ಹೊಳಲ್ಕೆರೆ: ಸಂವಿಧಾನದ ಪರಿಕಲ್ಪನೆ ಹಾಗೂ ಕಾನೂನುಗಳ ಮಹತ್ವದ ಅರಿವಿಲ್ಲದೇ ಇರುವುದರಿಂದ ಗ್ರಾಮೀಣ ಪ್ರದೇಶ ಜನರು ಕಾನೂನುಬದ್ಧವಾಗಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪ್ರತಿಯೊಬ್ಬರಿಗೂ ಕಾನೂನು ಮತ್ತು ಸಂವಿಧಾನ ಮಹತ್ವಗಳ ಅರಿವು ಮೂಡಿಸುವುದು ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೇಮಾ ವಸಂತ ರಾವ್ ಪವಾರ್ ಹೇಳಿದರು.
ತಾಲೂಕಿನ ಬೋರೆನಹಳ್ಳಿ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಕಾನೂನು ಸಾಕ್ಷರತಾ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಬದ್ಧವಾಗಿ ಎಲ್ಲರೂ ಸರ್ವ ಸಮಾನರು. ಸಂವಿಧಾನಬದ್ಧವಾಗಿರುವ ಹಕ್ಕುಗಳನ್ನು ಅನುಭವಿಸುವ ನಾವು, ಕರ್ತವ್ಯಗಳನ್ನೂ ತಪ್ಪದೇ ಪಾಲನೆ ಮಾಡಬೇಕೆಂದರು. ಜನರನ್ನು ಅಕ್ಷರಸ್ಥರನ್ನಾಗಿ ಮಾಡಿ ನ್ಯಾಯಿಕ ಸೌಲಭ್ಯಗಳನ್ನು ಮನೆಬಾಗಿಲಿಗೆ ತಲುಪಿಸಬೇಕಿದೆ. ಈ ನಿಟ್ಟಿನಲ್ಲಿ ತಾಲೂಕಿನ ಕುಗ್ರಾಮಗಳಿಗೆ ಕಾನೂನು ಸಾಕ್ಷರತಾ ಅಭಿಯಾನದ ಮೂಲಕ ನ್ಯಾಯಾಧಿಧೀಶರು, ನ್ಯಾಯವಾದಿಗಳು, ಸರ್ಕಾರಿ ಅಧಿಕಾರಿಗಳು ತೆರಳಿ ಜನರಲ್ಲಿ ಕಾನೂನು ಅರಿವು ಮೂಡಿಸುತ್ತಿದ್ದಾರೆ. ಜನನ ಮತ್ತು ಮರಣ, ಐಎಂವಿ, ಅಸ್ತಿ ಹಕ್ಕು, ಜೀವನಾಂಶ, ಮಾಹಿತಿ ಹಕ್ಕು ಅಧಿನಿಯಮ, ಮೂಲಭೂತ ಹಕ್ಕುಗಳು, ನೋಂದಣಿ ಕಾಯ್ದೆ, ಅಳತೆ ಗಡಿ ಗುರುತಿನ ಕಾಯ್ದೆ, ಮಹಿಳಾ ಶೋಷಣೆ, ಮಕ್ಕಳ ಹಕ್ಕುಗಳ ರಕ್ಷಣೆ, ಫೋಕ್ಸೋ, ಪೊಲೀಸ್ ಕಾಯ್ದೆ ಸೇರಿದಂತೆ ವಿವಿಧ ಸಾಮಾನ್ಯ ಕಾನೂನುಗಳ ಬಗ್ಗೆ ತಿಳಿಸಿಕೊಡಲಾಗುತ್ತಿದೆ ಎಂದರು.
ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ವಿ. ರವಿಕುಮಾರ್ ಮಾತನಾಡಿ, ಕಾನೂನು ಜನರ ಪಾಲಿಗೆ ಕಬ್ಬಿಣದ ಕಡಲೆ ಎನ್ನುವ ಭಾವನೆ ಇದೆ. ಉಳ್ಳವರ ಪರ ನ್ಯಾಯ ಎನ್ನುವ ಕಲ್ಪನೆ ಸರಿಯಲ್ಲ. ನೊಂದ ಪ್ರತಿಯೊಬ್ಬರೂ ನ್ಯಾಯವನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಕಾನೂನುಬದ್ಧವಾಗಿ ಜೀವನ ನಡೆಸಲು ಸಾಮಾನ್ಯ ಕಾನೂನಿನ ಅರಿವು ಹೊಂದಿರಬೇಕು ಇಲ್ಲವಾದಲ್ಲಿ ಅನ್ಯಾಯ, ಶೋಷಣೆ, ಅಪರಾಧಗಳಿಗೆ ಸಿಲುಕಿಕೊಂಡು ತೊಂದರೆ ಪಡಬೇಕಾಗುತ್ತದೆ. ಹಾಗಾಗಿ ಯುವಕರು, ಮಹಿಳೆಯರು ಕಾನೂನಿನ ಸಾಮಾನ್ಯ ಜ್ಞಾನ ಪಡೆದುಕೊಳ್ಳಲು ಕಾನೂನು ಸಾಕ್ಷರತಾ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಜಿ.ಈ. ರಂಗಸ್ವಾಮಿ ಮಾತನಾಡಿ, ತಾಲೂಕಿನಲ್ಲಿರುವ ಪ್ರತಿಯೊಬ್ಬರೂ ಕಾನೂನುಬದ್ಧ ಜೀವನ ನಡೆಸಲು ಅನುವಾಗುವಂತೆ ಕಾನೂನು ಸಾಕ್ಷರತೆಯನ್ನು ಬಿತ್ತಲಾಗುತ್ತಿದೆ. ಸಾರ್ವಜನಿಕರು ಸಾಕ್ಷರತಾ ಅಭಿಮಾನದ ಸದುಪಯೋಗ ಪಡೆಯಬೇಕು ಎಂದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ. ಶಿವಮೂರ್ತಿ ಮಾತನಾಡಿ, ಕಾನೂನಿನ ಅರಿವಿಲ್ಲದೆ ಜನರು ಸಾಕಷ್ಟು ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದರು. ಇತ್ತೀಚೆಗೆ ಕಾನೂನಿನ ಅರಿವು ಜನರಲ್ಲಿ ಮೂಡುತ್ತಿದೆ. ಮೋಟಾರು ವಾಹನ ಕಾಯ್ದೆಯಡಿ ಬರುವ ವಾಹನಗಳ ಮಾಲೀಕರು ಕಡ್ಡಾಯವಾಗಿ ಡಿಎಲ್, ವಿಮೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಜಯಸಿಂಹ, ಹಿರಿಯ ವಕೀಲರಾದ ಜಿ.ಎಚ್. ಶಿವಕುಮಾರ್, ಆರ್.ಎಂ. ಓಂಕಾರಮೂರ್ತಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಆರ್. ಜಗದೀಶ್, ತಾಪಂ ಸದಸ್ಯ ಪರಮೇಶ್ವರಪ್ಪ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವಕೀಲರಾದ ಎಸ್. ವೇದಮೂರ್ತಿ, ಬಿ.ಎನ್ .ಪ್ರಶಾಂತ್, ಕೆ. ಸತ್ಯನಾರಾಯಣ, ರಮೇಶ್, ಪಿ.ಆರ್. ರವಿ, ಟಿ. ವಿಜಯ್, ಪ್ರಕಾಶ್, ಎಂ.ಪ್ರಸನ್ನಕುಮಾರ್, ಆರ್. ಹನುಮಂತಪ್ಪ, ಬಸವರಾಜ್ ಮತ್ತಿತರರು ಪಾಲ್ಗೊಂಡಿದ್ದರು.