Advertisement

ಮನೆಗೊಂದು ಕಾಲು ದಾರಿ ಮಾಡಿಸಿಕೊಳ್ಳಲೂ ಹಿಂಜರಿದಿದ್ದರು !

06:35 AM Apr 10, 2018 | Team Udayavani |

ಕಾಪು: ನಾಲ್ಕು ಬಾರಿ ಶಾಸಕರಾಗಿ, ಸರಕಾರದ ಮುಖ್ಯ ಸಚೇತಕರಾಗಿ, ಎಲ್ಲ ಮುಖ್ಯಮಂತ್ರಿಗಳಿಗೂ ಬಹಳ ಆಪ್ತರಾಗಿದ್ದರೂ ತನಗಾಗಲೀ ಮನೆಗಾಗಲೀ ಕುಟುಂಬಕ್ಕಾಗಲೀ ಯಾವುದನ್ನೂ ಮಾಡದೇ ಕೇವಲ ಜನಸೇವೆ ಯನ್ನೇ ಗುರಿಯಾಗಿಸಿಕೊಂಡಿದ್ದ ಕಾಪು ಭಾಸ್ಕರ ಶೆಟ್ಟಿ ಕರಾವಳಿ ಕಂಡ ಅಪರೂಪದ ರಾಜಕಾರಣಿ. ಅವರ ರಾಜಕೀಯ, ಸಾಮಾಜಿಕ ಬದುಕಿನ ಬಗ್ಗೆ ಕುಟುಂಬದ ಸದಸ್ಯರು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.

Advertisement

ಜನಸೇವೆಯೇ ಜನಾರ್ದನ ಸೇವೆ ಎಂಬ ತಣ್ತೀಕ್ಕೆ ಅಂಟಿ ಕೊಂಡಿದ್ದ ಅವರು ತನ್ನ ಶಾಸಕತ್ವದ ಅವಧಿಯಲ್ಲಿ ಖಾಸಗಿ ಮತ್ತು ಕೌಟುಂಬಿಕ ಬದುಕಿನ ಆಶೆ-ಆಕಾಂಕ್ಷೆಗಳನ್ನೆಲ್ಲಾ ಬದಿಗಿಟ್ಟು ಜನರಿಗಾಗಿಯೇ ಬದುಕಿದವರು. ಆ ಕಾರಣ ದಿಂದಾಗಿಯೇ ಜನ ಅವರನ್ನು ಬಡವರ ಬಂಧು ಭಾಸ್ಕರ ಶೆಟ್ಟಿ ಎಂದೇ ಕರೆಯುತ್ತಿದ್ದರು. 1962ರಿಂದ 1983ರ ವರೆಗೆ ನಾಲ್ಕು ಬಾರಿ (ಪಿಎಸ್‌ಪಿ – 2 ಸಲ ಮತ್ತು  ಕಾಂಗ್ರೆಸ್‌ – 2 ಸಲ)ಶಾಸಕರಾಗಿ ಆಯ್ಕೆಯಾಗಿದ್ದ ಅವರು ಒಮ್ಮೆ ಪಕ್ಷೇತರರಾಗಿ, ಮತ್ತೂಮ್ಮೆ ಜನತಾದಳದಿಂದ ಸ್ಪರ್ಧಿಸಿದ್ದರು. ವಿಲಿಯಂ ಪಿಂಟೋ, ರತ್ನವರ್ಮ ಹೆಗ್ಗಡೆ, ಮುದ್ದು ಸುವರ್ಣ, ದಯಾನಾಥ ಕೋಟ್ಯಾನ್‌ ಮೊದಲಾದ ನಾಯಕರನ್ನು ಸೋಲಿಸಿ ಶಾಸಕರಾಗಿದ್ದು, ಬಳಿಕ ವಸಂತ ಸಾಲಿಯಾನ್‌ ಅವರ ಎದುರು ಸ್ಪರ್ಧಿಸಿ 2 ಸಲ ಸೋಲು ಕಂಡಿದ್ದರು. ಆ ಬಳಿಕ ಸಕ್ರಿಯ ರಾಜಕೀಯದಿಂದ ಹಿಂದೆ ಸರಿದಿದ್ದರು.

ಪತ್ನಿಯನ್ನು ಪಂ. ಸದಸ್ಯರನ್ನಾಗಿಸಿದ್ದೇ ಸಾಧನೆ 
4 ಸಲ ಶಾಸಕರಾಗಿದ್ದರೂ ತನಗಾಗಿ ಅಥವಾ ತನ್ನ ಕಟುಂಬಕ್ಕಾಗಿ ಸ್ವಂತ ಮನೆಯೊಂದನ್ನು ಕಟ್ಟಿಸಿಕೊಳ್ಳದೇ ಇದ್ದ ಅವರು ಚುನಾವಣೆಯಲ್ಲಿ ಸೋತ ಬಳಿಕ ಗೆಳೆಯರ ಒತ್ತಾಸೆಗೆ ಮಣಿದು ಅವರದ್ದೇ ಸಹಕಾರದೊಂದಿಗೆ ಕಾಪುವಿನಲ್ಲಿ ಮನೆ ನಿರ್ಮಿಸಿದ್ದರು. ಕುಟುಂಬಕ್ಕಾಗಿ ಮಾಡಿದ್ದ ದೊಡ್ಡ ಆಸ್ತಿಯೆಂದರೆ ಅದುವೇ. ಇನ್ನು ಪತ್ನಿ ವಾರಿಜಾ ಶೆಟ್ಟಿ ಅವರನ್ನು ಒಂದು ಅವಧಿಯಲ್ಲಿ ಮಜೂರು ಮಂಡಲ ಪಂಚಾಯತ್‌ನ ಸದಸ್ಯರನ್ನಾಗಿಸಿದ್ದು, ಅದೂ ಕೂಡ ಸಾಧನೆಯೇ ಆಗಿತ್ತು.

