ಹುಬ್ಬಳ್ಳಿ : ಕಲಾಪದಲ್ಲಿ ವಿಪಕ್ಷ ನಾಯಕರು ವರ್ತಿಸಿದ ರೀತಿಯಿಂದ ತಮಗೆ ಬೇಸರವಾಗಿತ್ತು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದ ವದಂತಿಯ ಬಗ್ಗೆ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, “ಪರಿಷತ್ತಿನಲ್ಲಿ ವಿಪಕ್ಷ ನಾಯಕರು ನಡೆದುಕೊಂಡ ರೀತಿಯ ಬಗ್ಗೆ ನನಗೆ ಬೇಸರವಿದೆ. ನನ್ನ ತೇಜೋವಧೆ ಮಾಡುವ ರೀತಿಯಲ್ಲಿ ಮಾತನಾಡಿದ್ದರು. ಇದರಿಂದಾಗಿ ನನಗೆ ಬೇಸರವಾಗಿದ್ದು ಸತ್ಯʼʼ ಎಂದು ಹೇಳಿದ್ದಾರೆ.
ಆದರೆ ರಾಜೀನಾಮೆ ಕೊಡಲು ಪತ್ರ ಸಿದ್ದಪಡಿಸಿದ್ದ ವಿಚಾರದ ಬಗ್ಗೆ ಮಾತ್ರ ಅವರು ನಿರ್ದಿಷ್ಟವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಮಾನತು ವಿವಾದ : ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ಕರೆಯುವಂತೆ ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದ ಹೊರಟ್ಟಿ ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವುದಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕೆಂದು ಬಯಸಿದ್ದರು. ಆದರೆ ಅಧಿವೇಶನದ ಮೊದಲ ದಿನವೇ ಸಚಿವ ಭೈರತಿ ಬಸವರಾಜ್ ಅವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸೇರಿದಂತೆ 15 ಸದಸ್ಯರನ್ನು ಒಂದು ದಿನದ ಮಟ್ಟಿಗೆ ಹೊರಟ್ಟಿ ಅಮಾನತುಗೊಳಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಆಕ್ಷೇಪ ಏಕೆ : ಅಧಿವೇಶನದ ಕೊನೆಯ ದಿನವಾದ ಶುಕ್ರವಾರವೂ ಕಾಂಗ್ರೆಸ್ ನ ಕೆಲ ಸದಸ್ಯರು ಸಭಾಪತಿಯವರ ಕೊಠಡಿಗೆ ತೆರಳಿ ಬೇಸರವಾಗುವಂತೆ ಮಾತನಾಡಿದ್ದರು.
ಮತಾಂತರ ನಿಷೇಧ ಕಾಯಿದೆ ಮಂಡನೆ ವಿಚಾರದಲ್ಲಿ ನೀವು ಬಿಜೆಪಿಗೆ ಅನುಕೂಲವಾಗುವಂತೆ ನಡೆದುಕೊಳ್ಳುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ನೊಂದು ಹೊರಟ್ಟಿ ರಾಜೀನಾಮೆಗೆ ಮುಂದಾಗಿದ್ದರು. ಸಿಎಂ ಬೊಮ್ಮಾಯಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದ್ದಂತೆ ಹಲವರು ಮಧ್ಯಪ್ರವೇಶಿಸಿ ಹೊರಟ್ಟಿ ಮನವೊಲಿಸಿದ್ದರು.