Advertisement

ಟ್ರಾಫಿಕ್‌ ಜಂಜಾಟ ಕಡಿಮೆಯಾಗುವ ಆಶಯ

05:35 AM Dec 30, 2018 | Team Udayavani |

ವಿಟ್ಲ : ವಿಟ್ಲ ಪೇಟೆಯಿಂದ ಬೈಪಾಸ್‌ ರಸ್ತೆ ನಿರ್ಮಾಣವಾಗಿದ್ದು, ಟ್ರಾಫಿಕ್‌ ಜಂಜಾಟದ ಒಂದು ಅಂಶ ಕಡಿಮೆಯಾಗುವ ಭರವಸೆ ಹುಟ್ಟಿಸಿದೆ. ಕಳೆದ ಅನೇಕ ವರ್ಷಗಳ ಹೋರಾಟದ ಫಲವಾಗಿ ಪೇಟೆಯ ನಾಲ್ಕೂ ರಸ್ತೆಗಳ ವಿಸ್ತರಣೆಯ ಬಳಿಕ ವಾಹನ ಜಂಜಾಟ ಕಡಿಮೆಯಾಗಿದೆ. ಆದರೂ ಬೆಳಗ್ಗೆ ಮತ್ತು ಸಂಜೆ ಒತ್ತಡ ತಲೆದೋರುತ್ತಿದೆ. ಆಗಾಗ ರಸ್ತೆ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ವಾಹನ ಜಂಜಾಟವನ್ನು ಹೋಗಲಾಡಿಸಲು ಬೈಪಾಸ್‌ ರಸ್ತೆಯೂ ಅವಶ್ಯವೆಂದು ಮನಗಾಣಲಾಗಿತ್ತು. ಈ ನಡುವೆ ಪ.ಪಂ. ವತಿಯಿಂದ ನಗರೋತ್ಥಾನ ಅನುದಾನ ದಲ್ಲಿ ಒಂದು ರಸ್ತೆಯನ್ನು ಬೈಪಾಸ್‌ ರಸ್ತೆಯಾಗಿಸಿದೆ.

Advertisement

ಎಲ್ಲಿಂದ ಎಲ್ಲಿಗೆ?
ವಿಟ್ಲ ಜಂಕ್ಷನ್‌ನಿಂದ ಪುತ್ತೂರು ತೆರಳುವ ರಸ್ತೆಯ ಅಡ್ಡದಬೀದಿಯಲ್ಲಿ ಬಲಕ್ಕೆ ತಿರುಗಬೇಕು. ಅದಕ್ಕೆ ಅಡ್ಡದಬೀದಿ ರಸ್ತೆಯೆಂದೇ ಹೆಸರಿಸಲಾಗಿದೆ. ಅಡ್ಡದ ಬೀದಿ ರಸ್ತೆಯ ಕೊನೆಯಲ್ಲಿ ಬೃಹತ್‌ ಚರಂಡಿ ಸಾಗುತ್ತಿದೆ. ಮತ್ತು ಅಲ್ಲಿ ಅರಮನೆ ಕುಟುಂಬದ ಭೂಮಿಯಲ್ಲಿ ಕಾಲುದಾರಿ ಅರಮನೆ ರಸ್ತೆಯನ್ನು ಸಂಪರ್ಕಿಸುತ್ತಿತ್ತು. ಇದೀಗ ಚರಂಡಿಗೆ ಸೇತುವೆ ನಿರ್ಮಿಸಿ, ಕಾಲುದಾರಿಯನ್ನು ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಈ ಬೈಪಾಸ್‌ ರಸ್ತೆಯು ವಿಟ್ಲ ಜಂಕ್ಷನ್‌ನಿಂದ ಕಾಸರಗೋಡು ತೆರಳುವ ರಸ್ತೆಯನ್ನು ಎಂ.ಆರ್‌. ನಾಯಕ್‌ ಪೆಟ್ರೋಲ್‌ ಪಂಪ್‌ ಬಳಿ ಸೇರುತ್ತದೆ.

ಈ ರಸ್ತೆಗೆ ಒಟ್ಟು 25 ಲಕ್ಷ ರೂ. ಅನುದಾನ ಖರ್ಚಾಗಿದೆ. ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಮತ್ತು ಪ.ಪಂ. ಅಧ್ಯಕ್ಷ ಅರುಣ್‌ ಎಂ. ವಿಟ್ಲ ಅವರು ಚರ್ಚಿಸಿ, ನಿಗದಿಪಡಿಸಿದ ನಗರೋತ್ಥಾನ ಅನುದಾನ 20 ಲಕ್ಷ ರೂ. ಮತ್ತು 9 ಲಕ್ಷ ರೂ. ವೆಚ್ಚದ ಅನುದಾನ ಸೇತುವೆಗೆ ಬಳಸಲಾಗಿದೆ. ಅಡ್ಡದಬೀದಿ ರಸ್ತೆಯ ಒಂದು ಭಾಗ ಚರಂಡಿ ನಿರ್ಮಿಸಲಾಗಿದ್ದು, ಅದಕ್ಕೆ ಪ.ಪಂ. ಅನುದಾನ 5 ಲಕ್ಷ ರೂ. ಬಳಸಲಾಗಿದೆ.

ಸಂಚಾರ ಹೇಗೆ?
ಇದು ಸದ್ಯಕ್ಕೆ ಏಕಮುಖ ರಸ್ತೆಯೆನ್ನಬಹುದು. ಅಡ್ಡದಬೀದಿಯ ಚರಂಡಿಗೆ ಸ್ಲ್ಯಾಬ್‌ ಮುಚ್ಚುಗಡೆಯ ಬಳಿಕ ದ್ವಿಮುಖ ರಸ್ತೆಯನ್ನಾಗಿಸಬಹುದಾಗಿದೆ. ಆದರೆ ಲಾರಿ, ಬಸ್‌ ಅಥವಾ ಘನವಾಹನಗಳ ಸಂಚಾರ ಅಸಾಧ್ಯ. ಇಲ್ಲಿ ನಾಲ್ಕು ಚಕ್ರಗಳ ವರೆಗಿನ ವಾಹನ ಸಂಚಾರ ಸುಲಭ ಸಾಧ್ಯವಾಗಬಹುದು. ಆದುದರಿಂದ ಲಘು ವಾಹನಗಳನ್ನು ಗಮನದಲ್ಲಿಟ್ಟು ಸೂಕ್ತ ನಿಯಮ ಜಾರಿಗೆ ತಂದಲ್ಲಿ ದ್ವಿಮುಖ ರಸ್ತೆಯನ್ನಾಗಿಸಬಹುದು ಮತ್ತು ಪೇಟೆಯಲ್ಲಿ ವಾಹನ ಜಂಜಾಟ ಕಡಿಮೆಯಾಗಿ ಉಪಯುಕ್ತವೆನಿಸಬಹುದು. ಆದರೆ ಅಡ್ಡದಬೀದಿಯಲ್ಲಿ ರಿಕ್ಷಾ ನಿಲ್ದಾಣಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next