ವಂಶಾಡಳಿತ ರಾಜಕೀಯದಿಂದ ದೂರ
ಭಾಸ್ಕರ ಶೆಟ್ಟಿ ಅವರು 1993ರಲ್ಲಿ ಮೃತಪಟ್ಟಿದ್ದು, ತನ್ನ ಸಾವಿನವರೆಗೂ ಮಗನಿಗೆ ರಾಜಕೀಯದತ್ತ ಮೂಗು ತೂರಿಸುವ ಅವಕಾಶವನ್ನೇ ನೀಡಿರಲಿಲ್ಲವಂತೆ. ಮಲ್ಲಾರು ಗ್ರಾ.ಪಂ. ಅಸ್ತಿತ್ವಕ್ಕೆ ಬಂದ ಪ್ರಥಮದಲ್ಲೇ ಗ್ರಾ.ಪಂ. ಸದಸ್ಯನಾಗಿ, ಗ್ರಾ.ಪಂ. ಅಧ್ಯಕ್ಷನಾಗಿ ಅವಿರೋಧ ವಾಗಿ ಆಯ್ಕೆಯಾಗುವಲ್ಲಿ ತನ್ನ ಸ್ವಪ್ರಯತ್ನ ಮತ್ತು ತಂದೆಯ ಹೆಸರು ಕಾರಣವಾಗಿತ್ತು ಎನ್ನುತ್ತಾರೆ ಅವರ ಏಕೈಕ ಪುತ್ರ ಸುಬ್ರಹ್ಮಣ್ಯ ಶೆಟ್ಟಿ. ಆನಂತರದಲ್ಲಿ ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನ, ಕಾಪು ಸಿ.ಎ. ಬ್ಯಾಂಕ್‌ ಸಹಿತ ವಿವಿಧ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿದ್ದೇನೆ. ತಂದೆ ಎಲ್ಲೂ ವಂಶಾಡಳಿತ ರಾಜಕೀಯಕ್ಕೆ ಅವಕಾಶವನ್ನೇ ಮಾಡಿಕೊಟ್ಟಿರಲಿಲ್ಲ ಎನ್ನುತ್ತಾರೆ.

ವಾರಕ್ಕೊಮ್ಮೆ ಮನೆಯವರ ಭೇಟಿ
ತನ್ನೊಂದಿಗಿರುವ ಜನರನ್ನೇ ಹೆಚ್ಚಾಗಿ ನಂಬುತ್ತಿದ್ದ ಅವರು ಮನೆಯವರನ್ನು ಭೇಟಿ ಮಾಡುತ್ತಿದ್ದದ್ದು ವಾರಕ್ಕೊಮ್ಮೆ ಮಾತ್ರ. ಕಾಪುವಿನಲ್ಲಿ ಬಾಡಿಗೆ ಕೊಠಡಿ ಪಡೆದು ಅಲ್ಲಿಂದಲೇ ಜನಸೇವೆಗೈಯ್ಯುತ್ತಿದ್ದರು. ಕಾಪುವಿಗಿಂತ ಕೆಲವೇ ಅಂತರದ ದೂರದ ಮಲ್ಲಾರಿನಲ್ಲಿರುವ ತನ್ನ ಸ್ವಂತ ಮನೆಗೆ ಕನಿಷ್ಠ ಕಾಲುದಾರಿಯ ಸಂಪರ್ಕ ವ್ಯವಸ್ಥೆಯನ್ನು ಮಾಡಿಸಿಕೊಳ್ಳಲು ಕೂಡ ಅವರು ಹಿಂಜರಿದಿದ್ದರು. ಈ ಬಗ್ಗೆ ಯಾರಾದರೂ ಪ್ರಶ್ನಿದರೆ ನನಗೇನಿದ್ದರೂ ಜನರೇ ಮುಖ್ಯ, ಕುಟುಂಬವೇನಿದ್ದರೂ ಆನಂತರ ಎಂದು ನೇರವಾಗಿ ಪ್ರತಿಕ್ರಿಯಿಸುತ್ತಿದ್ದರಂತೆ.

