Advertisement

ಹಾಪ್‌ಕಾಮ್ಸ್‌ ವ್ಯಾಪಾರದ ಮೇಲೆ ನಿಗಾ

12:12 PM May 12, 2017 | |

ಬೆಂಗಳೂರು: ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಪಾರದರ್ಶಕ ವಹಿವಾಟಿಗೆ ಒತ್ತು ನೀಡುವುದು ಹಾಗೂ ಪ್ರತಿ ಮಳಿಗೆಯ ವಹಿವಾಟು ಹಾಗೂ ದಾಸ್ತಾನು ಕುರಿತು ಮಾಹಿತಿ ಪಡೆಯಲು ಕೇಂದ್ರೀಕೃತ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಪ್ರತಿ ಹಾಪ್‌ಕಾಮ್ಸ್‌ ಮಳಿಗೆಗೆ ಹೊಸ ತೂಕದ ಯಂತ್ರ(ವೇಯಿಂಗ್‌ ಮೆಷನ್‌)ಗಳ ಅಳವಡಿಕೆ ಕಾರ್ಯ ಆರಂಭವಾಗಿದ್ದು, ಸದ್ಯದಲ್ಲೇ ನೂತನ ವ್ಯವಸ್ಥೆ ಜಾರಿಗೆ ಬರಲಿದೆ.

Advertisement

ಯಾವ ಮಳಿಗೆಗೆ ಎಷ್ಟು ದಾಸ್ತಾನು ಪೂರೈಕೆಯಾಗಿದೆ. ಅದರಲ್ಲಿ ಎಷ್ಟು ಮಾರಾಟವಾಗಿದೆ. ಆಯಾ ದಿನದ ಅಂತ್ಯಕ್ಕೆ ಉಳಿದಿರುವ ಹಣ್ಣು-ತರಕಾರಿಗಳ ಪ್ರಮಾಣ ಎಷ್ಟು ಎಂಬಿತ್ಯಾದಿ ಮಾಹಿತಿ ಆನ್‌ಲೈನ್‌ನಲ್ಲೇ ಪಡೆಯುವುದು ಹಾಗೂ ವಹಿವಾಟಿನ ಮೇಲೆ ನಿಗಾ ಇಡುವುದು ಇದರ ಮೂಲ ಉದ್ದೇಶ.  

ನಗರದ ವಿವಿಧ ಬಡಾವಣೆಗಳಲ್ಲಿ ಇರುವ 275 ಮಳಿಗೆಗಳು ಹಾಗೂ ಬೆಂಗಳೂರಿನ ಕೇಂದ್ರ ಕಚೇರಿಯ ಗೋದಾಮು ಸೇರಿದಂತೆ ಚನ್ನಪಟ್ಟಣ, ಕನಕಪುರ, ಮಾಗಡಿ, ದೊಡ್ಡಬಳ್ಳಾಪುರ, ಮಾಲೂರು, ಸರ್ಜಾಪುರದ ಗೋದಾಮುಗಳಲ್ಲಿ 25 ತೂಕದ ಯಂತ್ರಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ.

