Advertisement

Hookah ban: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

10:01 PM Mar 12, 2024 | Team Udayavani |

ಬೆಂಗಳೂರು: ಹುಕ್ಕಾ ಬಳಕೆ ಅತಿರೇಕದ ಹಂತ ತಲುಪುವ ಮೊದಲೇ ಸರ್ಕಾರ ಸ್ಥಿತಿಯನ್ನು ನಿಭಾಯಿಸಿದ್ದರೆ ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಬಹುದಿತ್ತು. 20 ವರ್ಷಗಳ ಹಿಂದೆ ಈ ನಿಯಂತ್ರಣ-ನಿಷೇಧ ಇದೆಲ್ಲ ಎಲ್ಲಿತ್ತು ಎಂದು ಮಾರ್ಮಿಕವಾಗಿ ಪ್ರಶ್ನಿಸಿರುವ ಹೈಕೋರ್ಟ್‌, ಅತಿರೇಕವಾದ ನಂತರ ಎಚ್ಚೆತ್ತುಕೊಂಡಿದ್ದೀರಾ ಎಂದು ಸರ್ಕಾರಕ್ಕೆ ಚಾಟಿ ಕೊಟ್ಟಿದೆ.

Advertisement

ಇದೇ ವೇಳೆ ಗೋಬಿ ಮಂಚೂರಿ ವಿಚಾರವನ್ನೂ ಪ್ರಸ್ತಾಪಿಸಿರುವ ಹೈಕೋರ್ಟ್‌, ಬಣ್ಣ ಮಿಶ್ರಣ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಇಂದಲ್ಲ, 25 ವರ್ಷದ ಹಿಂದೆಯೇ ಇತ್ತು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅದಕ್ಕೆ ನಿಷೇಧ ವಿಧಿಸಲಾಗಿದೆ. ಗೋಬಿ ಮಂಚೂರಿಯಲ್ಲಿ ಬಳಸುವ ಬಣ್ಣವನ್ನು ಬಟ್ಟೆ ತೊಳೆಯಲು ಅವರು ಬಳಸುತ್ತಾರೆ ಎಂದೂ ಹೇಳಿತು.

ರಾಜ್ಯದಲ್ಲಿ ಎಲ್ಲ ರೀತಿಯ ಹುಕ್ಕಾ ಉತ್ಪನ್ನಗಳ ಮಾರಾಟ, ಬಳಕೆ ಮತ್ತು ಸಂಗ್ರಹಣೆಯನ್ನು ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಹುಕ್ಕಾ ನಿಷೇಧಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಾದವನ್ನು ಆಲಿಸಿದ ಬಳಿಕ ತೀರ್ಪನ್ನು ಕಾಯ್ದಿರಿಸುವ ಮೊದಲು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಹುಕ್ಕಾಬಾರ್‌ ಸೇವೆ ನೀಡಲು ಯಾವುದೇ ಗೊತ್ತುಪಡಿಸಿದ ಪ್ರದೇಶವನ್ನು ನಿಗದಿಪಡಿಸಿಲ್ಲ. ಆದರೆ ಧೂಮಪಾನ ಸೇವನೆ ಪ್ರದೇಶದಲ್ಲಿ ಹುಕ್ಕಾವನ್ನು ಸೇವಿಸಬಾರದಾದರೂ, ಬಾರ್‌ಗಳಲ್ಲಿ ಹುಕ್ಕಾ ಸೇವನೆಗೆ ಅವಕಾಶ ನೀಡಲಾಗಿದೆ ಎಂದರು.

ಅಲ್ಲದೆ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಹುಕ್ಕಾ ನಿಷೇಧಿಸಲಾಗಿದೆ. ಹುಕ್ಕಾ ನಿಷೇಧ ಕುರಿತಾದ ಅಧಿಸೂಚನೆಯ ಜತೆಗೆ ಮಸೂದೆಯನ್ನೂ ಸದನದಲ್ಲಿ ಪಾಸ್‌ ಮಾಡಲಾಗಿದೆ. ಹುಕ್ಕಾ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗೆಂದು ನಾವು ಸಿಗರೇಟು ಬಳಕೆಗೆ ಉತ್ತೇಜನ ನೀಡಿದಂತಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

Advertisement

ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಹುಕ್ಕಾಗೆ ನಿಷೇಧ ವಿಧಿಸಲು ಸರ್ಕಾರಕ್ಕೆ ಅಧಿಕಾರವಿದೆ. ಸಂವಿಧಾನದ 47ನೇ ವಿಧಿಯ ಅನ್ವಯ ಸಾರ್ವಜನಿಕ ಆರೋಗ್ಯ ಸುಧಾರಿಸಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳುವ ಹೊಣೆಗಾರಿಕೆ ಹೊಂದಿದೆ ಎಂದು ಪ್ರತಿಪಾದಿಸಿದ್ದರು.

ಅರ್ಜಿದಾರರ ಪರ ವಕೀಲರು, ಸಿಗರೇಟುಗಳು ಮತ್ತು ಇತರ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ ಮತ್ತು ವ್ಯಾಪಾರ, ವಹಿವಾಟು, ಉತ್ಪಾದನೆ, ಪೂರೈಕೆ ಮತ್ತು ಹಂಚಿಕೆ ಕಾಯಿದೆ 2003 (ಸಿಒಟಿಪಿಎ) ಕೇಂದ್ರ ಸರ್ಕಾರದ ಕಾನೂನಾಗಿದ್ದು ಇಲ್ಲಿ ಹುಕ್ಕಾ ನಿಷೇಧಕ್ಕೆ ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಆಹಾರ ಪೂರೈಸದ ನಿರ್ದಿಷ್ಟ ಸ್ಥಳಗಳಲ್ಲಿ ಹುಕ್ಕಾ ಸೇದಲು ಅವಕಾಶವಿದೆ ಎಂದು ವಾದಿಸಿದ್ದರು.

ಅಲ್ಲದೆ ಹುಕ್ಕಾ ನಿಷೇಧವು ಸಂವಿಧಾನದ 14ನೇ ವಿಧಿಯಡಿ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ. ಇದು ಸಿಗರೇಟು ಉತ್ಪಾದಕರ ಪರವಾಗಿದೆ. ಹುಕ್ಕಾ ಅಮಲು ಪಾನೀಯ ಅಥವಾ ಮಾದಕ ವಸ್ತುವಲ್ಲ. ಹುಕ್ಕಾ ನಿಷೇಧದಿಂದ ಸಂವಿಧಾನದ 14ನೇ ವಿಧಿ ಉಲ್ಲಂಘನೆಯಾಗಿದೆ. ಒಮ್ಮೆ ಗ್ರಾಹಕರ ಹುಕ್ಕಾ ನಿಷೇಧಿಸಿದರೆ ಅವರು ಸಿಗರೇಟು ಸೇದಲಿದ್ದಾರೆ? ಹುಕ್ಕಾದಲ್ಲಿ ಕನಿಷ್ಠ ಹರ್ಬಲ್‌ ಸಾರ ಸೇದುತ್ತಾರೆ. ಆದರೆ ಯಾವುದೇ ತೆರನಾದ ಹರ್ಬಲ್‌ ಸಿಗರೇಟು ಇಲ್ಲ (ತಂಬಾಕನ್ನೇ ಸೇದಬೇಕು) ಎಂದರು.

Advertisement

Udayavani is now on Telegram. Click here to join our channel and stay updated with the latest news.

Next