Advertisement

ವಿಜಯೋತ್ಸವಕ್ಕೆ ಆನೆ ಮೆರುಗು
ಚುನಾವಣೆ ಗೆದ್ದ ಪ್ರತೀ ಸಂದರ್ಭಗಳಲ್ಲೂ ವಿಜಯೋತ್ಸವ ಮೆರವಣಿಗೆಗಳಲ್ಲಿ ಆನೆಯೇ ಮುಂಚೂಣಿ ಯಲ್ಲಿರುತ್ತಿತ್ತು. ಸಾವಿರಾರು ಮಂದಿ ಸ್ವಯಂ ಪ್ರೇರಿತರಾಗಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದರು. ಮೆರವಣಿಗೆಯ ಖರ್ಚನ್ನೂ ಕೂಡ ಜನರೇ ಭರಿಸುತ್ತಿದ್ದರು. ಇಂದು ತಂದೆಯ ಜೀವನ ಶೈಲಿಗೆ ಜನರು ನೀಡುತ್ತಿದ್ದ ಉಡುಗೊರೆಯಾಗಿತ್ತು ಎನ್ನುವುದನ್ನು ಸುಬ್ರಹ್ಮಣ್ಯ ಶೆಟ್ಟಿ ನೆನಪಿಸಿಕೊಳ್ಳುತ್ತಾರೆ.

ಮಗನ ಮದುವೆಗೆ ಸಿಎಂ ಬಂದ್ರು 
ಶಾಸಕನಾಗಿದ್ದ ಸಂದರ್ಭ ನಡೆದ ಪುತ್ರನ ಮದುವೆಗೆ ಮುಖ್ಯಮಂತ್ರಿ ಗುಂಡೂರಾವ್‌ ಸಹಿತ ಅನೇಕಾನೇಕ ರಾಜಕೀಯ ನಾಯಕರು ಬಂದಿದ್ದರು. ನಮಗೂ ಕೂಡ ಶಾಸಕರ ಸೊಸೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿತ್ತು ಎನ್ನುತ್ತಾರೆ ಸೊಸೆ ಶಾಂತಲತಾ ಶೆಟ್ಟಿ.

ಆಗ ಫ್ರೀ- ಈಗ ಕಮಿಷನ್‌!
ಆಗಿನದ್ದು ನೈಜ ಮತ್ತು ಪ್ರಾಮಾಣಿಕ ರಾಜಕೀಯ. ಜನಪ್ರತಿನಿಧಿಗಳಿಗೆ ಜನರೇ ದೇವರಾಗಿದ್ದರು. ಆದರೆ ಈಗಿನದ್ದು ಕಮಿಷನ್‌ ರಾಜಕೀಯ ಎಂಬಂತಾಗಿದೆ. ಅಂದು ಚುನಾವಣೆ ಬಂತೆಂದರೆ ಕಾರ್ಯಕರ್ತರು ಮನಃಪೂರ್ವಕ ಬರುತ್ತಿದ್ದರು. ಈಗ ಪ್ರತಿಯೊಂದಕ್ಕೂ ಹಣವೇ ಪ್ರಧಾನವಾಗಿದೆ ಎನ್ನುತ್ತಾರವರು.

ಭಾರೀ ಸ್ಟ್ರಿಕ್ಟ್ ನಮ್ಮಜ್ಜ !
ನಮ್ಮ ಅಜ್ಜ ಭಾರೀ ಸ್ಟ್ರಿಕ್ಟ್ ಆಗಿದ್ದರು. ಬೆಳಗ್ಗೆದ್ದು ವ್ಯಾಯಾಮ ಮಾಡುವುದರ ಜತೆಗೆ ನಮಗೂ ವ್ಯಾಯಾಮ ಮಾಡಿಸುತ್ತಿದ್ದರು. ದಿನಂಪ್ರತಿ ದೇವರ ಪ್ರಾರ್ಥನೆ, ಅವರ ಕಾಲಿಗೆ ನಮಸ್ಕರಿಸುವುದು, ಆಯುಷ್ಯ ವೃದ್ಧಿಗಾಗಿ ಪ್ರಾರ್ಥಿಸುವಂತೆ ಹೇಳುತ್ತಿದ್ದರು. ಇದೇಕೆ ಗೊತ್ತೆ? ಮಕ್ಕಳ ಮನಸ್ಸು ಶುದ್ಧ ಎಂಬುದಕ್ಕಾಗಿ. ಶಿಸ್ತು ಬದ್ಧ ಜೀವನಕ್ಕೆ ಹೆಸರಾಗಿದ್ದ ಅವರು ನಿತ್ಯ ಸುಗಂಧದ್ರವ್ಯ ಬಳಸುತ್ತಿದ್ದರು. ಯಾರಿಗೂ ಕೆಡುಕು ಬಯಸಿದವರಲ್ಲ. ಅವರ ಜೀವನಾದರ್ಶಗಳು ನಮಗೆಲ್ಲರಿಗೂ ಮಾದರಿ ಎಂದು ಮೊಮ್ಮಗಳು ಸ್ವಾತಿ ಅಜ್ಜನೊಂದಿಗೆ ಕಳೆದಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next