ಹೊಳಲ್ಕೆರೆ: ವೈದ್ಯೋ ನಾರಾಯಣೋ ಹರಿಃ ಎನ್ನುವ ನುಡಿಯಂತೆ ವೈದ್ಯರು ಜನರ ಆರೋಗ್ಯ ಕಾಪಾಡುವ ದೇವರಾಗಿದ್ದಾರೆ. ಆರೋಗ್ಯವಂತ ಸಮಾಜ ನಿರ್ಮಾಣದ ಹೊಣೆ ಅರಿತು ಕೆಲಸ ಮಾಡಬೇಕು ಎಂದು ಶಾಸಕ ಎಂ.ಚಂದ್ರಪ್ಪ ಕರೆ ನೀಡಿದರು.
ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ವಿಶ್ವಾಸ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಶೇ. 20 ರಷ್ಟು ವೈದ್ಯಕೀಯ ಕ್ಷೇತ್ರಕ್ಕೆ ಅನುದಾನವನ್ನು ಮೀಡಲಿಟ್ಟಿದೆ. ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಹೃದಯಕ್ಕೆ ಅಳವಡಿಸುವ ಸ್ಟಂಟ್‌ಗಳ ಬೆಲೆಯನ್ನು 2 ಲಕ್ಷದಿಂದ 20 ಸಾವಿರಕ್ಕೆ ತರಲಾಗಿದೆ. 50 ರೂ. ಮೌಲ್ಯದ ಮಾತ್ರೆಯನ್ನು 10 ರೂಪಾಯಿಗೆ ದೊರೆಯುವಂತೆ ಮಾಡಲು ಜನೌಷಧ ಕೇಂದ್ರಗಳನ್ನು ಆರಂಭಿಸಿದೆ. ಆಯುಷ್ಮಾನ್ ಯೋಜನೆ ಜಾರಿಗೆ ತಂದು 5 ಲಕ್ಷದವರೆಗೆ ಉಚಿತವಾಗಿ ಆರೋಗ್ಯ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಹಳ್ಳಿಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿವೆ. ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿ ವಾಜಪೇಯಿಯವರು ದೇಶದ ನಾಗರಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ‘ಮನೆಬಾಗಿಲಿಗೆ ಆರೋಗ್ಯ’ಎನ್ನುವ ಯೋಜನೆಯನ್ನು ಜಾರಿಗೆ ತಂದಿದ್ದರು.
ಆ ಮೂಲಕ ಸಂಚಾರಿ ಆರೋಗ್ಯ ವಾಹನಗಳನ್ನು ನೀಡುವ ಮೂಲಕ ಮನೆಬಾಗಿಲಿನಲ್ಲಿ ಆರೋಗ್ಯಕ್ಕೆ ಪೂರಕ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದರು ಎಂದು ಸ್ಮರಿಸಿದರು. ಪಟ್ಟಣ ಪಂಚಾಯತ್ ಸದಸ್ಯರಾದ ಕೆ.ಸಿ. ರಮೇಶ್, ಬಿ.ಎಸ್. ರುದ್ರಪ್ಪ, ಪಿ.ಎಚ್. ಮುರುಗೇಶ್, ವಿಜಯ್, ಪಿ.ಆರ್. ಮಲ್ಲಿಕಾರ್ಜುನ್, ಅಶೋಕ್, ಎಚ್.ಆರ್.ನಾಗರತ್ನ ವೇದಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ| ಜಯಸಿಂಹ, ಗ್ರಾಪಂ ಅಧ್ಯಕ್ಷ ನಾಗ ನಾಯ್ಕ, ಕುಮಾರ್,
ಮರುಳಸಿದ್ದೇಶ್, ಆರೋಗ್ಯ ಸಹಾಯಕರಾದ ಚಂದ್ರಶೇಖರ್ ನಾಯ್ಕ, ಸಂತೋಷಕುಮಾರ್ ಮತ್ತಿತರರು ಇದ್ದರು.