ಮುಂಬಯಿ: ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರದ ಜಂಟಿ ಆಯೋಜನೆಯಲ್ಲಿ ಅಖೀಲ ಭಾರತ ಹೊರನಾಡ ಕನ್ನಡ ಸಂಘಗಳ ಏಳನೇ ಮಹಾಮೇಳವು ಎ. 8 ಮತ್ತು ಎ. 9ರಂದು ಎರಡು ದಿನಗಳ ಕಾಲ ಹೈದರಾಬಾದಿನ ಗಚ್ಚಿಬೌಲಿಯ ಮೌಲನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಆವರಣದಲ್ಲಿ ವಿವಿಧ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ದೇಶದಾದ್ಯಂತದ ಸುಮಾರು 450 ಮಂದಿ ಹೊರನಾಡ ಕನ್ನಡ ಸಂಘಗಳ ಪದಾಧಿಕಾರಿಗಳು ಎರಡು ದಿನ ಪಾಲ್ಗೊಂಡು ಮಹಾಮೇಳದ ಯಶಸ್ಸಿಗಾಗಿ ಸಹಕರಿಸಿದರು. ಹಿರಿಯ ಸಾಹಿತಿ, ಕವಿ ನಾಡೋಜ ಪ್ರೊ| ಕೆ. ಎಸ್. ನಿಸಾರ್ ಅಹಮದ್ ಅವರು ಮಹಾಮೇಳವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮಹಾಮೇಳದ ಅಧ್ಯಕ್ಷತೆಯನ್ನು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅವರು ವಹಿಸಿದ್ದರು.
ಬೀದರ್‌ನ ಪೂಜ್ಯಶ್ರೀ ಬಸವಾನಂದ ಸ್ವಾಮಿಗಳು ಹಾಗೂ ತೋಂಟದಾರ್ಯ ಮಠದ ಪೂಜ್ಯಶ್ರೀ ನಿಜಗುಣ ಪ್ರಭು ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಮಹಾಮೇಳವು ಉದ್ಘಾಟನೆಗೊಂಡಿತು. ಭಾಷಾ ಬಾಂಧವ್ಯ, ಮಹಿಳಾ ಅಂತಶಕ್ತಿ, ಕಲಾ ಪ್ರತಿಭೋತ್ಸವ, ಕವಿ ಮಿಲನ, ಗಡಿನಾಡು ಮತ್ತು ಹೊರನಾಡಿನಲ್ಲಿ ಕನ್ನಡ ಮತ್ತು ಕನ್ನಡಿಗರು ಹೀಗೆ ಐದು ಗೋಷ್ಠಿಗಳು ನಡೆದವು.
ಏಳನೇ ಮಹಾಮೇಳದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಗಡಿನಾಡ ಹಾಗೂ ಹೊರನಾಡ ಕನ್ನಡ ಶಾಲೆಗಳಿಗೆ ಕನ್ನಡದ ಬೆಳವಣಿಗೆಗೆ ಹೆಚ್ಚಿನ ಅನುದಾನ ನೀಡಲು ಸರಕಾರ ಬದ್ಧವಾಗಿದೆ ಎಂದು ಘೋಷಿಸಿದರು.
ಒಳನಾಡು ಕನ್ನಡ ಶಾಲೆ ಮತ್ತು ವಿದ್ಯಾರ್ಥಿಗಳಿಗೆ ನೀಡುವ ಎಲ್ಲ ಸವಲತ್ತುಗಳನ್ನು ಗಡಿ ಹಾಗೂ ಹೊರನಾಡು ಕನ್ನಡ ಶಾಲೆಗಳಿಗೂ ಒದಗಿಸಬೇಕು ಎಂಬ ಒಕ್ಕೊರಲಿನ ಆಗ್ರಹಗಳನ್ನೊಳಗೊಂಡ ನಾಲ್ಕು ನಿರ್ಣಯಗಳನ್ನು ಮಹಾ ಮೇಳದಲ್ಲಿ ಕೈಗೊಂಡು, ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಹಲಗತ್ತಿ ಮಂಡಿಸಿದ ನಿರ್ಣಯಗಳನ್ನು ಸಭೆಯು ಅನುಮೋದಿಸಿತು.
ಮುಂಬಯಿಯಿಂದ ಕನ್ನಡ ಭವನ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಎ. ಬಿ. ಶೆಟ್ಟಿ, ಉಪಾಧ್ಯಕ್ಷ ಡಿ. ಬಿ. ಅಮೀನ್, ಕೋಶಾಧಿಕಾರಿ ಪುರುಷೋತ್ತಮ ಪೂಜಾರಿ, ಮಾಟುಂಗ ಪೂರ್ವದ ಮುಂಬಯಿ ಕನ್ನಡದ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸತೀಶ್ ಎನ್. ಬಂಗೇರ, ಕೋಶಾಧಿಕಾರಿ ಸುಧಾಕರ ಸಿ. ಪೂಜಾರಿ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಶೋಕ್ ಸುವರ್ಣ ಮತ್ತು ದಯಾನಂದ ಬಂಗೇರ ಅವರು ಮಹಾಮೇಳದಲ್ಲಿ ಪಾಲ್ಗೊಂಡಿದ್ದರು.