ಬೆಂಗಳೂರು: ಹುಕ್ಕಾ ನಿಷೇಧ ವನ್ನು ನ್ಯಾಯಾಲಯದ ಮುಂದೆ ಸಮರ್ಥಿಸಿ ಕೊಂಡಿರುವ ಸರಕಾರ, ಸಾರ್ವಜನಿಕರ ಹಿತದೃಷ್ಟಿ ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ರಾಜ್ಯದಲ್ಲಿ ಹುಕ್ಕಾ ನಿಷೇಧಿ ಸಲಾಗಿದೆ ಎಂದು ಹೈಕೋರ್ಟ್‌ಗೆ ತಿಳಿಸಿದೆ.
ಹುಕ್ಕಾ ನಿಷೇಧ ಪ್ರಶ್ನಿಸಿ ಆರ್.ಭರತ್ ಮತ್ತಿತರರು ಸಲ್ಲಿಸಿರುವ ಅರ್ಜಿಗಳನ್ನು ನ್ಯಾ| ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠದ ವಿಚಾರಣೆ ನಡೆಸಿತು. ಅರ್ಜಿದಾರರು ಮತ್ತು ಸರಕಾರದ ವಾದವನ್ನು ಆಲಿಸಿದ ನ್ಯಾಯ ಪೀಠ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ಇದಕ್ಕೂ ಮೊದಲು ವಿಚಾರಣೆ ವೇಳೆ ಸರಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಸಂವಿಧಾನದ ಕಲಂ 47ರಡಿ ಅಧಿಕಾರ ಚಲಾಯಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ಬಗೆಯ ಹುಕ್ಕಾ ಮಾರಾಟ, ಸೇವನೆ, ದಾಸ್ತಾನು, ಜಾಹೀರಾತು ಮತ್ತು ಉತ್ತೇಜಿಸುವುದನ್ನು ನಿಷೇಧಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಹುಕ್ಕಾ ಬಾರ್‌ಗಳಲ್ಲಿ ಹುಕ್ಕಾ ಜತೆಗೆ ಇತರ ಎಲ್ಲ ಸೇವೆಗಳನ್ನು ನೀಡಲಾಗಿತ್ತು. ಹುಕ್ಕಾ ಸೇವನೆಗೆ ಪ್ರತ್ಯೇಕ ಪ್ರದೇಶ ನಿಗದಿ ಮಾಡಿರಲಿಲ್ಲ. ಬಾರ್‌ಗಳಲ್ಲಿ ಎಲ್ಲೆಡೆ ಹುಕ್ಕಾ ಸೇವನೆಗೆ ಅವಕಾಶ ನೀಡಲಾಗುತ್ತಿತ್ತು. ಹಾಗಾಗಿ ಇದು ಹುಕ್ಕಾ ಸೇವನೆ ಮಾಡುವವರು ಮಾತ್ರವಲ್ಲದೆ, ಇತರ ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿತ್ತು ಎಂದರು.
ಹುಕ್ಕಾ ನಿಷೇಧಿಸುವ ಮಸೂದೆಗೆ ಎರಡೂ ಸದನಗಳು ಅನುಮೋದನೆ ನೀಡಿದ್ದು, ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಬೇಕಿದೆ ಎಂದ ಅಡ್ವೊಕೇಟ್ ಜನರಲ್, ಮಸೂದೆಗೆ ಮುನ್ನವೇ ಸಾರ್ವಜನಿಕ ಹಿತದೃಷ್ಟಿಯಿಂದ ಸರಕಾರ ಅಧಿಸೂಚನೆ ಹೊರಡಿಸಲಾಗಿದ್ದು, ಅದು ಸಂವಿಧಾನದ ಕಲಂ 162ರಡಿ ಊರ್ಜಿತವಾಗುತ್ತದೆ ಎಂದು ವಿವರಿಸಿದರು.