಹಾಡುಗಳಿಗೆ ನೃತ್ಯಸಂಯೋಜನೇ ಮಾಡಿ ಜನಪ್ರೀಯರಾಗಿದ್ದರು. ದೇವದಾಸ್ ಸಿನಿಮಾದ ಡೋಲಾ ರೇ ಡೋಲಾ ಹಾಡಿನ ನೃತ್ಯ, ತೇಜಾಬ್ ಚಿತ್ರದ ಏಕ್ ದೋ ತೀನ್ ಹಾಡಿನ ನೃತ್ಯ ಸೇರಿದಂತೆ ಸುಮಾರು 2 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದರು.
ಇವರ ಅಂತ್ಯಕ್ರೀಯೆ ಮಾಲಾಡ್ ಮಾಲ್ವಾನಿಯಲ್ಲಿ ಇಂದು ಸಂಜೆ ನಡೆಯಲಿದೆ.