ಈ ತೂಕದ ಯಂತ್ರಗಳಲ್ಲಿ 30ರಿಂದ 300 ಕೆಜಿ ವರೆಗೂ ಅಳತೆ ಮಾಡಬಹುದಾಗಿದೆ. ಮಳಿಗೆಗಳಲ್ಲಿ 30 ಕೆಜಿ ಯಷ್ಟು ಹಣ್ಣು, ತರಕಾರಿಗಳನ್ನು ಹಾಗೂ ಉಗ್ರಾಣಗಳಲ್ಲಿ 300 ಕೆಜಿ ವರೆಗೆ ತೂಕ ಮಾಡಬಹುದಾದ ಯಂತ್ರಗಳನ್ನು ಅಳವಡಿಸಲಾಗಿದೆ.  ಈ ಎಲ್ಲ ತೂಕದ ಯಂತ್ರಗಳು ಆನ್‌ಲೈನ್‌ ವ್ಯವಸ್ಥೆಗೆ ಸಂಪರ್ಕಗೊಳ್ಳುತ್ತವೆ.  ಅಂಗಡಿಯಲ್ಲಿ ನಡೆದ ವಹಿವಾಟಿನ ಸಂಪೂರ್ಣ ಮಾಹಿತಿಯನ್ನು ಆ ಕ್ಷಣದಲ್ಲಿಯೇ ಹಾಪ್‌ಕಾಮ್ಸ್‌ ಕೇಂದ್ರ ಕಚೇರಿಯಲ್ಲಿ ಅಳವಡಿಸಲಾಗಿರುವ  ಕೇಂದ್ರೀಕೃತ ಮೇಲ್ವಿಚಾರಣೆ ಕೊಠಡಿಗೆ ರವಾನೆಯಾಗಲಿದೆ. 

ಪಾರದರ್ಶಕ ವಹಿವಾಟು: ಹಾಪ್‌ಕಾಮ್ಸ್‌ ಮಳಿಗೆ ಗಳಲ್ಲಿ ಅತ್ಯಂತ ಪಾರದರ್ಶಕವಾಗಿ ವಹಿವಾಟು ನಡೆಯುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದರಿಂದ ಎಲ್ಲ ಕಡೆಗಳಲ್ಲೂ ಏಕರೂಪ ದರ, ಪ್ರತಿ ದಿನ ನಡೆಯುವ ವಹಿವಾಟು, ಯಾವ ಹಣ್ಣು, ತರಕಾರಿಗೆ ಬೇಡಿಕೆ ಇದೆ ಎಂಬ ಮಾಹಿತಿಯು ಕೇಂದ್ರ ಕಚೇರಿಗೆ ಆನ್‌ಲೈನ್‌ ಮೂಲಕ ತಲುಪಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

ಮಳಿಗೆಯನ್ನು ಮಾರಾಟ ವ್ಯವಸ್ಥಾಪಕ ಯಾವುದೇ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ. ಹಣ್ಣು -ತರಕಾರಿ ಬೆಲೆ ಒಬ್ಬೊಬ್ಬರಿಗೆ ಒಂದೊಂದು ದರದಲ್ಲಿ ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ಇದರಿಂದ ಗ್ರಾಹಕರಿಗೆ ಹಾಪ್‌ಕಾಮ್ಸ್‌ ಮೇಲೆ ನಂಬಿಕೆ ಹೆಚ್ಚಲಿದೆ ಎಂದು ಹೇಳುತ್ತಾರೆ.

ಸುಧಾರಣೆಗೆ ಅನುಕೂಲ: ಹಾಪ್‌ಕಾಮ್ಸ್‌ ಮಳಿಗೆ ಯಲ್ಲಿ ಆಯಾ ದಿನದ ಸಂಪೂರ್ಣ ವಹಿವಾಟು ಹಾಗೂ ದಾಸ್ತಾನು ಪ್ರಮಾಣ ಕ್ಷಣಮಾತ್ರದಲ್ಲಿ ಕೇಂದ್ರ ಕಚೇರಿ ತಲುಪುವುದರಿಂದ ಹಾಪ್‌ಕಾಮ್ಸ್‌ ಮಳಿಗೆಗಳ ವಹಿವಾಟ ಮತ್ತಷ್ಟು ಸುಧಾರಿಸಲು ಸಾಧ್ಯವಾಗಲಿದೆ ಎನ್ನುತ್ತಾರೆ ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ ಹೇಳಿದ್ದಾರೆ.

