Advertisement
ಬೇಸಗೆಯ ಬಿರು ಬಿಸಿಲು ಲೆಕ್ಕಿಸದೆ ಪುಟ್ಟ ಮಕ್ಕಳ ಜತೆ ಸ್ವಾತಂತ್ರ ಉದ್ಯಾನವನ ಹಾಗೂ ಸುತ್ತಮುತ್ತಲ ರಸ್ತೆ ಮಧ್ಯೆಯೆ ಸಾವಿರಾರು ಮಂದಿ ಸರಕಾರದ ಮನವಿಗೂ ಜಗ್ಗದೆ ಹೋರಾಟ ಮುಂದುವರಿಸಿದ್ದಾರೆ. ವೇತನ ಹೆಚ್ಚಿಸಿ, ಇಲ್ಲವೇ ಲಾಠಿ ಚಾರ್ಜ್ ಮಾಡಿಸಿ ಜೈಲಿಗೆ ಕಳುಹಿಸಿ ಎಂದು ಅವರು ಸರಕಾರಕ್ಕೆ ಸವಾಲು ಹಾಕಿದ್ದಾರೆ. ಕನಿಷ್ಠ 10 ಸಾವಿರ ರೂ. ವೇತನ ನಿಗದಿ ಬಗ್ಗೆ ಅಧಿಕೃತ ಆದೇಶ ಹೊರಡಿಸಬೇಕು ಎಂಬುದು ಅವರ ಬೇಡಿಕೆಯಾಗಿದೆ.
Related Articles
Advertisement
ಮುಖ್ಯಮಂತ್ರಿಯವರು ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡ ಮಾರುತಿ ಮಾನ್ಪಡೆ, ಬೇಡಿಕೆ ಈಡೇರಿಕೆಗೆ ಭರವಸೆ ದೊರೆತಿರುವುದರಿಂದ ಪ್ರತಿಭಟನೆ ವಾಪಸ್ ಪಡೆದಿರುವುದಾಗಿ ಘೋಷಿಸಿದರು. ಆದರೆ ಸಭೆಯಲ್ಲಿ ಭಾಗವಹಿಸಿದ್ದ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮೀ, ಉಪ ಚುನಾವಣೆ ಅನಂತರ ನಮ್ಮ ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಅದನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲುವುದಿಲ್ಲ. ಹಗಲಿರುಳು ಪ್ರತಿಭಟನೆ, ಧರಣಿ ಮುಂದುವರಿಯುತ್ತದೆ. ಯುಗಾದಿ ಹಬ್ಬವನ್ನೂ ಇಲ್ಲೇ ಆಚರಿಸುತ್ತೇವೆ ಎಂದು ಪ್ರಕಟಿಸಿದರು. ಪ್ರತಿ ಬಾರಿ ಪ್ರತಿಭಟನೆ ಮಾಡಿದಾಗಲೂ ಕೆಲವೇ ರೂ.ಗಳ ಗೌರವ ಧನ ಹೆಚ್ಚಳ ಮಾಡಿ ಅಂಗನವಾಡಿ ಕಾರ್ಯಕರ್ತೆಯರ ಬಾಯಿ ಮುಚ್ಚಿಸಲಾಗುತ್ತಿದೆ. ಕಳೆದ 26 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸರಕಾರ ಬೇಡಿಕೆಗಳ ಈಡೇರಿಕೆಗೆ ಒಪ್ಪುತ್ತಿಲ್ಲ. ಈ ಬಾರಿ ವೇತನ ಹೆಚ್ಚಳ ಮಾಡಿ ಸೇವಾ ನಿಯಮ ಸರಳಗೊಳಿಸಬೇಕು. ಅಲ್ಲಿಯವರೆಗೆ ಹೋರಾಟ ಹಿಂದೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಬಸವರಾಜ ಹೊರಟ್ಟಿ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವ ಸಿ.ಟಿ. ರವಿ, ಕಾಂಗ್ರೆಸ್ ವಿಧಾನಪರಿಷತ್ ಸದಸ್ಯರಾದ ವಿ.ಎಸ್. ಉಗ್ರಪ್ಪ, ಜಯಮಾಲಾ ಹಾಗೂ ಆಮ್ ಆದ್ಮಿ ಪಕ್ಷದ ನಾಯಕರು ಸಹಿತ ಹಲವಾರು ನಾಯಕರು ಪ್ರತಿಭಟನ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನನಿರತರ ಜತೆ ಚರ್ಚಿಸಿದರು.
ವಿಪಕ್ಷ ಬಿಜೆಪಿ ಐದು ವರ್ಷ ಅಧಿಕಾರ ನಡೆಸಿ ಕೇವಲ 700 ರೂ. ವೇತನ ಹೆಚ್ಚಿಸಿತ್ತು. ನಮ್ಮ ಸರಕಾರ ಪ್ರತಿವರ್ಷ 500 ರೂ.ನಂತೆ 4 ವರ್ಷಗಳಲ್ಲಿ 2,000 ರೂ. ವೇತನ ಹೆಚ್ಚಿಸಿದೆ. ಈ ವರ್ಷ ಒಂದು ಸಾವಿರ ರೂ. ಹೆಚ್ಚಿಸಿದೆ. ಕೇಂದ್ರ ಸರಕಾರ ಮೊದಲು ಶೇ.90ರಷ್ಟು ಅನುದಾನ ಕೊಡುತ್ತಿತ್ತು. ಈಗ ಶೇ.40ಕ್ಕೆ ಇಳಿಸಿದೆ. ಹೀಗಾಗಿ, ರಾಜ್ಯ ಸರಕಾರಕ್ಕೆ ಹೊರೆಯಾಗಿದೆ.ಸಿದ್ದರಾಮಯ್ಯ, ಮುಖ್ಯಮಂತ್ರಿ