ಗಂಗಾವತಿ: ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಹೂಳಿನ ಸಮಸ್ಯೆಯಿಂದ ಅಚ್ಚುಕಟ್ಟು ಪ್ರದೇಶದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. 37 ಟಿಎಂಸಿ ಅಡಿ ಹೂಳಿರುವುದರಿಂದ ನೀರು ವ್ಯರ್ಥವಾಗಿ ಹರಿಯುತ್ತಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದ ಜಲಾಶಯಕ್ಕೆ ನೀರು ಹರಿದು ಬರುವುದು ಕಡಿಮೆಯಾಗಿದೆ. ಕಳೆದ ವರ್ಷ ಮಾತ್ರ ಉತ್ತಮ ಮಳೆಯಾಗಿದ್ದು ಸುಮಾರು 250 ಟಿಎಂಸಿ ಅಡಿ ನೀರು ನದಿ ಮೂಲಕ ಸಮುದ್ರ ಸೇರಿದೆ. ಜಲಾಶಯ ಹೂಳು ತೆಗೆದಿದ್ದರೆ ಅಷ್ಟೂ ನೀರನ್ನು ಜಲಾಶಯದಲ್ಲಿ ಸಂಗ್ರಹಿಸಬಹುದಾಗಿತ್ತು. ಸಮನಾಂತರ ಜಲಾಶಯ ನಿರ್ಮಿಸಿದ್ದರೂ ನೀರನ್ನು ಸಂಗ್ರಹಿಸಿ ರೈತರಿಗೆ ಸಹಾಯ ಮಾಡಬಹುದಿತ್ತು. ತುಂಗಭದ್ರಾ ಜಲಾಶಯ ಮತ್ತು ನದಿಯಿಂದ ಮೇಲ್ಮಟ್ಟದ ಕೆರೆಗಳ ಭರ್ತಿ ಮಾಡುವ ಯೋಜನೆಯನ್ನು ಸರಕಾರ ಘೋಷಣೆ ಮಾಡಿದ್ದು ಮಳೆಗಾಲದಲ್ಲಿ ಜಲಾಶಯಕ್ಕೆ ಬರುವ ನೀರನ್ನು ಸಮನಾಂತರ ಜಲಾಶಯಗಳ ನಿರ್ಮಿಸಿ ಸಂಗ್ರಹಿಸುವ ಅಗತ್ಯವಿದೆ.
ತುಂಗಭದ್ರಾ ಜಲಾಶಯದ ಹಿನ್ನೀರು ಸುಮಾರು 84 ಸಾವಿರ ಎಕರೆ ಪ್ರದೇಶದಲ್ಲಿ ನಿಲುಗಡೆಯಾಗುತ್ತದೆ. ಅವೈಜ್ಞಾನಿಕ ಗಣಿಗಾರಿಕೆ ಮತ್ತು ಜಲಾಶಯದ ಮೇಲ್ಮಟ್ಟದಲ್ಲಿ ಅಕ್ರಮ ಮರಳು ದಂಧೆ ಪರಿಣಾಮ ಜಲಾಶಯದಲ್ಲಿ ಹೂಳು ತುಂಬಿದೆ. ಈಗಾಗಲೇ ಸರಕಾರ ಹೂಳು ತೆಗೆಸುವ ವಿಚಾರದಲ್ಲಿ ನೇಮಿಸಿದ್ದ ತಜ್ಞರ ಸಮಿತಿ ಹೂಳು ತೆಗೆಯುವುದು ಅವೈಜ್ಞಾನಿಕ, ಜಲಾಶಯ ಎತ್ತರಿಸಬೇಕು. ಮಳೆಗಾಲದಲ್ಲಿ ನೀರು ಸಂಗ್ರಹಿಸಲು ಜಲಾಶಯದ ಕೆಳಭಾಗದಲ್ಲಿ ಸಮನಾಂತರ ಜಲಾಶಯ ನಿರ್ಮಿಸುವಂತೆ ಶಿಫಾರಸು ಮಾಡಿದೆ.