ಹಾಪ್‌ಕಾಮ್ಸ್‌ನಲ್ಲಿ ಕಾರ್ಬೈಡ್‌ ಮುಕ್ತ ಮಾವು ಮಾರಾಟ
ಬೆಂಗಳೂರು:
ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಕಾರ್ಬೈಡ್‌ ಮುಕ್ತ ಮಾವು ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಜಿ.ಆರ್‌.ಶ್ರೀನಿವಾಸ್‌ ಹೇಳಿದರು. ಗುರುವಾರ ಹಾಪ್‌ಕಾಮ್ಸ್‌ ಸಂಸ್ಥೆ ಉಗ್ರಾಣಗಳಲ್ಲಿ ಮಾವು ಹಣ್ಣು ಮಾಡುವ ಪ್ರಕ್ರಿಯೆ ಕುರಿತು ವಿವರಣೆ ನೀಡಿದ ಅವರು, “ರೈತರಿಂದ ಬಲಿತ ಮಾವಿನ ಕಾಯಿಯನ್ನು ಸಂಸ್ಥೆ ಖರೀದಿಸುತ್ತದೆ. ನಂತರ ಹಾಪ್‌ಕಾಮ್ಸ್‌ ಉಗ್ರಾಣಗಳಲ್ಲಿ ಭತ್ತದ ಹುಲ್ಲು ಮತ್ತು ಎಥಿಲಿನ್‌ ಬಳಸಿ ಹಣ್ಣು ಮಾಡಲಾಗುತ್ತದೆ. ಕಾರ್ಬೈಡ್‌ನಿಂದ ಹಣ್ಣು ಮಾಡುವ ಪದ್ಧತಿಯನ್ನು ಅನುಸರಿಸುವುದಿಲ್ಲ. ಗ್ರಾಹಕರಿಗೆ ಈ ಬಗ್ಗೆ ಅನುಮಾನ ಬೇಡ,’ ಎಂದರು. 

ಪ್ರತಿದಿನ ವಿವಿಧೆಡೆಗಳಿಂದ ನೂರಾರು ರೈತರು ಮಾವನ್ನು ತರುತ್ತಾರೆ. ಕಾರ್ಬೈಡ್‌ನಿಂದ ಹಣ್ಣು ಮಾಡಿಸಿ ತರುವ ಸಾಧ್ಯತೆಗಳು ಇವೆ ಎಂಬ ಕಾರಣಕ್ಕೆ ಕಾಯಿ ಆಗಿರುವಾಗಲೇ ಮಾವನ್ನು ಖರೀದಿಸಿ ಸಂಸ್ಥೆಯೇ ನೈಸರ್ಗಿಕವಾಗಿ ಹಣ್ಣು ಮಾಡಿಸಿ ಹಾಪ್‌ಕಾಮ್ಸ್‌ ಗ್ರಾಹಕರಿಗೆ ಒದಗಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ,  ಪ್ರಧಾನ ವ್ಯವಸ್ಥಾಪಕ ಪ್ರಶಾಂತ್‌ ಮತ್ತಿತರರು ಇದ್ದರು.

ಹಾಪ್‌ಕಾಮ್ಸ್‌ ಮಳಿಗೆಗಳಿಗೆ ವೈರ್‌ಲೆಸ್‌ ವ್ಯವಸ್ಥೆಯ ತೂಕದ ಯಂತ್ರ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಈಗಾಗಲೇ ಮಳಿಗೆಗಳ ಮಾರಾಟಗಾರರಿಗೆ ಯಂತ್ರವನ್ನು ಬಳಸುವ ಕುರಿತು ತರಬೇತಿ ನೀಡಲಾಗುತ್ತಿದೆ. 15 ದಿನಗಳಲ್ಲಿ ಆನ್‌ಲೈನ್‌ ತೂಕದ ಯಂತ್ರಗಳು ಕಾರ್ಯಾರಂಭ ಮಾಡಲಿವೆ.
-ಎನ್‌.ಡಿ.ದಯಾನಂದ, ಪ್ರಧಾನ ವ್ಯವಸ್ಥಾಪಕ(ಅಭಿವೃದ್ಧಿ), ಹಾಪ್‌ಕಾಮ್ಸ್‌

* ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next