ಮೈಸೂರು: ರೈತರಿಂದ ಟ್ರ್ಯಾಕ್ಟರ್ ಸಾಲ ವಸೂಲಾತಿ ಮಾಡಲು ಬ್ಯಾಂಕ್ ಅಧಿಕಾರಿಗಳ ಗೂಂಡಾಗಳಂತೆ ವರ್ತಿಸುತ್ತಿರುವುದನ್ನು ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ ನಡೆಯಿತು. ನಗರದ ನಜರ್‌ಬಾದ್‌ನಲ್ಲಿರುವ ಜಿಲ್ಲಾ ಪಿಕಾರ್ಡ್ ಬ್ಯಾಂಕ್ ಬಳಿ ಬುಧವಾರ ಸಮಾವೇಶಗೊಂಡ ನೂರಾರು ರೈತರು, ಬ್ಯಾಂಕ್ ಅಧಿಕಾರಿಗಳ ವರ್ತನೆ ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ರೈತರ ಬೆಳೆಸಾಲ ಮನ್ನಾ ಮಾಡಿ ಇತರೆ ಸಾಲಗಳನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿತ್ತು. ಅಲ್ಲದೇ ರೈತರು ಬರಗಾಲ ಹಾಗೂ ಅತಿವೃಷ್ಟಿ ಹೊಡೆತಕ್ಕೆ ಸಿಲುಕಿ ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಾಲ ತೀರಿಸುವುದಾದರೂ ಹೇಗೆ?
ಈಗ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ವಸೂಲಾತಿಗಾಗಿ ನೋಟಿಸ್ ನೀಡಿದ್ದು, ಪಿಕಾರ್ಡ್ ಬ್ಯಾಂಕ್ ಅಧಿಕಾರಿಗಳು ವಸೂಲಾತಿ ನೆಪದಲ್ಲಿ ರೈತರನ್ನು ಅವಮಾನಿಸುತ್ತಿದ್ದಾರೆ. ಇದು ಖಂಡನೀಯ ಎಂದು ಕಿಡಿಕಾರಿದರು. ವಸೂಲಾತಿ ತಂಡ ಖಾಲಿ ಚೆಕ್ ಅನ್ನು ರೈತರಿಗೆ ವಾಪಸ್ ನೀಡಬೇಕು. ವಸೂಲಾತಿಗಾಗಿ ದಬ್ಟಾಳಿಕೆ, ಗುಂಡಾವರ್ತನೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ವಿಳಂಬ: ಭತ್ತ ಖರೀದಿ ಕೇಂದ್ರ ಆರಂಭಿಸುವ ಕಾರ್ಯ ವಿಳಂಬ ಮಾಡುವುದು ಕುತಂತ್ರದ ನೀತಿಯಾಗಿದೆ. ರೈತರ ಭತ್ತ ಕಡಿಮೆ ಬೆಲೆಗೆ ಮಾರಾಟ ಮಾಡಿ ಖಾಲಿಯಾಗಿದೆ. ಸರ್ಕಾರದ ಇಂತಹ ನೀತಿಯಿಂದಲೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಮೋಜು: ಜಲಪಾತೋತ್ಸವ ಮಾಡುವ ಮೋಜಿನ ಕಾರ್ಯಕ್ರಮಕ್ಕೆ ಬದಲಾಗಿ ಅನವಶ್ಯಕವಾಗಿ ನೀರನ್ನು ತಮಿಳುನಾಡಿಗೆ ಹರಿಸುವ ಬದಲು ಅಚ್ಚುಕಟ್ಟು ಭಾಗದ ನಾಲೆಗಳಿಗೆ ನೀರು ಹರಿಸಿ ಕೆರೆಕಟ್ಟೆಗಳನ್ನು ತುಂಬಿಸಿ. ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸಿ ಎಂದು ಒತ್ತಾಯಿಸಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಸಾಲ ವಸೂಲಾತಿ ನೆಪದಲ್ಲಿ ಗೂಂಡಾ ವರ್ತನೆ ಮಾಡದಂತೆ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಕಾರ್ಯದರ್ಶಿ ಕಿರಗಸೂರ್ ಶಂಕರ್, ಕುರುಬೂರು ಸಿದ್ದೇಶ್, ರಂಗಸಮುದ್ರ ಸುರೇಶ್, ಬಿ.ಪಿ.ಪರಶಿವಮೂರ್ತಿ, ರಂಗಸಮುದ್ರ ರೇವಣ್ಣ, ರಂಗರಾಜ್, ಮಹದೇವ ಪ್ರಸಾದ್ ಇತರರಿದ್ದರು.
ಬಜೆಟ್‌ನಲ್ಲಿ ಸಾಲಮನ್ನಾ ಗೊಂದಲ ನಿವಾರಿಸಿ: ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಮಾರ್ಚ್‌ನಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ರೈತರ ಸಾಲಮನ್ನಾ ಗೊಂದಲ ನಿವಾರಿಸಬೇಕು. ಕೃಷಿ ಉತ್ಪನ್ನಗಳಿಗೆ ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ತು.