ಹಿಂದಿನ ರಾಜ್ಯ ಸರಕಾರ ಕನಕಗಿರಿ ತಾಲೂಕಿನ ನವಲಿ ಹತ್ತಿರ ಸಮನಾಂತರ ಜಲಾಶಯ ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಿದೆ. ಆಗಿನ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿ ಹೈದ್ರಾಬಾದ್‌ಗೆ ತೆರಳಿ ತೆಲಂಗಾಣ ಮತ್ತು ಆಂಧ್ರಪ್ರದೇಶ ಸರಕಾರಗಳ ಜತೆ ಮಾತುಕತೆ ನಡೆಸಿ ಒಪ್ಪಿಗೆ ಪಡೆಯಲಾಗಿತ್ತು. ಕೇಂದ್ರ ಸರಕಾರ ಒಪ್ಪಿಗೆ ಅನುದಾನ ಅಗತ್ಯವಾಗಿದ್ದು ರಾಯಚೂರು-ಕೊಪ್ಪಳ ಸಂಸದರು ಈ ನಿಟ್ಟಿನಲ್ಲಿ ಕಾರ್ಯ ಮಾಡಬೇಕಿದೆ.
Advertisement
ಹೂಳಿನ ಹೆಸರಲ್ಲೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು 20 ವರ್ಷಗಳಿಂದ ರಾಜಕೀಯ ಮಾಡುತ್ತ ಅಧಿಕಾರ ಅನುಭವಿಸಿವೆ. ಆದರೆ ರೈತರ ನೆರವಿಗೆ ಮಾತ್ರ ಯಾವ ಪಕ್ಷಗಳು ಬಂದಿಲ್ಲ. ಕಳೆದ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಗಂಗಾವತಿಗೆ ಆಗಮಿಸಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತುಂಗಭದ್ರಾ ಜಲಾಶಯದ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭಾಷಣದಲ್ಲಿ ರೈತರಿಗೆ ಭರವಸೆ ನೀಡಿದ್ದರು. ಶುಕ್ರವಾರ ಮಂಡನೆಯಾದ ಕೇಂದ್ರ ಸರಕಾರದ ಬಜೆಟ್‌ನಲ್ಲಿ ತುಂಗಭದ್ರಾ ಜಲಾಶಯ ಹೂಳು ಮತ್ತು ನವಲಿ ಹತ್ತಿರ ನಿರ್ಮಾಣ ಉದ್ದೇಶದ ಸಮನಾಂತರ ಜಲಾಶಯ ಕುರಿತು ಯಾವುದೇ ಪ್ರಸ್ತಾಪವಿಲ್ಲ.
Related Articles
ಪೋಲಾವರಂ ಯೋಜನೆಯಂತೆ ತುಂಗಭದ್ರಾಕ್ಕೂ ನೀಡಬೇಕಿದೆ ನೆರವು:
ಅಖಂಡ ಅಂಧ್ರಪ್ರದೇಶ ರಾಜ್ಯದ ಅತೀ ಮಹತ್ವದ ಪೋಲಾವರಂ ಯೋಜನೆ ನಿರ್ಮಾಣಕ್ಕೆ ಕೇಂದ್ರ ಸರಕಾರ ವಿಶೇಷ ಅನುದಾನ ನೀಡುವ ಮೂಲಕ ಯೋಜನೆ ಪೂರ್ಣಗೊಳಿಸಲು ಸಹಕಾರ ನೀಡಿದಂತೆ ತುಂಗಭದ್ರಾ ಜಲಾಶಯದ ಸಮಸ್ಯೆ ಇತ್ಯರ್ಥ ಮತ್ತು ಸಮನಾಂತರ ಜಲಾಶಯ ನಿರ್ಮಾಣ, ಕೃಷ್ಣ ಪೆನ್ನಾರ್ ತುಂಗಭದ್ರಾ ನದಿ ಜೋಡಣೆ ಕಾಮಗಾರಿಯನ್ನು ಕೇಂದ್ರ ಸರಕಾರವೇ ನಿರ್ವಹಿಸಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರು ತುಂಗಭದ್ರಾ ಜಲಾಶಯ ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ಮೋದಿ ಕಾರ್ಯಕ್ರಮ ರೂಪಿಸಲಿದ್ದು ಬಿಜೆಪಿ ಗೆಲುವು ಪಡೆದರೆ ದೆಹಲಿಗೆ ನಿಯೋಗ ತೆಗೆದುಕೊಂಡು ಹೋಗುವುದಾಗಿ ಭರವಸೆ ನೀಡಿದ್ದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ತುಂಗಭದ್ರಾ ಯೋಜನೆಯ ಪ್ರಸ್ತಾಪವೇ ಇಲ್ಲ.
•ಕೆ. ನಿಂಗಜ್ಜ
Advertisement